ಚಿಕ್ಕಮಗಳೂರು: ಕಿಡಿಗೇಡಿಗಳ ಅಟ್ಟಹಾಸಕ್ಕೆ ಹಸಿರು ಹೊದ್ದಿರುವ ಕಾನನ (ಅರಣ್ಯ) ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹರ ಸಾಹಸಪಡುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಎಂದರೆ ಇಲ್ಲಿನ ಹಚ್ಚ ಹಸುರಿನ ಕಾನನ. ಮಳೆಗಾಲ, ಚಳಿಗಾಲದಲ್ಲಿ ಇಲ್ಲಿನ ಅರಣ್ಯ ಸಂಪತ್ತು ಕಣ್ತುಂಬಿಕೊಳ್ಳಲು ದೇಶ- ವಿದೇಶ ಸೇರಿದಂತೆ ರಾಜ್ಯದ ಮೂಲೆ- ಮೂಲೆಗಳಿಂದ ಜನ ಬರುತ್ತಾರೆ. ಆದರೆ ಬೇಸಿಗೆ ಕಾಲ ಆವರಿಸುತ್ತಿದ್ದಂತೆ ಕಿಡಿಗೇಡಿಗಳು ಕಾಡಿಗೆ ಕೊಳ್ಳಿ ಇಡುತ್ತಿದ್ದಾರೆ. ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಮರಗಳು ಎಲೆಗಳನ್ನು ಉದುರಿಸುತ್ತವೆ. ಇಲ್ಲಿನ ಬಹುತೇಕ ಅರಣ್ಯ ಶೋಲಾ ಹುಲ್ಲುಗಾವಲು ಪ್ರದೇಶವನ್ನು ಒಳಗೊಂಡಿದ್ದು, ಬೇಸಿಗೆ ಧಗೆಗೆ ಹುಲ್ಲುಗಾವಲು ಒಣಗಿ ನಿಲ್ಲುತ್ತದೆ. ಮಳೆಗಾಲದಲ್ಲಿ ಹುಲ್ಲು ಚೆನ್ನಾಗಿ ಬೆಳೆಯಲಿ ಎಂಬ ಉದ್ದೇಶದಿಂದ ಕೆಲವು ಕಿಡಿಗೇಡಿಗಳು ಬೆಂಕಿ ಇಡುತ್ತಿರುವುದು ಕಂಡು ಬರುತ್ತಿದೆ. ಜಿಲ್ಲೆ ನಾಲ್ಕು ಅರಣ್ಯ ವಲಯಗಳನ್ನು ಒಳಗೊಂಡಿದೆ. ಚಿಕ್ಕಮಗಳೂರು ವಿಭಾಗದ ಮುಳ್ಳಯ್ಯನಗಿರಿ, ಸಿಂದಿಗೆರೆ, ಚುರ್ಚೆಗುಡ್ಡ, ಮೂಡಿಗೆರೆ ಭಾಗದ ಬಾಳೂರು (ಚಾರ್ಮಾಡಿ ಘಾಟಿ ಪ್ರದೇಶ), ಕೊಪ್ಪ ತಾಲೂಕು, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಮೀಸಲು ಅರಣ್ಯಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕಾಫಿತೋಟಗಳ ಮಾಲೀಕರು ತಮ್ಮ ತೋಟಗಳಿಗೆ ಬೆಂಕಿ ಬೀಳಬಾರದು ಎಂಬ ಉದ್ದೇಶದಿಂದ ತೋಟದ ಬದಿಗಳಲ್ಲಿ ಬೆಂಕಿ ಹಾಕುವುದರಿಂದಲೂ ಅರಣ್ಯದಲ್ಲಿ ಬೆಂಕಿ
ಆವರಿಸುತ್ತಿದೆ. ಹಾಗೇ ಕೆಲವು ಕಿಡಿಗೇಡಿಗಳು ಬೇಕಂತಲೇ ಬೆಂಕಿ ಹಾಕುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ. ಈ ವರ್ಷ ಅರಣ್ಯದಲ್ಲಿ ಬೆಂಕಿಯ ತೀವ್ರತೆ ಹೆಚ್ಚಿದ್ದು, ಇದಕ್ಕೆ ಹವಾಮಾನ ವೈಪರೀತ್ಯವೂ ಕಾರಣ ಎನ್ನಲಾಗುತ್ತಿದೆ. ಕಿಡಿಗೇಡಿಗಳು ಹಚ್ಚುತ್ತಿರುವ ಬೆಂಕಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚುತ್ತಿದ್ದು, ತೇವಾಂಶ ಕಡಿಮೆ ಇದೆ. ಇದರ ಜೊತೆಗೆ ಗಾಳಿಯೂ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬೆಂಕಿಯ ಕೆನ್ನಾಲಿಗೆ ಕಾಣುತ್ತಿದ್ದಂತೆ ಕಿಮೀಗಟ್ಟಲೆ ವ್ಯಾಪಿಸುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದರು. ವಾತಾವರಣದಲ್ಲಿನ ವ್ಯತ್ಯಾಸದಿಂದ ಅವರ ಶ್ರಮ ಸಮುದ್ರದಲ್ಲಿ ಹುಳಿ ಹಿಂಡಿದಂತೆ ಆಗುತ್ತಿದೆ. ದಟ್ಟ ಅರಣ್ಯ ಪ್ರದೇಶಗಳಲ್ಲೂ ಬೆಂಕಿಯ ತೀವ್ರತೆ ಇದ್ದು, ವನ್ಯಮೃಗಗಳು, ಸರೀಸೃಪಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಅರಣ್ಯದಲ್ಲಿನ ಬೆಂಕಿಯ ತೀವ್ರತೆ ಎಷ್ಟರ ಮಟ್ಟಿಗೆ ಇದೆ ಎಂದರೆ ಚಿಕ್ಕಮಗಳೂರು ತಾಲೂಕು ಸಿಂದಿಗೆರೆ ಭಾಗದಲ್ಲಿನ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲು ಹೋದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೂರು ಬೈಕ್‌ಗಳು ಬೆಂಕಿಗೆ ಆಹುತಿಯಾಗಿವೆ. ರಸ್ತೆ ಬದಿಯಲ್ಲಿ ಬೈಕ್‌ಗಳನ್ನು ನಿಲ್ಲಿಸಿ ಹೋಗಿದ್ದು, ಗಾಳಿಯ ಆರ್ಭಟಕ್ಕೆ ಬೆಂಕಿ ರಸ್ತೆ ಬದಿಗೂ ವ್ಯಾಪಿಸಿದೆ. ಅಲ್ಲಿದ್ದ ಬೈಕ್‌ಗಳಿಗೆ ಬೆಂಕಿ ತಗುಲಿದೆ. ಈ ವೇಳೆ ಮೂರು ಬೈಕ್‌ಗಳು ಬೆಂಕಿಯ ಕೆನ್ನಾಲಿಗೆಗೆ ಬೆಂದು ಹೋಗಿವೆ. ಕ್ಷಣ ಮಾತ್ರದಲ್ಲಿ ಇಂತಹದೊಂದು ಘಟನೆ ನಡೆದು ಹೋಗಿದೆ ಎಂದರೆ ಇನ್ನು ವನ್ಯಜೀವಿಗಳ, ಸರೀಸೃಪಗಳ ಪಾಡೇನು? ಎಂಬ ಚಿಂತೆ ಕಾಡುತ್ತಿದೆ. ಒಟ್ಟಾರೆ ಹಚ್ಚ ಹಸಿರಿನ ಕಾನನ, ಬೆಂಕಿಯೆಂಬ ಭಸ್ಮಾಸುರನ ಬಾಯಿಗೆ ಸಿಲುಕಿ ವಿಲಿ ವಿಲಿ ಒದ್ದಾಡುತ್ತಿದೆ.
ಕಿಡಿಗೇಡಿಗಳ ಕೃತ್ಯದಿಂದ ಕಾಡ್ಗಿಚ್ಚು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಹೊಸ ಹುಲ್ಲು ಚೆನ್ನಾಗಿ ಬರಲಿ. ಅಜ್ಞಾನದಿಂದ ಕೆಲವರು ಇಂತಹ ಕೃತ್ಯ ಎಸಗುತ್ತಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ
ಮುಂದಾಗಿದ್ದು, ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ವಾತಾವರಣದಲ್ಲಿ ಉಷ್ಠಾಂಶ ಜಾಸ್ತಿಯಾಗಿದೆ ಹಾಗೂ ತೇವಾಂಶ ಕಡಿಮೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಬೀಸುತ್ತಿರುವುದರಿಂದ ಬೆಂಕಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಬೆಂಕಿ ತಡೆಗೆ ಹೆಚ್ಚಿನ ಸಿಬ್ಬಂದಿ ಮತ್ತು ವಾಹನ ಗಳನ್ನು ನಿಯೋಜಿಸಲಾಗಿದೆ ಮತ್ತು ತಂಡಗಳನ್ನು ರಚಿಸಲಾಗಿದೆ. ಆದರೆ ಹವಾಮಾನ ವೈಪರೀತ್ಯದಿಂದ ಬೆಂಕಿಯನ್ನು ಕಂಟ್ರೋಲ್‌ಗೆ ತರಲು ನಿಧಾನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಹೆಚ್ಚಿಸಿಕೊಳ್ಳಲಾಗುತ್ತಿದೆ.
∙ಕ್ರಾಂತಿ, ಡಿಎಫ್‌ಒ
ಸಂದೀಪ ಜಿ.ಎನ್. ಶೇಡ್ಗಾರ್