Advertisement

ಅರಣ್ಯ ಇಲಾಖೆಯಿಂದ ಹೀಗೊಂದು ಅರಣ್ಯ ಸೃಷ್ಟಿ!

04:53 PM Jun 26, 2022 | Team Udayavani |

ಸುರತ್ಕಲ್‌: ಅಕೇಶಿಯಾ, ನೀಲಗಿರಿ ಸಸಿಗಳನ್ನು ಬೆಳೆಸುವುದನ್ನು ಸರಕಾರ ನಿರ್ಬಂಧಿಸಿದ್ದರೂ ಕೆಲವೊಂದು ಸಬೂಬು ನೀಡಿ ಸುರತ್ಕಲ್‌ ಸಮೀಪದ ಸೂರಿಂಜೆ ದೇಲಂತಬೆಟ್ಟುವಿನ ಗುಡ್ಡದ 50 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯೇ ಸದ್ದಿಲ್ಲದೆ ಅಕೇಶಿಯಾ ನೆಡಲು ಇದೀಗ ಮುಂದಾಗಿದೆ.

Advertisement

ಅಕೇಶಿಯಾ ಭಸ್ಮಾಸುರನಂತೆ ಪಶ್ಚಿಮಘಟ್ಟ ಹಾಗೂ ಇತರೆಡೆ ಬೆಳೆಯುತ್ತಲೇ ಸಾಗಿದೆ. ಇದರ ಬೀಜಗಳಿಂದ ಮತ್ತೆ ಮತ್ತೆ ಹುಟ್ಟಿ ಬರುತ್ತಿವೆ. ದೇಲಂತಬೆಟ್ಟುವಿನಲ್ಲಿ ಬೃಹತ್‌ ಆಗಿ ಬೆಳೆದ ಅಕೇಶಿಯಾ ಮರಗಳನ್ನು ಕಡಿದು ಸಾಗಾಟ ಮಾಡಿದರೆ, ಅರಣ್ಯ ಇಲಾಖೆ ಮತ್ತೆ ಅಕೇಶಿಯಾ ಸಸಿ ನಾಟಿಗೆ ಮುಂದಾಗಿದ್ದು, ಈಗಾಗಲೇ ಗುತ್ತಿಗೆ ನೀಡಿ ಕೆಲಸ ಪ್ರಾರಂಭಿಸಿದೆ.

ಸುತ್ತಮುತ್ತ ರಾಜೀವ ನಗರ ಸಹಿತ ವಸತಿ ಬಡಾವಣೆಯಿದೆ. ಈ ಪ್ರದೇಶದಲ್ಲಿ ಯಥೇತ್ಛ ನೀರಿನ ಮೂಲಗಳಿವೆ. ಅಂತರ್ಜಲಕ್ಕೆ ಕೊರತೆಯಿಲ್ಲ. ಆದರೆ ಈಗಾಗಲೇ ಅಕೇಶಿಯಾ ಬೆಳೆದ ಪ್ರದೇಶದಲ್ಲೆಲ್ಲ ಅಂತರ್ಜಲ ಕುಸಿದಿದ್ದರೆ, ಇತರ ಸಸ್ಯ ಪ್ರಭೇದ ಬೆಳೆಯಲಾರದು. ದನಕರುಗಳಿಗೆ, ಸಾಕುಪ್ರಾಣಿಗಳಿಗೆ ಸೊಪ್ಪು ತೆಗೆಯಲೂ ಪ್ರಯೋಜನವಿಲ್ಲದ ಅಕೇಶಿಯಾ ನಾಟಿಯಿಂದ ಮಂಗಗಳಿಗೆ, ಪಕ್ಷಿಗಳಿಗೆ ಹಣ್ಣುಹಂಪಲು ಸಿಗದೆ ಸಮೀಪದ ಹಳ್ಳಿಗೆ ಲಗ್ಗೆ ಇಡುತ್ತಿವೆ.

ಚಿರತೆಗಳಿಗೆ ಮರದ ಆಶ್ರಯ ಸಿಗದೆ ನಾಡಿಗೆ ನುಗ್ಗಿ ಕೋಳಿ, ಶ್ವಾನ, ದನ ಕರುಗಳ ಬಲಿ ತೆಗೆದುಕೊಳ್ಳುತ್ತಿವೆ. ಅಕೇಶಿಯಾ ಮರದ ಕೆಳಭಾಗದಲ್ಲಿ ಹುಲ್ಲೂ ಬೆಳೆಯುವುದಿಲ್ಲ ಹೀಗಾಗಿ ಪ್ರಾಣಿ, ಪಕ್ಷಿಗಳಿಗೂ ಬೇಕಾದ ಸ್ವಾಭಾವಿಕ ಅರಣ್ಯ ಬೆಳೆಸುವ ಕಾಯಕವಾಗಬೇಕಿದೆ.

ಸರಕಾರದ ಆದೇಶದಲ್ಲೇನಿದೆ

Advertisement

ರೈತರ, ಸ್ಥಳೀಯರ ಆಗ್ರಹದ ಮೇರೆಗೆ ಸರಕಾರವು 2016-17ನೇ ಸಾಲಿನಲ್ಲಿ ಆದೇಶ ನೀಡಿ ಬೆಂಗಳೂರು ಗ್ರಾಮಾಂತರ,ರಾಮನಗರ ಸಹಿತ ವಿವಿಧೆಡೆ ನೀಲಗಿರಿ, ಆಕೇಶಿಯಾ ಕಟಾವು ಮಾಡಿ ತೆರವು ಮಾಡಲಾಗುತ್ತಿದ್ದರೆ, ಇತ್ತ ದೇಲಂತಬೆಟ್ಟುವಿನಲ್ಲಿ ಕಟಾವು ಮಾಡಿದ ಸ್ಥಳದಲ್ಲಿ ಮತ್ತೆ ಅಕೇಶಿಯಾ ಪೋಷಣೆಗೆ ತಯಾರಿ ನಡೆಯುತ್ತಿದೆ.

ಇದರ ಬದಲಿಗೆ ಉಪಯುಕ್ತ ಸ್ಥಳೀಯ ಜಾತಿಯ ನೆಡು ತೋಪು ಬೆಳಸಬೇಕು. ನೀಲಗಿರಿ ಬೆಳೆಯ ಬಗ್ಗೆ ರೈತರಿಗೆ, ಸಾರ್ವಜನಿಕರಿಗೆ ಪ್ರೋತ್ಸಾಹ, ಅದರ ಮಾಹಿತಿ ನೀಡಬಾರದು ಎಂಬ ಸ್ಪಷ್ಟ ಆದೇಶವಿದೆ.

ಸ್ಥಳೀಯರಲ್ಲಿ ವಿರೋಧದ ಛಾಯೆ ಪರಿಸರಕ್ಕೆ ಹಾನಿಯಾಗುವ ಅಕೇಶಿಯಾ ಮತ್ತೆ ನಾಟಿ ಬೇಡ ಎಂಬ ಕೂಗಿಗೆ ಬಲ ಬರತೊಡಗಿದೆ. ಉರುವಲಿಗೆ ಅಕೇಶಿಯಾ ನೆಡುತ್ತೇವೆ ಹಾಗೂ ದೇಲಂತಬೆಟ್ಟು ಬಂಡೆ ಗಲ್ಲುಗಳ ಪ್ರದೇಶವಾಗಿರುವುದರಿಂದ ಬೇರೆ ಜಾತಿಯ ಸಸಿ ಬೆಳೆಯಲಾರದು ಎಂಬ ಸಬೂಬು ಅರಣ್ಯ ಇಲಾಖೆಯ ಆಧಿಕಾ ರಿಗಳು ಗ್ರಾಮ ಸಭೆಯಲ್ಲಿ ನೀಡಿದ್ದಾರೆ ಎಂಬು ಆರೋಪವಿದ್ದು ಇದಕ್ಕೆ ಸ್ಥಳೀಯ ಪಂಚಾಯತ್‌ ವಿರೋಧ ವ್ಯಕ್ತಪಡಿಸಿದೆ.

ಪ್ರಾಣಿಗಳ ಉಪಟಳ: ಅಕೇಶಿಯಾ ನೆಡು ತೋಪುಗಳಿಂದ ಪರಿಸರಕ್ಕೆ, ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗು ತ್ತದೆ.ಈಗಾಗಲೇ ದೇಲಂತಬೆಟ್ಟು ಪ್ರದೇಶದಲ್ಲಿ ಕಾಡುಕೋಣ, ಚಿರತೆ, ಮಂಗಳಗಳ ಉಪಟಳ ಗ್ರಾಮದಲ್ಲಿ ಕಾಣಸಿಗುತ್ತಿದೆ. ಕಿರು ಆರಣ್ಯ ಪ್ರದೇಶದಲ್ಲಿ ಇವುಗಳಿಗೆ ಆಶ್ರಯ ಸಿಗುತ್ತಿಲ್ಲ. ಅಕೇಶಿಯಾದಿಂದ ಇವುಗಳಿಗೆ ಏನು ಪ್ರಯೋಜನವಿದೆ. ವಾಣಿಜ್ಯ ಬೆಳೆಯ ಮತ್ತು ಆದಾಯದ ದೃಷ್ಟಿಯಿಂದ ಅರಣ್ಯ ಇಲಾಖೆ ಗಮನ ಹರಿಸದೆ ನಮ್ಮ ಜೀವನದ ಕಷ್ಟಕ್ಕೂ ಸ್ಪಂದಿಸಬೇಕು. ಉತ್ತಮ ಸ್ಥಳೀಯ ಸಸಿ ನೆಟ್ಟು ಪೋಷಿಸಿ, ನಾವೂ ಬೆಂಬಲ ನೀಡುತ್ತೇವೆ. ಆದರೆ ಅಕೇಶಿಯಾ ಬೇಡ. –ಜೀತೇಂದ್ರ ಶೆಟ್ಟಿ, ಅಧ್ಯಕ್ಷರು, ಸೂರಿಂಜೆ ಗ್ರಾ.ಪಂ.

ಗ್ರಾಮಸರು ಬಯಸಿದರೆ ಸ್ಥಳೀಯ ಗಿಡ ನಾಟಿ: ದೇಲಂತಬೆಟ್ಟುವಿನ ಅರಣ್ಯ ಭೂಮಿಯ 10 ಎಕರೆ ಪ್ರದೇಶದಲ್ಲಿ ಮಾತ್ರ ಅಕೇಶಿಯಾ ನೆಡುತೋಪು ಮಾಡಲಾಗುತ್ತಿದೆ. ಇಲ್ಲಿನ ಗುಡ್ಡ ಪ್ರದೇಶದ ಮಣ್ಣಿನಲ್ಲಿ ಬೇರೆ ಸಸಿ ಬೆಳೆಯಲಾರದು. ಅತಿಕ್ರಮಣ ಆಗದಂತೆ ತಡೆ, ಉರುವಲು ಉಪಯೋಗ, ಗ್ರಾಮದ ಅರಣ್ಯ ಸಮಿತಿಗೆ ಆದಾಯವೂ ಆಗುತ್ತದೆ. ಗ್ರಾಮಸ್ಥರು ಬಯಸಿದರೆ ಸ್ಥಳೀಯ ಸಸ್ಯ ಗಳನ್ನು ನೆಡಲು ಅಡ್ಡಿಯಿಲ್ಲ. ಆದರೆ ಮಣ್ಣಿನ ಗುಣದಿಂದ ಮರಗಳು ಹೆಚ್ಚಿನ ಬಾಳಿಕೆ ಬರುವುದಿಲ್ಲ. –ಪ್ರಶಾಂತ್‌, ಆರ್‌ಎಫ್‌ಒ

Advertisement

Udayavani is now on Telegram. Click here to join our channel and stay updated with the latest news.

Next