Advertisement

ಕಾಡಾನೆ ದಾಳಿ: ದಸರಾ ಆನೆ ಗೋಪಾಲಸ್ವಾಮಿ ಕೊನೆಯುಸಿರು

09:22 PM Nov 23, 2022 | Team Udayavani |

ಮೈಸೂರು : ದಸರಾದ ಆನೆಗಳಲ್ಲಿ ಒಂದಾದ 39 ವರ್ಷದ ಗೋಪಾಲಸ್ವಾಮಿ ಬುಧವಾರ ಕೊನೆಯುಸಿರು ಎಳೆದಿದೆ.

Advertisement

ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಗೋಪಾಲಸ್ವಾಮಿ ಆನೆ ಮಂಗಳವಾರ ಕಾಡಿಗೆ ಮೇಯಲು ಹೋಗಿದ್ದಾಗ ಕಾಡಾನೆಗಳ ದಾಳಿಗೆ ಸಿಲುಕಿತ್ತು.

ಈ ಆನೆಯನ್ನು 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಎತ್ತೂರಿನಲ್ಲಿ ಸೆರೆ ಹಿಡಿಯಲಾಗಿತ್ತು. ಸೌಮ್ಯ ಸ್ವಭಾವದ ಈ ಆನೆ ಕಳೆದ ಹತ್ತು ವರ್ಷಗಳಿಂದ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿತ್ತು.

ಹುಲಿ ಸೆರೆ, ಕಾಡಾನೆ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿಬಂದಿಗಳು ಗೋಪಾಲಸ್ವಾಮಿಯನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಗೋಪಾಲಸ್ವಾಮಿ ಮತ್ತಿಗೋಡು ಆನೆ ಶಿಬಿರ ಪ್ರಮುಖ ಆನೆಯಾಗಿತ್ತು.

ಎಸ್.ಟಿ.ಸೋಮಶೇಖರ್ ಸಂತಾಪ

Advertisement

ಮೈಸೂರು ದಸರಾ ಗಜಪಡೆಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಗೋಪಾಲಸ್ವಾಮಿ ಆನೆಯು ಅಕಾಲಿಕವಾಗಿ ಕಳೆದುಕೊಂಡಿರುವುದು ತುಂಬಾ ದುಃಖವನ್ನು ಉಂಟು ಮಾಡಿದೆ. ಇನ್ನೂ 40ರ ಆಸುಪಾಸು ವಯಸ್ಸಿನ ಆಕರ್ಷಕ ಮೈಕಟ್ಟು ಹೊಂದಿದ್ದ ಗೋಪಾಲಸ್ವಾಮಿ ಅಪಾರ ಅಭಿಮಾನಿಗಳನ್ನು ಹೊಂದಿತ್ತು. ದಸರಾ ಗಜಪಡೆಯಲ್ಲಿ ಅತಿ ಎತ್ತರವಾದ ಹಾಗೂ 5400 ಕೆ.ಜಿ. ತೂಕ ಹೊಂದಿದ್ದ ಗೋಪಾಲಸ್ವಾಮಿ ಆನೆಯು ಅಭಿಮನ್ಯುವಿನ ನಂತರ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಭರವಸೆ ಮೂಡಿಸಿತ್ತು. 2012ರಿಂದ ಪ್ರತಿ ವರ್ಷ ದಸರಾ ಮೆರವಣಿಗೆಯಲ್ಲಿ ಸತತ ಭಾಗವಹಿಸುತ್ತಿದ್ದ ಗೋಪಾಲಸ್ವಾಮಿಯು ನಿಶಾನೆ, ನೌಪತ್ ಆನೆ, ಸಾಲಾನೆ ಹಾಗೂ ಪಟ್ಟದ ಆನೆಯಾಗಿ ಹಲವಾರು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಎಲ್ಲರ ಪ್ರೀತಿ ಗಳಿಸಿತ್ತು. ದಸರಾ ಪಡೆಯಲ್ಲೇ ಎತ್ತರದ ಮೈಕಟ್ಟು ಹೊಂದಿದ್ದ ಗೋಪಾಲಸ್ವಾಮಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ. ಗೋಪಾಲಸ್ವಾಮಿ ಆನೆಗೆ ಭಗವಂತ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next