ಕಾಡಿಗೆ ಅಂಟಿಕೊಂಡೇ ಇದ್ದ ಒಂದು ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕಾಡಜ್ಜ ಸೌದೆ ಮಾರಿ ಜೀವನ ಸಾಗಿಸುತ್ತಿದ್ದ. ಅದರಲ್ಲಿಯೇ ಸ್ವಲ್ಪ ಹಣ ಉಳಿಸಿ ಸಸಿಗಳನ್ನು ತಂದು ನೆಡುತ್ತಿದ್ದ. ತಂದು ನೆಟ್ಟ ಗಿಡಗಳು ಬೆಳೆದು ಕಾಡನ್ನು ಸಮೃದ್ಧಗೊಳಿಸಿತ್ತು. ಇದ್ದಕ್ಕಿದ್ದಂತೆ ಅರಣ್ಯ ಇಲಾಖೆ ಈ ಕಾಡನ್ನು ರಕ್ಷಿತಾರಣ್ಯವೆಂದು ಘೋಷಣೆ ಮಾಡಿತು. ಗಿಡಮರಗಳನ್ನು ಕಡಿಯದಂತೆ ಕಟ್ಟುನಿಟ್ಟಾದ ನಿಯಮದಿಂದ ಕಾಡಜ್ಜನ ಕೈಕಟ್ಟಿ ಹಾಕಿದಂತಾಯಿತು.
ಹೇಗೋ ಸಂಗ್ರಹದಲ್ಲಿ ಒಣಗಿಸಿಟ್ಟಿದ್ದ ಸೌದೆಯನ್ನು ಮಾರಿ ಕೆಲದಿನಗಳನ್ನು ದೂಡಿದ. ವಾರ ಕಳೆದಂತೆ ಕಾಡಜ್ಜನಿಗೆ ಅನ್ನ ನೀರಿಗಾಗಿ ಬವಣೆಯಾಯಿತು. ಗುಡಿಸಲಿನ ಬಿದಿರು ಗೊಡೆಗೆ ಒರಗಿ ಆಕಾಶಕ್ಕೆ ಉಸಿರು ಚೆಲ್ಲಿ ಕುಳಿತಿದ್ದ ಕಾಡಜ್ಜನಿಗೆ ತಾನೇ ಬೆಳೆಸಿದ ಮಾವಿನ ಮರ ಮತ್ತು ಬೇವಿನ ಮರಗಳ ಟೊಂಗೆಗಳು ಕಂಡವು. ಆ ಎರಡು ಮರಗಳು ಗುಡಿಸಲಿನ ಎಡಬಲಕ್ಕಿದ್ದವು. ಮರುದಿನ ಗುರುವಾರವೆಂಬುದು ಹಾಗೂ ಆ ದಿನ ಸಂತೆ ಎಂಬುದೂ ತಕ್ಷಣ ಹೊಳೆಯಿತು. ಸಂತೆಯ ದಿನ ಎಲ್ಲ ವಹಿವಾಟಿನಂತೆ ಸೌದೆ ವ್ಯಾಪಾರವೂ ಜೋರಾಗಿಯೇ ಇರುತ್ತಿತ್ತು.
ಎಲೆಗಳೆಲ್ಲ ಉದುರಿ ಬೋಳಾಗಿದ್ದ ಬೇವಿನ ಮರದ ಟೊಂಗೆಯನ್ನು ಕಡಿಯುವುದೋ ಮುಂಬರುವ ದಿನಗಳ ನಂತರ ಹಣ್ಣು ಕೊಡುವ ಮಾವಿನಮರದ ಟೊಂಗೆಯನ್ನು ಕಡಿಯುವುದೋ ಅಂದುಕೊಳ್ಳುತ್ತಾ ಕೊಡಲಿ ಮಸೆಯುತ್ತಿದ್ದ. ಇದನ್ನು ಗಮನಿಸಿದ ಬೇವಿನ ಮರ ಎಲ್ಲಿ ತನ್ನನ್ನೇ ಮೊದಲು ಕಡಿದುಬಿಡುತ್ತಾನೇನೊ ಎಂಬ ಭಯದಿಂದ “ಕಾಡಜ್ಜ ನನ್ನನ್ನು ಕಡಿಯಬೇಡ, ಚಳಿಗಾಲದಲ್ಲಿ ಎಲೆಗಳು ಉದುರುವುದು ಸಹಜ ಅಲ್ಲವೇ? ಇನ್ನು ಕೆಲವೇ ದಿನಗಳಲ್ಲಿ ಹಚ್ಚಹಸಿರು ತುಂಬಿಕೊಂಡು ಬಿಸಿಲು ಕಾಲಕ್ಕೆ ನಿನಗೆ ನೆರಳಾಗುತ್ತೇನೆ. ಆ ಮಾವಿನಮರವನ್ನೇ ಕಡಿದು ಬಿಡು’ ಎಂದಿತು. ತಕ್ಷಣವೇ ಮಾತನಾಡಿದ ಮಾವಿನಮರ “ಅಜ್ಜ ನಾನು ಹಣ್ಣನ್ನೂ ನೆರಳನ್ನೂ ಕೊಡುತ್ತೇನೆ ಆ ಬೇವಿನಮರವನ್ನೇ ಕಡಿ’ ಎಂದು ಚುಟುಕಾಗಿ ಹೇಳಿ ಸುಮ್ಮನಾಯಿತು.
ನನ್ನ ಹೊಟ್ಟೆಪಾಡಿಗೆ ಪ್ರಕೃತಿಯನ್ನು ಕಾಪಾಡುತ್ತಿರುವ ಈ ಮರಗಳನ್ನಾದರೂ ಯಾಕೆ ಕಡಿಯಲಿ ಎಂದು ಹೇಳಿ ತನ್ನ ಕೊಡಲಿಯನ್ನೇ ಸಂತೆಯಲ್ಲಿ ಮಾರಿದನು. ಹೊಟ್ಟೆಪಾಡಿಗೆ ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ಕಾಡು ನೋಡಲೆಂದು ಪ್ರವಾಸ ಬಂದಿದ್ದ ಶಾಲಾಮಕ್ಕಳ ಗುಂಪು ಕಂಡಿತು. ಅವರು ಗೈಡನ್ನು ಹುಡುಕುತ್ತಿದ್ದರು. ಕಾಡಜ್ಜ ಅವರಿಗೆ ಗೈಡಾದ. ಅಂದಿನಿಂದ ಕಾಡಿನಲ್ಲಿ ಮರಗಳ ಪರಿಚಯ ಮಾಡಿಕೊಂಡು ತನ್ನ ಬದುಕನ್ನು ಕಂಡುಕೊಂಡ.
– ಸೋಮು ಕುದರಿಹಾಳ