ಮುಂಬೈ: ಮಹಾರಾಷ್ಟ್ರದ ಮುಂಬೈಗೆ ಹೊಂದಿಕೊಂಡಿರುವ ಆರೆಯ್ ಕಾಲೋನಿಯ 600 ಎಕರೆ ಭೂಮಿಯನ್ನು ಮೀಸಲು ಅರಣ್ಯವನ್ನಾಗಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದದಲ್ಲಿ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಜೀವವೈವಿಧ್ಯತೆಯನ್ನು ಹೊಂದಿರುವ ಈ ಪ್ರದೇಶದಲ್ಲಿ ಕಳೆದ ವರ್ಷ 32 ಸಾವಿರ ಕೋಟಿ ರೂ.ವೆಚ್ಚದಲ್ಲಿ ಮೆಟ್ರೋ ಕಾರು ಶೇಡ್ ಯೋಜನೆ ಯನ್ನು ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ 2 ಸಾವಿರ ಮರಗಳನ್ನು ಕಡಿಯಲಾಗಿತ್ತು. 2019ರ ಅಕ್ಟೋಬ ರ್‌ನಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಸರ್ಕಾರವು ಕೈಗೆತ್ತಿ ಕೊಂಡಿದ್ದ ಈ ಯೋಜನೆಗೆ ಪರಿಸರವಾದಿಗಳು ಹಾಗೂ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಈ ಯೋಜನೆಗೆ ತಡೆ ನೀಡಿದ್ದರು. ಇದೀಗ ಈ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸಿದ್ದಾರೆ. ಜೊತೆಗೆ ಮೆಟ್ರೋ ಕಾರ್ ಶೇಡ್ ಯೋಜನೆಗೆ ಬೇರ ಸ್ಥಳ ಗುರುತಿಸುವುದಾಗಿ ತಿಳಿಸಿದ್ದಾರೆ. 3,000 ಎಕರೆ ಅರಣ್ಯವನ್ನು ಹೊಂದಿರುವ ಈ ಆರೆಯ್ ಕಾಲೋನಿಯು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದ ಸಮೀಪ ಇದೆ.
ನಿರ್ಧಾರ ಬದಲಿಸಿದ್ದ ಏಕೆ?: ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಸರ್ಕಾರವಿದ್ದಾಗಲೇ ಅಕ್ಟೋಬರ್‌ನಲ್ಲಿ ಆರೆಯ್ ಕಾಲೋನಿ ಅರಣ್ಯದಲ್ಲಿ ಮೆಟ್ರೋ ಕಾರ್ ಶೆಡ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಸರ್ಕಾರದ ಈ ನಡೆಗೆ ಸಾರ್ವಜನಿಕರು ಹಾಗೂ ಪರಿಸರವಾದಿಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಇನ್ನು 18 ತಿಂಗಳಲ್ಲಿ ಬೃಹನ್ಮುಂಬೈ ನಗರ ಪಾಲಿಕೆ ಚುನಾವಣೆ ಬರಲಿದೆ. ಮುಂಬೈನ ಜನರಿಗೆ ಗುಣಮಟ್ಟದ ಜೀವನ ನಡೆಸಲು ಹಾಗೂ ಪರಿಸರ ಸ್ನೇಹಿ ಆಡಳಿತ ನೀಡಲಾಗುತ್ತಿದೆ ಎಂಬುದಾಗಿ ಬಿಂಬಿಸುವ ಸಲುವಾಗಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.