Advertisement

ಉಡುಪಿ : ಉಭಯ ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಹೆಚ್ಚಳ, ಸ್ಯಾಟಲೈಟ್‌ ಸರ್ವೇ

09:57 AM Sep 19, 2022 | Team Udayavani |

ಉಡುಪಿ : ಅರಣ್ಯ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ಹಾಗೂ ಇರುವ ಅರಣ್ಯ ಸಂರಕ್ಷಿಸುವ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಚರ್ಚೆಯಾಗುತ್ತಿದೆ. ಹಲವು ವಿನೂತನ ಕಾರ್ಯಕ್ರಮಗಳ ಫ‌ಲವಾಗಿ ಕರಾವಳಿಯ ಉಭಯ ಜಿಲ್ಲೆಯಲ್ಲೂ ಅರಣ್ಯ ಹೆಚ್ಚಾಗುತ್ತಿದ್ದು ಇದಕ್ಕೆ ಕಾಂಡ್ಲಾ ವನಗಳ ಕೊಡುಗೆಯೂ ಇದೆ.

Advertisement

ಸಾರ್ವಜನಿಕರು, ಸಂಘ- ಸಂಸ್ಥೆಗಳು ಗಿಡ ನೆಡುವ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ಎಲ್ಲೆಡೆ ನಡೆಸುತ್ತಿದ್ದಾರೆ ಮತ್ತು ನೆಟ್ಟ ಗಿಡಗಳನ್ನು ಸಂರಕ್ಷಿಸಲು ಪ್ರಯತ್ನವೂ ಆಗುತ್ತಿದೆ. ಅರಣ್ಯ ಇಲಾಖೆಯೂ ಕಡಿಮೆ ದರದಲ್ಲಿ ರೈತರಿಗೆ, ಸಾರ್ವಜನಿಕರಿಗೆ ಗಿಡಗಳ ವಿತರಣೆಯ ಜತೆಗೆ ಸಾಮಾಜಿಕ ಅರಣ್ಯದ ಪರಿಕಲ್ಪನೆಯಡಿ ಪ್ರತೀ ವರ್ಷ ಲಕ್ಷಾಂತರ ಗಿಡಗಳನ್ನು ಜನವಸತಿ ಕಡಿಮೆ ಇರುವ ಪ್ರದೇಶದಲ್ಲಿ ನೆಡುತ್ತಿದೆ.

2019-20ರಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಿ ಸುಮಾರು ಶೇ. 23ರಷ್ಟು ಹಾಗೂ ದ.ಕ.ದಲ್ಲಿ ಶೇ. 25.45ರಷ್ಟು ಅರಣ್ಯ ಇತ್ತು. 2021-22ರಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ. 28.07ರಷ್ಟು ಹಾಗೂ ದ.ಕ.ದಲ್ಲಿ ಶೇ. 26.38ರಷ್ಟು ಅರಣ್ಯ ಕಂಡುಬಂದಿದೆ. ಉಡುಪಿ ಜಿಲ್ಲೆಯಲ್ಲಿ ಶೇ. 5ರಷ್ಟು ಹಾಗೂ ದ.ಕ.ದಲ್ಲಿ ಶೇ. 1ರಷ್ಟು ಅರಣ್ಯ ಹೆಚ್ಚಳವಾಗಿದೆ.

ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 976.16 ಚ.ಕಿ.ಮೀ. ಮೀಸಲು ಅರಣ್ಯ, 12.08 ಚ.ಕಿ.ಮೀ. ರಕ್ಷಿತಾರಣ್ಯ, 17.24 ಚ.ಕಿ.ಮೀ. ಸೆಕ್ಷನ್‌-4ರ ಸೂಚಿತ ಪ್ರದೇಶವಿದೆ. ದ.ಕ.ದಲ್ಲಿ 1179.85 ಚ.ಕಿ.ಮೀ. ಮೀಸಲು ಅರಣ್ಯ, 4.66 ಚ.ಕಿ.ಮೀ. ರಕ್ಷಿತಾರಣ್ಯ, 45.31 ಚ.ಕಿ.ಮೀ. ಸೆಕ್ಷನ್‌-4ರ ಸೂಚಿತ ಪ್ರದೇಶ ಹಾಗೂ 52.47 ಚ.ಕಿ.ಮೀ. ಖಾಸಗಿ ಅರಣ್ಯವಿದೆ.

ಸ್ಯಾಟಲೈಟ್‌ ಸರ್ವೇ
ಕೇಂದ್ರ ಸರಕಾರದ ಪರಿಸರ ಇಲಾಖೆ ಪ್ರತೀ ಎರಡು ವರ್ಷಗಳಿಗೊಮ್ಮೆ ಸ್ಯಾಟಲೈಟ್‌ ಮೂಲಕ ಅರಣ್ಯ ಸರ್ವೇ ನಡೆಸುತ್ತದೆ. ಇದರಲ್ಲಿ ಸಾಮಾಜಿಕ ಅರಣ್ಯ, ಖಾಸಗಿ ಅರಣ್ಯ, ಮೀಸಲು ಅರಣ್ಯ ಹಾಗೂ ಸಂರಕ್ಷಿತಾರಣ್ಯ, ಕಾಂಡ್ಲಾ ವನ ಹೀಗೆ ಎಲ್ಲ ಮಾದರಿಯ ಅರಣ್ಯವೂ ಸೇರಿರುತ್ತವೆ.

Advertisement

ಕಾಂಡ್ಲಾ ವನ ಹೆಚ್ಚಳ
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಒಟ್ಟು ಸುಮಾರು 155 ಚದರ ಕಿ.ಮೀ. ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ಹಾಗೆಯೇ ಕಾಂಡ್ಲಾ ವನದ ಪ್ರಮಾಣದಲ್ಲೂ 3 ಚದರ ಕಿ.ಮೀ. ಏರಿಕೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ತಾಲೂಕಿನ ನದಿ ತೀರದಲ್ಲಿ ಹೇರಳವಾಗಿ ಬೆಳೆಸಲಾಗಿದೆ.

ರಾಜ್ಯದಲ್ಲಿ ಅರಣ್ಯ ಪ್ರಮಾಣ ಕಡಿಮೆ
ರಾಜ್ಯದಲ್ಲಿ 2019-20ರಲ್ಲಿ 1,91,791 ಚ.ಕಿ.ಮೀ. ಭೂ ಪ್ರದೇಶದಲ್ಲಿ 41,590.16 ಚ.ಕಿ.ಮೀ. ಅರಣ್ಯ ಪ್ರದೇಶ (ಶೇ. 21.69ರಷ್ಟು) ಇತ್ತು. 2021-22ರಲ್ಲಿ ಅರಣ್ಯ ಪ್ರದೇಶ 40,591.91 ಚ.ಕಿ.ಮೀ. (ಶೇ. 21.16) ಇಳಿಕೆಯಾಗಿದೆ. ಒಟ್ಟಾರೆಯಾಗಿ 998.19 ಚ.ಕಿ.ಮೀ. (ಶೇ. 0.53ರಷ್ಟು) ಅರಣ್ಯ ರಾಜ್ಯಾದ್ಯಂತ ಕಡಿಮೆಯಾಗಿದೆ. ಚಿಕ್ಕಮಗಳೂರಿನಲ್ಲಿ ಶೇ. 42.49, ಕೊಡಗಿನಲ್ಲಿ ಶೇ. 47, ಚಾಮರಾಜನಗರದಲ್ಲಿ ಶೇ. 64.95, ಉತ್ತರ ಕನ್ನಡದಲ್ಲಿ ಶೇ. 80.80 ಹಾಗೂ ಶಿವಮೊಗ್ಗದಲ್ಲಿ ಶೇ. 67.11ರಷ್ಟು ಅರಣ್ಯ ಇದೆ. ಇಡೀ ರಾಜ್ಯದಲ್ಲಿ ಉತ್ತರ ಕನ್ನಡದಲ್ಲಿ ಅತಿ ಹೆಚ್ಚು (ಶೇ. 80.80) ಹಾಗೂ ವಿಜಯಪುರ (ಶೇ. 0.83), ಕಲಬುರಗಿ (ಶೇ. 3.10 ), ರಾಯಚೂರಿನಲ್ಲಿ (ಶೇ. 4.38) ಅತಿ ಕಡಿಮೆ ಅರಣ್ಯ ಇರುವುದು ಅರಣ್ಯ ಇಲಾಖೆಯ ವರದಿಯಿಂದ ಕಂಡುಬಂದಿದೆ.

ಅರಣ್ಯ ಪ್ರಮಾಣ ಹೆಚ್ಚುತ್ತಿರು ವುದರಲ್ಲಿ ಸಾರ್ವ ಜನಿಕರ ಸಹಭಾಗಿತ್ವವೂ ಇದೆ. ಅರಣ್ಯ ಇಲಾಖೆಯಿಂದ ಕಡಿಮೆ ದರದಲ್ಲಿ ಗಿಡಗಳನ್ನು ವಿತರಣೆ ಮಾಡಲಾಗುತ್ತಿದೆ. ಸಂರಕ್ಷಣೆಗೂ ಒತ್ತು ನೀಡಲಾಗುತ್ತಿದೆ. ಒಟ್ಟಾರೆಯಾಗಿ ಅರಣ್ಯ ಪ್ರದೇಶದ ಪ್ರಮಾಣ ಹೆಚ್ಚಾಗುತ್ತಿದೆ. ಅಲ್ಲದೆ, ಅರಣ್ಯ ಉಳಿಸುವ ನಿಟ್ಟಿನಲ್ಲಿ ಜನ ಸಮಾನ್ಯರಲ್ಲೂ ಜಾಗೃತಿ ಮೂಡುತ್ತಿದೆ.
– ಪ್ರಕಾಶ್‌ ನೆಟಾಲ್ಕರ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವೃತ್ತ
– ಆಶೀಶ್‌ ರೆಡ್ಡಿ, ಡಿಎಫ್ಒ, ಕುಂದಾಪುರ

– ರಾಜು ಖಾರ್ವಿ ಕೊಡೇರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next