Advertisement

ಹೆಚ್ಚಿನ ಪರಿಹಾರಕ್ಕೆ ಅರಣ್ಯ ವಾಸಿಗಳ ಆಗ್ರಹ

02:43 PM Dec 21, 2019 | Team Udayavani |

ಚಿಕ್ಕಮಗಳೂರು: ಮಸಗಲಿ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸುತ್ತಿರುವ ಕುಟುಂಬಗಳಿಗೆ ನೀಡುತ್ತಿರುವ ಪರಿಹಾರ ಕವಡೆ ಕಾಸಿನದ್ದಾಗಿದೆ. ಹಾಗಾಗಿ, ವೈಜ್ಞಾನಿಕ ಆಧಾರದಲ್ಲಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮಸಗಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ವಿವಿಧ ಪಕ್ಷಗಳು ಹಾಗೂ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿಯನ್ನು ಶುಕ್ರವಾರ ಭೇಟಿ ಮಾಡಿದ ಹಲವಾರು ಗ್ರಾಮಸ್ಥರು, ಈಗ ನೀಡಲು ಉದ್ದೇಶಿಸಿರುವ ತಲಾ 5 ಲಕ್ಷ ರೂ. ಪರಿಹಾರ ನಮಗೆ ಬೇಡ. ಅರಣ್ಯ ಭೂಮಿಯಿಂದ ಜನರನ್ನು ತೆರವುಗೊಳಿಸುವಾಗ ಇತರೆ ಕಡೆ ಯಾವ ಮಾನದಂಡ ಆಧರಿಸಿ ಪರಿಹಾರ ನೀಡಲಾಗಿದೆಯೋ, ಅದೇ ಮಾದರಿಯಲ್ಲಿ ನಮಗೆ ಪರಹಾರ ನೀಡಬೇಕೆಂದು ಆಗ್ರಹಿಸಿದರು.

ಮಸಗಲಿ ಗ್ರಾಮದಲ್ಲಿ ಒಟ್ಟು 146ಕ್ಕೂ ಹೆಚ್ಚು ಕುಟುಂಬಗಳಿದ್ದು, ಹೆಚ್ಚು ಜಮೀನು ಇರುವವರಿಗೆ 5 ಲಕ್ಷ ರೂ. ಪರಿಹಾರ ನೀಡಲು ಉದ್ದೇಶಿಸಲಾಗಿದೆ. 10 ಗುಂಟೆ, 2, 3 ಎಕರೆ ಇರುವವರಿಗೆ ಯಾವುದೇ ಪರಿಹಾರವಿಲ್ಲ. ಈಗ 76 ಕುಟುಂಬಗಳು 5 ಲಕ್ಷ ರೂ. ಪರಿಹಾರ ಪಡೆಯಲು ಅರ್ಹರು ಎಂದು ಗುರುತಿಸಿದ್ದರೂ ಅದು ಅವರ ಜಮೀನಿಗೆ ಸರಿದೂಗುವ ಪರಿಹಾರವಲ್ಲ ಎಂದು ಆರೋಪಿಸಿದರು. ಅಲ್ಲಿ ತಲೆತಲಾಂತರಗಳಿಂದ ವಾಸಿಸಿದ್ದ 109ಕ್ಕೂ ಹೆಚ್ಚು ಕುಟುಂಬಗಳು ಪರಿಹಾರವಿಲ್ಲದೇ ಎಲ್ಲಿಗೆ ಹೋಗಬೇಕು? ಅವರಿಗೆ ಸರ್ಕಾರದಿಂದ 4 ಗುಂಟೆ ಜಾಗ ನೀಡಿ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಯಾರ ಒಪ್ಪಿಗೆಯೂ ಇಲ್ಲ. 10 ರಿಂದ 20 ಎಕರೆ ಜಮೀನು ಮಾಡಿಕೊಂಡು ಕಂದಾಯ ದಾಖಲೆ ಹೊಂದಿದವರಿದ್ದೇವೆ. ಕೇವಲ 5 ಲಕ್ಷ ರೂ. ಪರಿಹಾರವನ್ನು ಅದು ಯಾವ ಆಧಾರದಲ್ಲಿ ನಿಗದಿಪಡಿಸಿದ್ದಾರೆ ಎಂಬುದು ತಿಳಿದಿಲ್ಲ.

ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ಆಧಾರದಲ್ಲಿ ನಮಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಎಚ್‌.ದೇವರಾಜ್‌, ಸಿಪಿಐ ಮುಖಂಡೆ ರಾಧಾ ಸುಂದರೇಶ್‌, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next