Advertisement

ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ

04:55 PM Dec 23, 2021 | keerthan |

ಶಿವಮೊಗ್ಗ: ಇಲ್ಲಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿ ಮ್ಯೂಸಿಯಂ ಸೀಜ್ ಮಾಡಿದ್ದಾರೆ. ಬೆಂಗಳೂರು ಮತ್ತು ಶಿವಮೊಗ್ಗದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿವೆ. ಬೆಳಗ್ಗೆಯಿಂದ ಪರಿಶೀಲನಾ ಕಾರ್ಯ ನಡೆಸಲಾಯಿತು.

Advertisement

ಸೋಮಿನಕೊಪ್ಪ ಸಮೀಪದ ಪಶುವೈದ್ಯಕೀಯ ಮಹಾವಿದ್ಯಾಲಯದ ರೋಗಶಾಸ್ತ್ರ ಮ್ಯೂಸಿಯಂ ಒಂದರಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಸುಮಾರು ಹತ್ತು ಅಧಿಕಾರಿಗಳ ತಂಡ ದಾಳಿ ಮತ್ತು ಪರಿಶೀಲನೆ ನಡೆಸಿತು.

ಶಿವಮೊಗ್ಗ ಮತ್ತು ಬೆಂಗಳೂರಿನಿಂದ ಆಗಮಿಸಿರುವ ಅರಣ್ಯಾಧಿಕಾರಿಗಳ ತಂಡ ದಾಳಿಯಲ್ಲಿ ಪಾಲ್ಗೊಂಡಿದೆ. ಎಸಿಎಫ್ ವೀರೇಶ್ ಗೌಡ ಪೊಲೀಸ್ ಪಾಟೀಲ್ ಅವರ ನೇತೃತ್ವದಲ್ಲಿ ಅರಣ್ಯ ಅಪರಾಧ ನಿಯಂತ್ರಣ ವಿಭಾಗದ ಅಧಿಕಾರಿಗಳು ಬೆಂಗಳೂರಿನಿಂದ ಬಂದಿದ್ದಾರೆ.

ಪಶುವೈದ್ಯಕೀಯ ಮಹಾವಿದ್ಯಾಲಯದ ಲ್ಯಾಬ್‌ ನಲ್ಲಿ ಶೆಡ್ಯೂಲ್ 1ಕ್ಕೆ ಸೇರಿದ ಪ್ರಾಣಿಗಳ ಅಂಗಗಳನ್ನು ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅಂಗಗಳನ್ನು ಇಟ್ಟುಕೊಂಡಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ದೂರು ಬಂದಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಮ್ಯೂಸಿಯಂನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಅರಣ್ಯ ಇಲಾಖೆ ವೈದ್ಯರು ವಿವಿಧ ಅರಣ್ಯಗಳಲ್ಲಿ ಮೃತಪಟ್ಟ ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಾರೆ. ಪಶುವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಕೂಡ ಈ ಮರಣೋತ್ತರ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಂತಹ ಸಂದರ್ಭ ವಿದ್ಯಾರ್ಥಿಗಳ ಅಧ್ಯಯನದ ದೃಷ್ಟಿಯಿಂದ ಪ್ರಾಣಿಗಳ ಕೆಲವು ಅಂಗಗಳನ್ನು ತಂದು ಸಂಗ್ರಹಾಲಯದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.

Advertisement

ಶೆಡ್ಯೂಲ್ 1ರಲ್ಲಿ ಬರುವ ಪ್ರಾಣಿಗಳ ಅಂಗಗಳನ್ನು ಸಂಗ್ರಹಿಸುವುದು ಅಪರಾಧ. ಅಧ್ಯಯನ ದೃಷ್ಟಿಯಿಂದ ಇವುಗಳನ್ನು ತಂದು ಇಟ್ಟುಕೊಳ್ಳುವುದಕ್ಕೆ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಕೇವಲ ಮೌಖಿಕ ಅನುಮತಿ ಮೇರೆಗೆ ಅಂಗಗಳನ್ನು ತಂದು ಇಟ್ಟುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬೆಂಗಳೂರಿನಲ್ಲಿರುವ ಅರಣ್ಯ ಅಪರಾಧ ನಿಯಂತ್ರಣ ವಿಭಾಗಕ್ಕೆ ದೂರು ನೀಡಲಾಗಿದೆ.

ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು: ಶಿವಮೊಗ್ಗದ ಸೋಮಿನಕೊಪ್ಪದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯವು ರಾಜ್ಯದ ಪ್ರಮುಖ ಕಾಲೇಜುಗಳಲ್ಲಿ ಒಂದಾಗಿದೆ. ಸದ್ಯ ಇಲ್ಲಿ ಮುನ್ನೂರಕ್ಕು ಹೆಚ್ಚು ವಿದ್ಯಾರ್ಥಿಗಳು ವಿವಿಧ ಕೋರ್ಸುಗಳಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಬೃಹತ್ ಕ್ಯಾಂಪಸ್’ನೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಆದರೆ ಶೆಡ್ಯೂಲ್ 1ರಲ್ಲಿ ಬರುವ ಪ್ರಾಣಿಗಳ ಅಂಗಗಳನ್ನು ಅನುಮತಿ ಇಲ್ಲದೆ ಸಂಗ್ರಹಿಸಿರುವ ಕಳಂಕಕ್ಕೆ ತುತ್ತಾಗಿದೆ.

ಏನಿದು ಶೆಡ್ಯೂಲ್ 1 ಪ್ರಾಣಿಗಳು?: ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಪ್ರಾಣಿಗಳನ್ನು ಐದು ಶೆಡ್ಯೂಲ್‌ಗಳಲ್ಲಿ ವಿಂಗಡಿಸಲಾಗಿದೆ. ಶೇಡ್ಯೂಲ್ 1ರಲ್ಲಿ ಮೂರು ವಿಭಾಗಗಳಿವೆ. ಪ್ರಾಣಿಗಳು, ಜಲಚರಗಳು ಮತ್ತು ಪಕ್ಷಿಗಳು ಎಂದು ವಿಭಾಗಿಸಲಾಗಿದೆ. ಹುಲಿ, ಚಿರತೆ, ಕಾಡು ಕೋಣ ಸೇರಿದಂತೆ 41 ಪ್ರಾಣಿಗಳು ಈ ಭಾಗದಲ್ಲಿವೆ. ಇವುಗಳ ಅಂಗಗಳನ್ನು ಸಂಗ್ರಹಿಸುವುದ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಪರಾಧವಾಗಲಿದೆ.

ಸೀಜ್ ಮಾಡಿದ್ದೇವೆ: ದಾಳಿ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಎಫ್‌ಒ ರವೀಂದ್ರ ಕುಮಾರ್, ಪ್ರಾಣಿಗಳ ಮರಣೋತ್ತರ ಪರೀಕ್ಷೆ ಸಂದರ್ಭ ಕೆಲವು ವಸ್ತುಗಳನ್ನು ತಂದು ಲ್ಯಾಬ್‌ ನಲ್ಲಿ ಇಟ್ಟುಕೊಂಡಿದ್ದಾರೆ. ಅನುಮತಿ ಪಡೆದು ಇವುಗಳನ್ನು ತಂದಿಟ್ಟುಕೊಳ್ಳಬೇಕಿತ್ತು. ಆದರೆ ಯಾವುದೆ ಅನುಮತಿ ಪಡೆದಿರುವ ಹಿನ್ನೆಲೆಯಲ್ಲಿ ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next