Advertisement
ಅರಣ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಅಧಿಕಾರಿಗಳು, ನೌಕರರಲ್ಲಿ ಕೆಳ ಹಂತದವರಿಂದ ಮೇಲಿನ ಹಂತದವರೆಗಿನ ಅಧಿಕಾರಿಗಳಲ್ಲಿನ ವಿಶ್ವಾಸದ ಕೊರತೆ, ನೌಕರರನ್ನು ವಿಶ್ವಾಸಕ್ಕೆತೆಗೆದುಕೊಳ್ಳದಿರುವುದು, ಅರಣ್ಯ ಕಾನೂನಿನ ಹೆಸರಲ್ಲಿ ಕಾಡಂಚಿನ ಗ್ರಾಮಸ್ಥರನ್ನು ವಿಲನ್ ಗಳಂತೆ ಕಾಣುತ್ತಾ ಸದಾ ಕಾಡುವ ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆಯೇ ಕಾಡಿನ ಬೆಂಕಿಗೆ ಕಾರಣವಾಗುತ್ತಲಿದೆ ಎನ್ನುತ್ತಾರೆ ಇಲಾಖೆಯನ್ನು ಹತ್ತಿರದಿಂದ ಬಲ್ಲವರು.
Related Articles
Advertisement
ನಿಯೋಜನೆಯೇ ಹೆಚ್ಚು: ರಾಜ್ಯದಲ್ಲಿರುವ 93 ಐಎಫ್ಎಸ್ ಅಧಿಕಾರಿಗಳ ಪೈಕಿ ಹೆಚ್ಚಿನವರು ಮಲ್ಲೇಶ್ವರದ ಅರಣ್ಯ ಭವನದಲ್ಲಿ ದಶಕಗಳಿಂದ ಬೇರೆ ಬೇರೆ ವಿಭಾಗಗಳಲ್ಲಿ ಪ್ರತಿಷ್ಠಾಪನೆಯಾಗಿದ್ದರೆ, ಹತ್ತಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ಆದರೂ 33 ಐಎಫ್ಎಸ್ ಅಧಿಕಾರಿಗಳು ಬೇರೆ ಬೇರೆ ಇಲಾಖೆ, ನಿಗಮ-ಮಂಡಳಿಗಳಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಾ ರಾಜಧಾನಿಯಲ್ಲೇ ಉಳಿದಿದ್ದಾರೆ. ಉಳಿದವರೂ ಸಹ ಕೇಂದ್ರ ಸ್ಥಾನ, ಆಡಳಿತ, ತರಬೇತಿ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಹಂಚಿ ಹೋಗಿದ್ದಾರೆ ಹೀಗಾಗಿ ಕಾಡು ಕಾಯುವವರ್ಯಾರು ಎಂಬ ಪ್ರಶ್ನೆ ಎದುರಾಗಿದೆ.
ಇತ್ತ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ನಿರ್ದೇಶಕರಾಗಿರುವವರು, ಅಭಯಾರಣ್ಯಗಳಲ್ಲಿ ಉಪ ಅರಣ್ಯಸಂರಕ್ಷಣಾಧಿಕಾರಿಗಳಾಗಿರುವ ಐಎಫ್ಎಸ್ ಅಧಿಕಾರಿಗಳು ಕೆಳ ಹಂತದಿಂದ ಬಡ್ತಿ ಹೊಂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯಸಂರಕ್ಷಣಾಧಿಕಾರಿ ಹುದ್ದೆಗೇರಿರುವ (ನಾನ್ ಐಎಫ್ಎಸ್) ತಮ್ಮ ಸಹಪಾಠಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಡು ಬೆಂದರೆ ಬೇಯಲಿ ನನಗೇನು ಮೂರು ವರ್ಷ ಇದ್ದು ಹೋದರಾಯಿತು ಎಂಬ ಉಡಾಫೆ ಧೋರಣೆಯೂ ಕಾಡಿಗೆ ಕಂಟಕವಾಗುತ್ತಿದೆ ಎನ್ನುತ್ತಾರೆ ನೌಕರರು.
ಜಾತಿ ಪ್ರೀತಿಯೂ ಕೆಲಸ ಮಾಡುತ್ತೆ: ಅರಣ್ಯದ ಅಂಚಿನ ವಲಯದ ಜವಾಬ್ದಾರಿ ಹೊತ್ತಿರುವ ವಲಯ ಅರಣ್ಯಾಧಿಕಾರಿಯಂತೂ ಬೇಸಿಗೆ ಮಾತ್ರವಲ್ಲ ವರ್ಷವಿಡೀ ಜಾಗೃತನಾಗಿರಬೇಕು. ಸೋಲಾರ್ ಬೇಲಿ ಮುರಿದು, ಕಂದಕವನ್ನು ಮುಚ್ಚಿ ಜಾನುವಾರುಗಳನ್ನು ಮೇಯಲು ಬಿಡುವ, ಕಳ್ಳಬೇಟೆ, ಮರ ಕಡಿತಲೆಗಳ ತಡೆಗೆ ಕಾನೂನಿನ ಅಂಕುಶಕ್ಕಿಂತ ಹಳ್ಳಿಗರ ಮನಗೆಲ್ಲುವುದು ಮುಖ್ಯ. ಅಧಿಕಾರಿ ನಮ್ಮವನೆಂಬ ಜಾತಿ ಪ್ರೇಮ ವನ್ನು ಹಳ್ಳಿಗರಲ್ಲಿ ಭಿತ್ತಿ, ಸಾಹೇಬ್ರು ನಮ್ಮವರೆಂಬ ವಿಶ್ವಾಸಗಳಿಸಿ ಸದಾ ಅವರೊಂದಿಗೆ ಒಡನಾಟ ಇರಿಸಿಕೊಂಡು ತನ್ನ ಕೈಲಾದಮಟ್ಟಿಗೆ ಅವರ ಬೇಕು-ಬೇಡ ಈಡೇರಿಸುತ್ತಾ, ಸಣ್ಣಪುಟ್ಟ ಕೆಲಸಗಳನ್ನು ಹಳ್ಳಿಯವರಿಂದಲೇ ಮಾಡಿಸಿ ಕೂಲಿ ಕೊಡುತ್ತಾ, ಕಾಡನ್ನು ಕಾಯ್ದ ಅನೇಕ ವಲಯ ಅರಣ್ಯಾಧಿಕಾರಿಗಳಿದ್ದಾರೆ.
ಈ ರೀತಿ ಕೆಳ ಹಂತದಿಂದ ಡಿಎಫ್ಒ ಹುದ್ದೆಗೇರಿದ ಅನೇಕ ಅಧಿಕಾರಿಗಳಿಗೆ ಕಾಡಿನ ಇಂಚಿಂಚೂ ಹಾಗೂ ಕಾಡಂಚಿನ ಗ್ರಾಮಗಳ ಜನರ ನಾಡಿಮಿಡಿತವು ಗೊತ್ತು. ಆದರೆ, ಬಹುತೇಕ ಐಎಫ್ಎಸ್ ಅಧಿಕಾರಿಗಳು ಇಂತಹ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಡು ಕಾಯುವ ಕೆಲಸಕ್ಕೆ ಹಚ್ಚಿ ದುಡಿಸಿಕೊಳ್ಳುವುದೇ ಇಲ್ಲ ಎನ್ನುತ್ತಾರೆ ಹೆಸರು ಹೇಳಲು ಬಯಸದ ಅರಣ್ಯ ಇಲಾಖೆ ನೌಕರರು.
– ಗಿರೀಶ್ ಹುಣಸೂರು