“ಮಗೂ, ಇಲ್ಲಿರುವ ಪುಟ್ಟ ಗಿಡ ನನ್ನ ಕೊನೆಯ ಕುಡಿ. ಅದನ್ನು ಕಾಪಾಡು…’ ಇನ್ನೇನು ಧನದಾಹಿಗಳ ಕ್ರೌರ್ಯ, ಅಟ್ಟಹಾಸಕ್ಕೆ ಸಿಲುಕಿ ಧರೆಗುರುಳುವ ಗಂಧದ ಮರದ ಹೀಗೊಂದು ಆಂತರ್ಯದ ಧ್ವನಿ ಕೇಳಿದ ಪುಟ್ಟ ಹುಡುಗಿಯ ಹೃದಯವನ್ನು ತಟ್ಟುತ್ತದೆ. ಕೂಡಲೇ ಆ ಹುಡುಗಿ ತನ್ನ ಪುಟ್ಟ ಕೈಗಳಲ್ಲಿ ಗಂಧದ ಗಿಡವನ್ನು ಹಿಡಿದು ಕಾಡುಗಳ್ಳರಿಂದ ತಪ್ಪಿಸಿಕೊಂಡು ಹೋಗುತ್ತಾಳೆ.
ತನ್ನ ಜೊತೆ ಮರ ಮಾತನಾಡಿತು, ತನ್ನ ನೋವುಗಳನ್ನು ಹೇಳಿಕೊಂಡಿತು ಎಂಬ ಈಕೆಯ ಮಾತುಗಳನ್ನು ಆರಂಭದಲ್ಲಿ ಕೆಲವರು ನಿರ್ಲಕ್ಷಿಸಿದರೂ, ನಂತರ ಪ್ರಯೋಗಕ್ಕೆ ಮುಂದಾಗುತ್ತಾರೆ. ಹಾಗಾದರೆ, ನಿಜವಾಗಿಯೂ ಮರ ಮಾತನಾಡುತ್ತದೆಯಾ? ತನ್ನ ಮೇಲಾಗುವ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆಯಾ? ಮರ ನಿಜವಾಗಿಯೂ ಮಾತಾಡೋಕೆ ಸಾಧ್ಯನಾ?
ಅದಕ್ಕೆ ವೈಜ್ಞಾನಿಕ ಪುರಾವೆ ಇದೆಯಾ? ಇಂಥ ಪ್ರಶ್ನೆಗಳಿಗೆ ಒಂದಷ್ಟು ಉತ್ತರ ಸಿಗುವುದು ಕ್ಲೈಮ್ಯಾಕ್ಸ್‌ನಲ್ಲಿ. ಇದು ಈ ವಾರ ತೆರೆಗೆ ಬಂದಿರುವ “ಗಂಧದ ಕುಡಿ’ ಚಿತ್ರದ ಒಂದಷ್ಟು ಹೈಲೈಟ್ಸ್. ಒಂದೆಡೆ ಮರಗಳ ಮಾರಣ ಹೋಮ, ಮತ್ತೂಂದೆಡೆ ಪರಿಸರ ವಿನಾಶ ಈ ಎರಡೂ ವಿಷಯಗಳನ್ನು ಮಕ್ಕಳ ಮೂಲಕ ಹೇಳುವ ಪ್ರಯತ್ನ “ಗಂಧದ ಕುಡಿ’ಯಲ್ಲಿ ಆಗಿದೆ.
ಇಲ್ಲಿ ಹೇಳುವ ಎರಡೂ ವಿಷಯಗಳು ಪ್ರಸ್ತುತವಾದರೂ, ಅದು ಚಿತ್ರರೂಪದಲ್ಲಿ ಪರಿಣಾಮಕಾರಿಯಾಗಿ ಬಂದಿದೆಯಾ ಎನ್ನುವುದೇ ಇಲ್ಲಿರುವ ಪ್ರಶ್ನೆ. ಹೇಳಿ-ಕೇಳಿ ಸಿನಿಮಾ ಎನ್ನುವುದು ಮನರಂಜನಾ ಮಾಧ್ಯಮ. ಇದರ ಮೂಲ ಆಶಯವೇ ಮನರಂಜನೆ. ಹಾಗಾಗಿ ವಾಸ್ತವಿಕ ನೆಲೆಗಟ್ಟಿನಲ್ಲಿ ಮನರಂಜನೆಯ ಜೊತೆಗೆ ಅಲ್ಲಿ ಸಂದೇಶ ಹೇಳಬಹುದುದೇ ಹೊರತು,
ವಾಸ್ತವಾಂಶ ಮತ್ತು ಬರೀ ಸಂದೇಶವನ್ನೇ ಹೇಳುತ್ತಾ ಹೋದರೆ ಅದು ಅದು ಚಲನಚಿತ್ರವಾಗುವ ಬದಲು ಸಾಕ್ಷ್ಯಚಿತ್ರವಾಗುತ್ತದೆ. ಅಂಥದ್ದೇ ಗೊಂದಲದ ಅನುಭವ “ಗಂಧದ ಕುಡಿ’ಯಲ್ಲಿ ನೋಡುಗರಿಗೂ ಆಗುತ್ತದೆ. ಆದರೂ ಒಂದು ಪ್ರಯತ್ನವಾಗಿ ಚಿತ್ರ ಇಷ್ಟವಾಗುತ್ತದೆ. ಚಿತ್ರದಲ್ಲಿ ಬರುವ ಎರಡು-ಮೂರು ಪಾತ್ರಗಳನ್ನು ಹೊರತುಪಡಿಸಿದರೆ, ಬಹುತೇಕ ಕಲಾವಿದರ ಅಭಿನಯ ಮನಸ್ಸಿಗೆ ತಟ್ಟುವುದಿಲ್ಲ.
ಕಾಡಿನ ಸೊಬಗಿದ್ದರೂ, ವೃತ್ತಿಪರತೆಯ ಕೊರತೆ ಕಾಡುತ್ತದೆ. ದೃಶ್ಯ ಜೋಡಣೆ, ಸಂಭಾಷಣೆ, ನಿರೂಪಣೆ ಎಲ್ಲವೂ ಇದು ಮಕ್ಕಳ ಚಿತ್ರ ಎನ್ನುವುದನ್ನು ಪದೇ ಪದೇ ನೆನಪು ಮಾಡಿಕೊಡುತ್ತದೆ. ಚಿತ್ರದ ಛಾಯಾಗ್ರಹಣ ಪಶ್ಚಿಮ ಘಟ್ಟದ ಹಸಿರನ್ನು ಸೊಗಸಾಗಿ ಕಟ್ಟಿಕೊಟ್ಟಿದೆ. ಸಂಕಲನ ಕಾರ್ಯ ಪರವಾಗಿಲ್ಲ ಎನ್ನಬಹುದು. ನಾಡು, ನುಡಿ, ಪರಿಸರದ ಕುರಿತಾದ ಹಾಡುಗಳಿವೆ. ಒಟ್ಟಾರೆ ಬೇಸಿಗೆಯ ರಜೆಯಲ್ಲಿರುವ ಮಕ್ಕಳಿಗೆ “ಗಂಧದ ಕುಡಿ’ ಹೇಳಿ ಮಾಡಿಸಿದಂತಿದೆ.
ಚಿತ್ರ: ಗಂಧದ ಕುಡಿ
ನಿರ್ಮಾಣ: ಸತ್ಯೇಂದ್ರ ಪೈ, ಕೃಷ್ಣ ಮೋಹನ್ ಪೈ
ನಿರ್ದೇಶನ: ಸಂತೋಷ್ ಶೆಟ್ಟಿ ಕಟೀಲ್
ತಾರಾಗಣ: ರಮೇಶ್ ಭಟ್, ಶಿವಧ್ವಜ್, ಜ್ಯೋತಿ ರೈ, ಅರವಿಂದ್ ಶೆಟ್ಟಿ, ದೀಪಕ್ ಶೆಟ್ಟಿ, ಯೋಗೀಶ್ ಕೊಟ್ಯಾನ್, ಜಿ.ಪಿ ಭಟ್, ಬೇಬಿ ನಿಧಿ ಎಸ್ ಶೆಟ್ಟಿ ಮತ್ತಿತರರು.
* ಜಿ.ಎಸ್ ಕಾರ್ತಿಕ ಸುಧನ್