Advertisement

ಹುಲಿ ಕೂಂಬಿಂಗ್ ಗೆ ಸಹಕಾರ ನೀಡುವಂತೆ ಅರಣ್ಯ ಇಲಾಖೆ ಮನವಿ

10:30 AM Sep 12, 2021 | Team Udayavani |

ಹುಣಸೂರು : ಮೂರು ದಿನಗಳ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಅಯ್ಯನಕೆರೆ ಹಾಡಿಯ ಆದಿವಾಸಿ ಯುವಕ ಗಣೇಶ್‌ನನ್ನು ಕೊಂದ ಹುಲಿರಾಯನ ಪತ್ತೆಗೆ ಒಂದೆಡೆ ಕೂಂಬಿಂಗ್ ಆರಂಭಿಸಿದ್ದರೆ, ಮತ್ತೊಂದೆಡೆ ಕಳ್ಳಭೇಟೆ, ಕ್ಯಾಮರಾ ಕಳ್ಳತನವೂ ನಡೆದಿದೆ. ಈನಡುವೆ ಭಯವಿಲ್ಲದ ಜನರು ಜಾನುವಾರುಗಳನ್ನು ಇನ್ನೂ ಕಾಡಿಗೆ ಬಿಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

Advertisement

ಯುವಕನನ್ನು ಬಲಿ ಪಡೆದ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಅನುಮತಿಯೊಂದಿಗೆ ನಾಗರಹೊಳೆ ಮುಖ್ಯಸ್ಥ ಮಹೇಶ್‌ ಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆನಡೆಸಿ, ಹುಣಸೂರು ವಲಯದ ನೇರಳಕುಪ್ಪೆಬಿ.ಹಾಡಿ ಬಳಿಯಲ್ಲಿ ಬೇಸ್ ಕ್ಯಾಂಪ್ ತೆರೆದಿದ್ದು, ಸೆ.9 ರಿಂದಲೇ ಹುಲಿಸೆರೆಗೆ ತಾಂತ್ರಿಕ ತಂಡ, ಟ್ರ್ಯಾಕಿಂಗ್ ತಂಡ, ಅರವಳಿಕೆ ಚುಚ್ಚುಮದ್ದು ನೀಡುವ ತಂಡ, ಆರ್. ಆರ್. ಟಿ ಹಾಗೂ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಪ್ರಚಾರ ತಂಡವನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ : ಭಾರೀ ಇಳಿಕೆ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 28,591 ಕೋವಿಡ್ ಪ್ರಕರಣ ಪತ್ತೆ

ಶನಿವಾರ ಸಂಜೆ ಹುಣಸೂರು ವಲಯದ ಬೇಸ್ ಕ್ಯಾಂಪಿನಲ್ಲಿ ಮೇಟಿಕುಪ್ಪೆ ಎಸಿಎಫ್. ಮಹದೇವ್, ಆರ್‌ ಎಫ್‌ ಓ ಹನುಮಂತ ರಾಜುರೊಂದಿಗೆ ಜಂಟೀ ಸುದ್ದಿಗೋಷ್ಟಿಯಲ್ಲಿ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಅವರು ಘಟನೆ ನಡೆದ ರಾತ್ರಿಯೇ ಹುಲಿಸೆರೆಗಾಗಿ ಬೋನ್  ಹಾಗೂ ಟ್ರಾಪಿಂಗ್ ಕ್ಯಾಮರಾ ಅಳವಡಿಸಲಾಗಿತ್ತು. ಘಟನಾ ಸ್ಥಳದಿಂದ ಸುಮಾರು 50ಮೀ.ದೂರದಲ್ಲಿ ಒಂದು ಹುಲಿಯ ಛಾಯಾಚಿತ್ರ ಸೆರೆಯಾಗಿತ್ತು. ಸ್ಥಳದಲ್ಲಿ ಅಟ್ಟಣೆ ನಿರ್ಮಿಸಿ, ಪಕ್ಕದಲ್ಲೇ ಮತ್ತೊಂದು ಕೇಜ್ ಇಟ್ಟು ಸುತ್ತಮುತ್ತಲಿನಲ್ಲಿ ಸುಮಾರು 40 ಟ್ರಾಪಿಂಗ್ ಕ್ಯಾಮರಾ ಅಳವಡಿಸಿ. ಅಟ್ಟಣೆ ಮೇಲೆ ಪಶು ವೈದ್ಯಾಧಿಕಾರಿ ಡಾ.  ರಮೇಶ್ ಮತ್ತವರ ತಂಡ ಹುಲಿಯ ಚಲನವಲನದ ಬಗ್ಗೆ ನಿಗಾವಹಿಸಿದ್ದರೂ ಮತ್ತೆ ಹುಲಿಯ ಪತ್ತೆಯಾಗಲಿಲ್ಲ.

ನಾಲ್ಕು ತಂಡ ಕಾರ್ಯಾ ಚರಣೆಯಲ್ಲಿ:  ಹುಲಿ ಕಾಣಿಸಿಕೊಳ್ಳದ್ದರಿಂದ ಸೆ.10 ರಂದು ಅರಣ್ಯ ಸಿಬ್ಬಂದಿಗಳು, ಎಸ್‌ ಟಿ ಪಿ ಎಫ್ ಸಿಬ್ಬಂದಿಗಳು ಸೇರಿದಂತೆ ನಾಲ್ಕು ತಂಡಗಳನ್ನು ರಚಿಸಿ, ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸಿದ್ದು, ಹುಲಿ ಹೆಜ್ಜೆ ಗುರುತು ಮತ್ತು ಮಲದ ಆಧಾರದ ಮೇಲೆ ಹುಲಿ ಹೋದಕಡೆಗಳಲ್ಲೆಲ್ಲಾ ಒಟ್ಟು 70 ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಈ ವೇಳೆ ಏಳು ಕಡೆ ಹುಲಿಗಳ ಛಾಯಾಚಿತ್ರಗಳು ಸೆರೆಯಾಗಿದ್ದವು, ಆದರೆ ಘಟನೆ ನಡೆದ ದಿನ ಕಾಣಿಸಿಕೊಂಡಿದ್ದ ಹುಲಿಯ ಬೆನ್ನ ಮೇಲೆ ಗಾಯವಾಗಿತ್ತು. ಆ ನಂತರದಲ್ಲಿ ಸಿಕ್ಕ ಹುಲಿಗಳ ಛಾಯಾಚಿತ್ರಗಳನ್ನು ಪರಿಶೀಲಿಸಿದ ವೇಳೆ ಇವು ಬೇರೆ ಮೂರು ಹುಲಿಗಳಾಗಿವೆ. ಇದೀಗ ಕಾರ್ಯಾಚರಣೆ ಮುಂದುವರೆಸಿದ್ದು, ಹುಲಿ ಓಡಾಡಿರುವ ಹೆಜ್ಜೆ, ಮಲ ಆಧರಿಸಿ ಕೂಂಬಿಂಗ್ ನಡೆಸಲಾಗುತ್ತಿದೆ. ಅಲ್ಲದೆ ಹಾಸನದಿಂದ ಅರವಳಿಕೆ ತಜ್ಞ ವೆಂಕಟೇಶರನ್ನು ಸಹ ಕರೆಸಲಾಗಿದೆ. ಒಟ್ಟಾರೆ ಅರಣ್ಯ ಸಿಬ್ಬಂದಿಗಳು ಹುಲಿ ಪತ್ತೆ ಹಚ್ಚಲು ಮಳೆಯ ನಡುವೆಯೇ ಶ್ರಮ ಹಾಕುತ್ತಿದ್ದಾರೆಂದರು.

Advertisement

ಜಾನುವಾರು ಮೇಲೆ ದಾಳಿ : ಕಾರ್ಯಾಚರಣೆ ನಡುವೆಯೇ ಶನಿವಾರದಂದು ಉದ್ಯಾನದಂಚಿನ ಕಿಕ್ಕೇರಿಕಟ್ಟೆ ಬಳಿ ಗಣೇಶರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು, ಅದೇ ಹುಲಿ ಇರಬಹುದೆಂದು ಶಂಕಿಸಲಾಗಿದ್ದು, ಆಭಾಗದಲ್ಲೂ ಹೆಚ್ಚಿನ ಕ್ಯಾಮರಾ ಅಳವಡಿಸಲಾಗುವುದು. ಕೂಂಬಿಂಗ್ ನಡೆಸಲಾಗುವುದು. ಗಾಯಗೊಂಡಿರುವ ಹಸುವಿಗೆ ಇಲಾಖೆಯ ವೈದ್ಯ ಡಾ.ರಮೇಶ್‌ ರವರೇ ಚಿಕಿತ್ಸೆ ನೀಡಿದ್ದಾರೆ.

ಜಗ್ಗದ ಜನ- ಕಾಡಿನತ್ತ ದನಗಳು : ಅಯ್ಯನಕೆರೆ ಹಾಡಿಯಂಚಿನಲ್ಲೇ ಹುಲಿ ದಾಳಿಯಿಂದ ಗಣೇಶ ಸಾವಿನ ಘಟನೆ ಸಂಭವಿಸಿದ್ದರೂ ಹೆದರದ ಅಕ್ಕಪಕ್ಕದ ಹಳ್ಳಿಯ ಜನರು ಹೆದರಿದಂತೆ ಕಾಣುತ್ತಿಲ್ಲ, ಅರಣ್ಯದಲ್ಲಿ ಜಾನುವಾರುಗಳನ್ನು ಮೇಯಲು ಬಿಟ್ಟಿರುವುದು, ಸೌದೆ ತರುತ್ತಿರುವುದು ಅಲ್ಲದೆ ಜನರು ಕಾಡಿನಲ್ಲಿ ಅಡ್ಡಾಡುತ್ತಿರುವುದು ಕಂಡುಬಂದಿದ್ದು, ಅಲ್ಲದೆ ಕಳ್ಳಭೇಟೆ ಹಾಗೂ ಕ್ಯಾಮರಾ ಕಳ್ಳತನ ಸಹ ನಡೆದಿದ್ದು, ಹುಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಗ್ರಾಮಸ್ಥರು ಸಹಕಾರ ನೀಡಿ, ಎಸಿಎಫ್ ಸತೀಶ್ ಮನವಿ : ಹಳ್ಳಿಗಳಲ್ಲಿ ಕಾಡಿಗೆ ಯಾರೂ ಬರಬಾರದು, ಜಾನುವಾರುಗಳನ್ನು ಬಿಡಬಾರದೆಂದು ನಿತ್ಯ ವ್ಯಾಪಕ ಪ್ರಚಾರ ಮಾಡುತ್ತಿದ್ದರೂ ಜನ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಇದರಿಂದ ನಮಗೂ ಹಾಗೂ ಇಲಾಖೆ ಸಿಬ್ಬಂದಿಗಳಿಗೂ ನೋವುಂಟಾಗಿದೆ. ಕಾರ್ಯಾಚರಣೆ ನಿಲ್ಲಿಸಿ ಪೆಟ್ರೋಲಿಂಗ್ ಕಡೆಗೆ ಗಮನಹರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಎ ಸಿ ಎಫ್. ಸತೀಶ್‌ ರವರು ಇನ್ನಾದರೂ ಇಲಾಖೆಯೊಂದಿಗೆ ಹಳ್ಳಿಗರು ಸಹಕಾರ ನೀಡಬೇಕೆಂದು ಕಳಕಳಿಯ ಮನವಿ ಮಾಡಿದರು. ಗೋಷ್ಟಿಯಲ್ಲಿ ಕಾರ್ಯಾಚರಣೆ ತಂಡಗಳ ಮುಖ್ಯಸ್ಥರು, ಸಿಬ್ಬಂದಿಗಳು ಇದ್ದರು.

ಜಿಂಕೆ ಭೇಟೆ-ಕ್ಯಾಮರಾ ಕಳ್ಳತನ : ಒಂದೆಡೆ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹಗಲು-ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿರುವ ನಡುವೆಯೇ ಶುಕ್ರವಾರ ರಾತ್ರಿ ನಾಲ್ಕು ಟ್ರಾಪಿಂಗ್ ಕ್ಯಾಮರಾಗಳನ್ನು ಕಳ್ಳತನ ಮಾಡಲಾಗಿದೆ, ಅಲ್ಲದೆ ಭೇಟೆಗಾರರು ಜಿಂಕೆಯನ್ನು ಭೇಟೆಯಾಡಿದ್ದು, ಗಂಭೀರವಾಗಿ ಪರಿಗಣಿಸಿದ್ದು, ಖಚಿತ ಮಾಹಿತಿ ಮೇರೆಗೆ ಹನಗೋಡಿಗೆ ಸಮೀಪದ ಶಿಂಡೇನಹಳ್ಳಿ ಸುಜೇಂದ್ರನ ಮನೆ ಮೇಲೆ ದಾಳಿಮಾಡಿ ಎರಡು ಕೆ.ಜಿ. ಜಿಂಕೆ ಮಾಂಸವನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಅಲ್ಲದೆ ಕ್ಯಾಮರಾ ಕಳುವಿನ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಮಂಗಳೂರು : ಹೊಯ್ಗೆ ಬಜಾರ್‌ ಸಮುದ್ರ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next