Advertisement

Forest: ಕಾಡುದಾರಿ ಸೃಷ್ಟಿಸುವವರಾಗೋಣ; ಕಾಲುದಾರಿಯಲ್ಲಿ ಸಾಗುವವರಲ್ಲ…

03:00 PM Oct 12, 2024 | Team Udayavani |

ಆಧುನಿಕ ಜಗತ್ತಿಗೆ ತೆರೆದುಕೊಳ್ಳುತ್ತಿದ್ದಂತೆಯೇ ಮನುಷ್ಯ ಸುಖದ ಬೆನ್ನೇರಿ ಹೋಗುತ್ತಿದ್ದಾನೆ. ಐಷಾರಾಮಿ ಲೋಕದ ಸೆಳೆತದಲ್ಲಿ ಈತನಿಗೆ ಸ್ವಯಂ ಸಾಧನೆಗಿಂತ ಪರರ ಸಾಧನೆಯ ನೆರಳಲ್ಲಿ ಬದುಕಿನ ಕ್ಷಣಿಕ ಸುಖ ಆನಂದ ಪಡೆಯುವ ಖಯಾಲಿ ಹೆಚ್ಚಿದೆ.
ನಮ್ಮ ಪೂರ್ವಜರೊನ್ನೊಮ್ಮೆ ನೆನಪು ಮಾಡಿಕೊಳ್ಳಿ, ಆಹಾರ, ಬಟ್ಟೆ, ಮನೆಯಿಂದ ಹಿಡಿದು ಬದುಕಿಗೆ ಅಗತ್ಯವಾದುದೆಲ್ಲವನ್ನೂ ಸಂತ್ವ ಶಕ್ತಿ, ಕ್ರಿಯಾತ್ಮಕತೆಯನ್ನು ಬಳಸಿ ಪಡೆಯುತ್ತಿದ್ದರು. ಹೀಗಾಗಿ ಇಂತಹ ಪಡೆಯುವಿಕೆಯಲ್ಲಿ ಇವರೆಲ್ಲ ಅಮಿತ ಆನಂದ, ಸಾರ್ಥಕತೆಯ ಭಾವ ಕಾಣುತ್ತಿದ್ದರು. ಸ್ವಯಂ ಸೃಷ್ಟಿಯಲ್ಲೇ ಅವರಿಗೆ ಜೀವನದ ಸಾರ್ಥಕತೆಯಿತ್ತು.

Advertisement

ಆದರೆ ಇಂದು ಹಾಗಲ್ಲ, ಇದು ಧಾವಂತದ ಯುಗ. ಯಾರಿಗೂ ಸಮಯವಿಲ್ಲ ಎನ್ನುವ ಗುಂಗಿನಲ್ಲೇ ತನ್ನತನ ಮರೆಯುವಂತಹ ಕಾಲವಿದು. ಹೀಗಾಗಿ ಈಗ ಎಲ್ಲವೂ ರೆಡಿಮೇಡ್‌ ಬೇಕು. ಅದು ಅನ್ನ ಇರಲಿ, ತಿಂಡಿ ಇರಲಿ, ಉಡುವ ಬಟ್ಟೆಯಿರಲಿ ಎಲ್ಲವೂ ಸಿದ್ಧಗೊಂಡ ಸ್ಥಿತಿಯಲ್ಲೇ ಸ್ವೀಕರಿಸಲು ಹೆಚ್ಚು ಆಸಕ್ತಿ.

ಜನರ ಮನೋಭಾವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ವ್ಯಾಪಾರಿಗಳು ಜನಕ್ಕೆ ಏನು ಬೇಕೋ ಅದನ್ನು ಮನೆ ಬಾಗಿಲಿಗೇ ತಲುಪಿಸುವ ಹೊಸದ ವ್ಯವಸ್ಥೆಯನ್ನು ಅವರ ಮುಂದಿರಿಸಿದ್ದಾರೆ. ಹೀಗಾಗಿ ಶ್ರಮ ಇಲ್ಲ, ಕ್ರಿಯಾತ್ಮಕತೆ ಇಲ್ಲ. ಸಿದ್ದಗೊಂಡಿರುವುದಕ್ಕೆ ತುಸು ಅಡ್ಜಸ್ಟ್‌ ಆದರೆ ಆಯ್ತು !  ಕಾಡುದಾರಿ ಮತ್ತು ಕಾಲು ದಾರಿಯ ಮಧ್ಯದ ಅಗಾಧ ಅಂತರ ಅರಿಯದ ಮನುಷ್ಯ ನಿಧಾನವಾಗಿ ತನ್ನ ಶಕ್ತಿ ಮತ್ತು ಕೌಶಲ್ಯತೆಗೆ ತಿಲಾಂಜಲಿ ಇಡುತ್ತಿದ್ದಾನೆ.

ಉದಾಹರಣೆಗೆ ಅದೊಂದು ದೊಡ್ಡ ಕಾಡು. ಈ ಕಾಡಿನ ಆಳದಲ್ಲಿ ಅಮೂಲ್ಯ ಗಿಡವೊಂದಿರುವ ಮಾಹಿತಿ ಪಡೆಯುವ ವ್ಯಕ್ತಿ ಅದನ್ನು ತರುವ ಹಠ ತೊಡುತ್ತಾನೆ. ಹೀಗಾಗಿ ಕಾಡು ಪ್ರವೇಶಕ್ಕೆ ಉಪಾಯ ಮಾಡುತ್ತಾನೆ. ಕಾಡಿನ ಅಂಚಿನಿಂದ ನಿಧಾನವಾಗಿ ಮುಳ್ಳುಗಂಟಿಗಳನ್ನು ಸವರುತ್ತಾ, ಕಲ್ಲುಬಂಡೆಗಳನ್ನು ಸರಿಸುತ್ತಾ ಗಮ್ಯದತ್ತ ದಾರಿ ಮಾಡಿಕೊಳ್ಳುತ್ತಲೇ ಸಾಗುತ್ತಾನೆ. ಇದಕ್ಕಾಗಿ ಈತ ಬೀಳುತ್ತಾನೆ, ಏಳುತ್ತಾನೆ. ಮುಳ್ಳುಪೊದೆಗಳಲ್ಲಿ ಗಾಯಗೊಳ್ಳುತ್ತಾನೆ. ಅಂತಿಮವಾಗಿ ಆತ ತಲುಪಬೇಕಾದ ಜಾಗ ತಲುಪಿದಾಗ ಆತನಲ್ಲಿ ಏನೋ ಸಾರ್ಥಕತೆ. ತನಗೆ ಬೇಕಾದದ್ದು ಪಡೆದು ಆತ ಮರಳುತ್ತಾನಾದರೂ ಈ ಕಾಡು ದಾರಿ ಸೃಷ್ಟಿಸಲು ಆತನ ನಡೆಸಿದ ಸಾಹಸ ಸಾರ್ಥಕವಾಗೇ ಉಳಿಯುತ್ತದೆ.

Advertisement

ಮುಂದೆ ಈ ದಾರಿಯ ಮೂಲಕ ಜನ ಕಾಡು ಪ್ರವೇಶ ಮಾಡುತ್ತಾರೆ, ಇದು ಕಾಲು ದಾರಿಯಾಗುತ್ತದೆ. ಯಾರೋ ಸೃಷ್ಟಿಸಿದ ದಾರಿಯಲ್ಲಿ ನಾವು ಸುಖ ಅನುಭವಿಸುವ ಪರಿಯಿದು. ಇದು ಕೇವಲ ಕಾಡಿನ ವಿಷಯಕಷ್ಟೇ ಅಲ್ಲ, ಜೀವನದ ಪ್ರತಿ ಹಂತದಲ್ಲೂ ನಮಗೆ ಹೊಸತನ ಸೃಷ್ಟಿಯ ಸವಾಲು ಎದುರಾಗುತ್ತದೆ. ಒಮ್ಮೆ ಸೃಷ್ಟಿಯಾಯಿತೆಂದರೆ ಅದರ ಬಳಕೆಗೆ ಜನ ತುದಿಗಾಲಲ್ಲಿ ನಿಲ್ಲುತ್ತಾರೆನ್ನುವುದು ನಿಜ. ಆದರೆ ಸೃಷ್ಟಿಸುವುದರಲ್ಲೇ ಮಜಾ ಇದೆ. ಇದು ನಮ್ಮ ಸೃಜನಶೀಲತೆಗೆ ಸಾಣೆ ಹಿಡಿಯುತ್ತದೆ. ಬದುಕಿನಲ್ಲಿ ಸವಾಲು ಎದುರಿಸುವ ಛಾತಿ ಬಲಗೊಳಿಸುತ್ತದೆ. ಹೀಗಾಗಿ ನಾವು ಕಾಡು ದಾರಿ ಸೃಷ್ಟಿಸುವವರಾಗೋಣ, ಕಾಲುದಾರಿಯಲ್ಲಿ ನಡೆಯುವವರಲ್ಲ..

*ಪೂಜಾ ಆರ್‌.ಹೆಗಡೆ, ಮೇಲಿನಮಣ್ಣಿಗೆ

Advertisement

Udayavani is now on Telegram. Click here to join our channel and stay updated with the latest news.

Next