ಸುಬ್ರಹ್ಮಣ್ಯ: ಕಿದುವಿನ ಅಂತಾರಾಷ್ಟ್ರೀಯ ತೆಂಗು ಅಭಿವೃದ್ಧಿ ಕೇಂದ್ರದ ಭವಿಷ್ಯ ಮತ್ತೆ ತೂಗುಯ್ಯಾ ಲೆಯಲ್ಲಿದೆ. ಇಲ್ಲಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವಂತೆ ಕೋರಿ ಮೆಸ್ಕಾಂಗೆ ಅರಣ್ಯ ಇಲಾಖೆ ಪತ್ರ ನೀಡಿದ್ದು, ಸಂಶೋಧನ ಕೇಂದ್ರಕ್ಕೆ ಮೆಸ್ಕಾಂನ ಸೂಚನ ಪತ್ರ ಸೆ. 6ರಂದು ತಲುಪಿದೆ.
ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಯಿಂದ ಮೆಸ್ಕಾಂ ಪುತ್ತೂರು ವಿಭಾಗಕ್ಕೆ ಆ. 31ರಂದು ಪತ್ರ ಬರೆದಿದ್ದು, ಕಿದು ಕೇಂದ್ರವು ಲೀಸ್ ಪಡೆದ ಭೂಮಿಯ ಸಂಬಂಧ ಅರಣ್ಯ ಇಲಾಖೆಗೆ ಪಾವತಿಸಲು ಬಾಕಿ ಇರಿಸಿರುವ ಮೊತ್ತವನ್ನು ಉಲ್ಲೇಖೀಸಲಾಗಿದೆ. ಈ ಸಂಬಂಧ ಅದು ಕೇಂದ್ರದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಮೆಸ್ಕಾಂಗೆ ಸೂಚಿಸಿದೆ.
1972ರಲ್ಲಿ ಕಿದು ರಕ್ಷಿತಾರಣ್ಯದಲ್ಲಿ 300 ಎಕರೆ ಭೂಮಿಯನ್ನು ಅರಣ್ಯ ಇಲಾಖೆಯಿಂದ 30 ವರ್ಷಗಳ ಅವಧಿಗೆ ಲೀಸಿಗೆ ಪಡೆದು ಸಂಶೋಧನ ಉಪಕೇಂದ್ರವನ್ನು ಸ್ಥಾಪಿಸಲಾಗಿತ್ತು. ಲೀಸ್ ಅವಧಿ 2000ನೇ ಇಸವಿಗೆ ಮುಗಿದಿತ್ತು. ಈ ಭೂಮಿಯನ್ನು ಮರಳಿ ಪಡೆಯಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದಂತೆ ಅರಣ್ಯ ಇಲಾಖೆ ಈ ಹಿಂದೆ ನೋಟಿಸ್ ಜಾರಿಗೊಳಿಸಿತ್ತು. ಲೀಸ್ ಅವಧಿ ಮುಗಿದಿದ್ದರೂ ನವೀಕರಿಸದೆ, ಮೊತ್ತವನ್ನೂ ಬಾಕಿ ಇರಿಸಿರುವುದರಿಂದ ಅರಣ್ಯ ಭೂಮಿ ಯನ್ನು ಹಿಂಪಡೆಯುವುದಾಗಿ ಅರಣ್ಯ ಇಲಾಖೆ ತಿಳಿಸಿತ್ತು. ಜಾಗ ಮರಳಿಸುವುದು ಅಥವಾ ಬದಲಾಗಿ 300 ಎಕರೆ ಖಾಲಿ ಜಾಗ ದಲ್ಲಿ ಅರಣ್ಯ ಬೆಳೆಸಲು ತಗಲುವ 12 ಕೊ.ರೂ. ಭರಿಸಿ ಮತ್ತೆ 30 ವರ್ಷಗಳ ಅವಧಿಗೆ ಲೀಸ್ ಮುಂದುವರಿಸಲು ಅವಕಾಶ ಕಲ್ಪಿಸಿತ್ತು.
ಎಚ್ಚರಿಸಿದ್ದ ‘ಉದಯವಾಣಿ’ ವರದಿ
ಲೀಸಿನ ಅವಧಿ ಮುಗಿದಿದ್ದರೂ ಸಿಪಿಸಿಆರ್‌ಐಯ ಹಿರಿಯ ಅಧಿಕಾರಿಗಳು ಭೂಮಿ ನವೀಕರಣಕ್ಕೆ ಆಸಕ್ತಿ ತೋರದೆ, ಆಂಧ್ರಕ್ಕೆ ಸ್ಥಳಾಂತರಿಸುವ ಹುನ್ನಾರ ನಡೆಸಿದ್ದ ಬಗ್ಗೆ ‘ಉದಯವಾಣಿ’ ವರದಿ ಪ್ರಕಟಿಸಿತ್ತು. ಬಳಿಕ ಸ್ಥಳೀಯರು, ಕೃಷಿಕರು ಎಚ್ಚೆತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು. ಕೇಂದ್ರ ಸರಕಾರದ ಮಟ್ಟದಲ್ಲೂ ಕೇಂದ್ರ ಸ್ಥಳಾಂತರಿಸದಂತೆ ಪ್ರಯತ್ನಗಳು ನಡೆದಿದ್ದವು.
ಆದರೂ ಮುಚ್ಚುಗಡೆ ಆತಂಕ ದೂರವಾಗಿಲ್ಲ. ಲೀಸ್ ನವೀಕರಣ, ಶುಲ್ಕ ಭರಿಸುವ ಪ್ರಕ್ರಿಯೆಗಳು ನನೆಗುದಿಗೆ ಬಿದ್ದಿವೆ. ಸರಕಾರದ ಮಟ್ಟದಲ್ಲಿ ನಿರೀಕ್ಷಿತ ಬೆಳವಣಿಗೆ ನಡೆಯದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೇಲೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಅದು ಒಂದೊಂದೇ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ.
ಮಾಹಿತಿ ನೀಡಿದ್ದೇವಷ್ಟೆ
ಅರಣ್ಯ ಇಲಾಖೆಯಿಂದ ಪತ್ರ ಬಂದದ್ದು ನಿಜ. ಅದರ ಮಾಹಿತಿಯನ್ನು ಕೇಂದ್ರಕ್ಕೆ ತಲುಪಿಸಿದ್ದೇವೆ.
– ನರಸಿಂಹ, ಇ.ಇ., ಮೆಸ್ಕಾಂ ಪುತ್ತೂರು ಉಪ ವಿಭಾಗ
-ಬಾಲಕೃಷ್ಣ ಭೀಮಗುಳಿ