Advertisement

ಕತ್ತಲೆ ಕೂಪದಲ್ಲಿ ಅರಣ್ಯ ಕಾವಲು ಕ್ಯಾಂಪ್‌

01:27 PM Jun 23, 2022 | Team Udayavani |

ಮುಧೋಳ: ಕೆಳಹಂತದ ನೌಕರರಿಗೆ ಸೂಕ್ತ ಸೌಲಭ್ಯ ಒದಗಿಸಬೇಕಾದ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಗುತ್ತಿಗೆ ನೌಕರರು ಕತ್ತಲೆಯಲ್ಲಿಯೇ ಅರಣ್ಯ ಸಂರಕ್ಷಣೆಗೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಕರ್ನಾಟಕದಲ್ಲಿಯೇ ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ತಾಲೂಕಿನ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದ ಕಾವಲಿಗೆ ಇರುವ ಹಲಗಲಿಯ ಕ್ಯಾಂಪ್‌ಗೆ ವಿದ್ಯುತ್‌ ಸಂಪರ್ಕ ಇರದ ಕಾರಣ ಈ ಕ್ಯಾಂಪ್‌ನಲ್ಲಿ ಕಾರ್ಯನಿರ್ವಹಿಸುವ ಕೆಳಹಂತದ ನೌಕರರು ಹಾಗೂ ಗುತ್ತಿಗೆ ನೌಕರರು ರಾತ್ರಿವೇಳೆ ಜೀವ ಕೈಯಲ್ಲಿಡಿದು ಕಾರ್ಯನಿರ್ವಹಿಸಬೇಕಾಗಿದೆ.

Advertisement

ದೊಡ್ಡ ಪ್ರದೇಶ: ಹಲಗಲಿ ಗ್ರಾಮಕ್ಕೆ ಹೊಂದಿಕೊಂಡಿರುವ ಈ ಕಾವಲು ಕ್ಯಾಂಪ್‌ ವ್ಯಾಪ್ತಿಗೆ ದೊಡ್ಡಮಟ್ಟದ ಭೂವಿಸ್ತಾರ ಬರಲಿದೆ. ಬೀಳಗಿ ಹಾಗೂ ಮುಧೋಳ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 963691 ಹೆಕ್ಟೇರ್‌ ಪ್ರದೇಶದಲ್ಲಿ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯ ಹರಡಿಕೊಂಡಿದೆ. ಈ ಪೈಕಿ 10353 ಹೆಕ್ಟೇರ್‌ ಪ್ರದೇಶ ಹಲಗಲಿ ಗ್ರಾಮ ವ್ಯಾಪ್ತಿಗೆ ಬರಲಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಅರಣ್ಯ ಕಾವಲಿಗೆ ಗ್ರಾಮಕ್ಕೆ ಹೊಂದಿಕೊಂಡಂತೆ ಕಾವಲು ಕ್ಯಾಂಪ್‌ ನಿರ್ಮಿಸಲಾಗಿದೆ. ಆದರೆ, ಕ್ಯಾಂಪ್‌ ಗೆ ವಿದ್ಯುತ್‌ ವ್ಯವಸ್ಥೆ ಕಲ್ಪಿಸದ ಕಾರಣ ಗುತ್ತಿಗೆ ನೌಕರರು ರಾತ್ರಿಯಾದರೆ ಸಾಕು ಭಯದಲ್ಲಿ ಕಾರ್ಯನಿರ್ವಹಿಸುವಂತಾಗಿದೆ.

ಹಾಳಾದ ಸೋಲಾರ್‌ ದೀಪ: ನಿರ್ಮಾಣದ ಆರಂಭದಲ್ಲಿ ಕ್ಯಾಂಪ್‌ಗೆ ಸೋಲಾರ್‌ ವ್ಯವಸ್ಥೆ ಮೂಲಕ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಹಲವು ವರ್ಷಗಳ ಬಳಿಕ ಸೂಕ್ತ ನಿರ್ವಹಣೆ ಕೊರತೆಯಿಂದ ಹಾಳಾಗಿ ಎರಡು ವರ್ಷಗಳು ಸಮೀಪಿಸುತ್ತ ಬಂದರೂ ಅಧಿಕಾರಿಗಳು ಕ್ಯಾಂಪ್‌ಗೆ ಬೆಳಕು ನೀಡುತ್ತಿಲ್ಲ.

ಮಹತ್ವದ ಕ್ಯಾಂಪ್‌: ಹಲಗಲಿ ಗ್ರಾಮದ ಸರಹದ್ದಿಗೆ ಹೊಂದಿಕೊಂಡಿರುವ ಕಾವಲು ಕ್ಯಾಂಪ್‌ ತುಂಬ ಮಹತ್ವದ್ದಾಗಿದೆ. ಎತ್ತರದ ಪ್ರದೇಶದಲ್ಲಿ ನಿರ್ಮಾಣ ಮಾಡಿರುವುದರಿಂದ ಪ್ರತಿಯೊಂದನ್ನು ಸೂಕ್ಷ್ಮವಾಗಿ ಅವಲೋಕಿಸಬಹುದು. ಈ ಕ್ಯಾಂಪ್‌ನ ಮುಂಭಾಗದಲ್ಲಿ ದೊಡ್ಡ ರಸ್ತೆ ಇರುವುದರಿಂದ ಜನರು ಕಾಡೊಳಗೆ ಹೋಗಿ ಬರುವುದನ್ನು ಗಮನಿಸಲು ಅನುಕೂಲವಾಗುತ್ತಿದೆ. ಆದರೆ, ವಿದ್ಯುತ್‌ ಕೊರತೆಯಿಂದ ರಾತ್ರಿಯಾದರೆ ಅವರ ಕೆಲಸಕ್ಕೆ ಕಷ್ಟವಾಗುತ್ತಿದೆ.

ವಿಷಜಂತುಗಳ ಕಾಟ: ಅರಣ್ಯಕ್ಕೆ ಹೊಂದಿಕೊಂಡಿರುವ ಕ್ಯಾಂಪ್‌ನಲ್ಲಿ ರಾತ್ರಿವೇಳೆ ಕಾವಲುಗಾರರು ಉಳಿದರೆ ಅವರಿಗೆ ವಿಷಜಂತುಗಳ ಕಾಟ ಹೆಚ್ಚಾಗಿದೆ. ಎಷ್ಟೋ ಬಾರಿ ಇಲ್ಲಿನ ಸಿಬ್ಬಂದಿ ವಿಷ ಸರ್ಪ ರಕ್ಷಿಸುವ ಇಲ್ಲಿನ ಸಿಬ್ಬಂದಿ ಹೇಳಿಕೊಂಡಿದ್ದಾರೆ.

Advertisement

ಕ್ಯಾಂಪ್‌ಗೆ ಹೆಸ್ಕಾಂನಿಂದ ವಿದ್ಯುತ್‌ ದೀಪ ಅಳವಡಿಕೆ ಕಷ್ಟ. ಸೋಲಾರ್‌ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಪ್ರಸ್ತಾವನೆ ಕಳುಹಿಸಿದ್ದೇವೆ. ಶೀಘ್ರ ವ್ಯವಸ್ಥೆ ಕಲ್ಪಿಸಲಾಗುವುದು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಹಲಗಲಿಯ ಕಾವಲು ಕ್ಯಾಂಪ್‌ ನಲ್ಲಿ ಸೋಲಾರ್‌ ವ್ಯವಸ್ಥೆ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಶೀಘ್ರ ಕ್ಯಾಂಪ್‌ಗೆ ಸೋಲಾರ್‌ ದೀಪ ಅಳವಡಿಕೆಗೆ ಕ್ರಮ ಕೈಗೊಳ್ಳುತ್ತೇವೆ. –ಪ್ರಶಾಂತ ಸಂಕಿನಮಠ, ಡಿಎಫ್‌ಒ ಬಾಗಲಕೋಟೆ

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next