Advertisement

ಕಾರ್ಡ್‌ ಮಾಹಿತಿ ಕದಿಯುತ್ತಿದ್ದ ವಿದೇಶಿ ಕದೀಮರ ಬಂಧನ

12:50 PM Sep 16, 2017 | Team Udayavani |

ಬೆಂಗಳೂರು: ಎಟಿಎಂ ಯಂತ್ರಗಳಲ್ಲಿ ಸ್ಕಿಮ್ಮಿಂಗ್‌ ಉಪಕರಣ ಅಳವಡಿಸಿ ಗ್ರಾಹಕರ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿ ಕಳವು ಮಾಡಲು ಯತ್ನಿಸಿದ ಇಬ್ಬರು ಅಂತಾರಾಷ್ಟ್ರೀಯ ವಂಚಕರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

Advertisement

ರೊಮಾನಿಯಾದ ಏಂಜಲ್ಸ್‌ ಸಿಟಿಯ ಡಾನ್‌ ಸ್ಯಾಬಿಯನ್‌ ಕ್ರಿಶ್ಚಿಯನ್‌ (40) ಮತ್ತು ಹಂಗೇರಿ ರೆಜಿನ್‌ನ ಮಾರೆ ಜಾನೋಸ್‌ (44) ಬಂಧಿತರು. ಆರೋಪಿಗಳಿಬ್ಬರು ಕೋಟಕ್‌ ಮಹಿಂದ್ರಾ ಬ್ಯಾಂಕ್‌, ಸಿಟಿ ಬ್ಯಾಂಕ್‌, ಕೆನರಾ ಬ್ಯಾಂಕ್‌ನ ಕೆಲ ಎಟಿಎಂ ಯಂತ್ರಗಳಲ್ಲಿ ಸ್ಕಿಮ್ಮಿಂಗ್‌ ಯಂತ್ರಗಳನ್ನು ಅಳವಡಿಸಿ ಗ್ರಾಹಕರ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ರಹಸ್ಯ ಸಂಖ್ಯೆಗಳನ್ನು ಪಡೆಯುತ್ತಿದ್ದರು. ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಇಬ್ಬರು ಆರೋಪಿಗಳು ಭಾರತದಲ್ಲಿ ಬ್ಯಾಂಕ್‌ ಗ್ರಾಹಕರ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕಳ್ಳತನ ಮಾಡುವ ಉದ್ದೇಶದಿಂದಲೇ ಬಂದಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಇವರಿಂದ ಸ್ಕಿಮ್ಮಿಂಗ್‌ ಉಪಕರಣಗಳು, ಕಂಪ್ಯೂಟರ್‌ಗಳು, ಮೆಮೋರಿಕಾರ್ಡ್‌ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಐಡಿ ಮಹಾನಿರ್ದೇಶಕ ಕಿಶೋರ್‌ ಚಂದ್ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಇಬ್ಬರು ಸೆ.1 ರಂದು ಭಾರತಕ್ಕೆ ಪ್ರವಾಸಿ ವೀಸಾದಡಿಯಲ್ಲಿ ಬಂದು ಬೆಂಗಳೂರಿನ ಎಂ.ಜಿ.ರಸ್ತೆಯ ಕರ್ಜನ್‌ ಕೋರ್ಟ್‌ ಹೋಟೆಲ್‌ನಲ್ಲಿ ತಂಗಿದ್ದರು. ಬಳಿಕ ಹೆಚ್ಚು ಐಷಾರಾಮಿ ಪ್ರದೇಶಗಳಲ್ಲಿರುವ ಎಟಿಎಂ ಕೇಂದ್ರಗಳಲ್ಲಿ ಸ್ಕಿಮ್ಮಿಂಗ್‌ ಉಪಕರಣಗಳನ್ನು ಅಳವಡಿಸಿ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಮಾಹಿತಿಯನ್ನು ಪಡೆಯುತ್ತಿದ್ದರು. 

ಇತ್ತೀಚೆಗೆ ಎಂ.ಜಿ.ರಸ್ತೆಯಲ್ಲಿರುವ ಕೋಟೆಕ್‌ ಮಹಿಂದ್ರಾ ಬ್ಯಾಂಕ್‌ನ ಎಟಿಎಂ ಕೇಂದ್ರದ ಯಂತ್ರದಲ್ಲಿ ಅಳವಡಿಸಿದ್ದ ಸ್ಕಿಮ್ಮಿಂಗ್‌ ಯಂತ್ರವನ್ನು ಬ್ಯಾಂಕ್‌ನ ತಾಂತ್ರಿಕ ವಿಭಾಗದ ಅಧಿಕಾರಿಗಳು ಗಮನಿಸಿ ವಶಪಡಿಸಿಕೊಂಡಿದ್ದರು. ಈ ಸಂಬಂಧ ಸೆ.12ರಂದು ಬ್ಯಾಂಕ್‌ನ ಅಧಿಕಾರಿಗಳು ದೂರು ನೀಡಿದ್ದು, ಕೂಡಲೇ ಕಾರ್ಯಾಚರಣೆ ನಡೆಸಿದ ಸೈಬರ್‌ ಕ್ರೈಂ ವಿಭಾಗದ ಎಸ್ಪಿ ಸಚಿನ್‌ ಘೋರ್ಪಡೆ.

Advertisement

ಎಸಿಪಿ ಬದ್ರಿನಾಥ್‌, ಎಂ.ಡಿ.ಶರತ್‌, ಪಿಐ ಆನಂದ್‌, ಮಂಜುನಾಥ್‌, ಸಿಬ್ಬಂದಿ ವಿನೋದ್‌ ಕುಮಾರ್‌ ಮತ್ತು ಕಿರಣ್‌ ಕುಮಾರ್‌ ತಂಡ ಈ ಎಟಿಎಂ ಕೇಂದ್ರದಲ್ಲಿದ್ದ ಸಿಸಿಟವಿ ದೃಶ್ಯಾವಳಿಯನ್ನು ಸಂಗ್ರಹಿಸಿದ್ದು, ಏರ್‌ಪೋರ್ಟ್‌ ಮತ್ತು ಎಂ.ಜಿ.ರಸ್ತೆ, ಬ್ರಿಗೇಟ್‌ ರಸ್ತೆ ಹಾಗೂ ಇತರೆ ಐಷಾರಾಮಿ ಸ್ಥಳಗಳಲ್ಲಿರುವ ಕೋಟೆಕ್‌ ಮಹಿಂದ್ರಾ ಬ್ಯಾಂಕ್‌ನ ಎಟಿಎಂ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ವಿದೇಶಿಯರು ಎಂಬ ಬಗ್ಗೆ ಸುಳಿವು ಸಿಕ್ಕಿತ್ತು ಎಂದು ಅವರು ವಿವರಿಸಿದರು.

ಮಫ್ತಿ ಕಾರ್ಯಾಚರಣೆ
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಮತ್ತೂಂದು ಸ್ಕಿಮ್ಮಿಂಗ್‌ ಉಪಕರಣ ಅಳವಡಿಸಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಪಿಐ ಆನಂದ್‌ ನೇತೃತ್ವದ ತಂಡ, ಕಾರ್ಡ್‌ಗಳ ರಹಸ್ಯ ಪಡೆಯಲು ಆಗಮಿಸುವ ನಿರೀಕ್ಷೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ಆ ಎಟಿಎಂ ಕೇಂದ್ರದ ಮುಂದೆ ಮಫ್ತಿಯಲ್ಲಿ ಕಾದು ಕುಳಿತಿತ್ತು. ಇದೇ ವೇಳೆ ಮತ್ತೂಂದು ತಂಡ ವಿದೇಶಿಯರು ಹೆಚ್ಚು ನೆಲೆಸುವ ಹೋಟೆಲ್‌ಗ‌ಳು, ಅತಿಥಿ ಗೃಹಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು.

ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರು ಆರೋಪಿಗಳು ಎಟಿಎಂ ಯಂತ್ರದಲ್ಲಿ ಅಳವಡಿಸಿದ್ದ ಸ್ಕಿಮ್ಮಿಂಗ್‌ ಉಪಕರಣ ಪಡೆಯಲು ಬಂದಿದ್ದು, ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದರು. ಕೆಲ ಹೊತ್ತಿನ ಬಳಿಕ ಡಾನ್‌ ಸ್ಯಾಬಿಯನ್‌ ಎಟಿಎಂ ಕೇಂದ್ರದ ಬಳಿ ಹೋಗುತ್ತಿದ್ದಂತೆ ಪೊಲೀಸರು ಇರುವ ಬಗ್ಗೆ ಅನುಮಾನಗೊಂಡು ಕೂಡಲೇ ಓಲಾ ಕ್ಯಾಬ್‌ ಮಾಡಿಕೊಂಡು ಪರಾರಿಯಾಗಲು ಯತ್ನಿಸಿದ್ದ. ಈತನ ಆತಂಕದ ಚಲನವಲನಗಳನ್ನು ಗಮನಿಸಿ ಸ್ಥಳದಲ್ಲೇ ಬಂಧಿಸಿದ್ದಾರೆ ಎಂದು ಎಡಿಜಿಪಿ ಪ್ರತಾಪ್‌ ರೆಡ್ಡಿ ಹೇಳಿದರು.

ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಗಳು, ತಾವು ಯುಕೆನಲ್ಲಿ ವಾಸವಿರುವ ತಮ್ಮ ಸಹಚರರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಕಳವು ಮಾಡಿದ ಎಲ್ಲ ಮಾಹಿತಿಯನ್ನು ಆತನಿಗೆ ಕಳುಹಿಸಿಕೊಟ್ಟಿದ್ದೆವು ಎಂದು ತಿಳಿಸಿರುವುದಾಗಿ ಅವರು ತಿಳಿಸಿದ್ದಾರೆ.

ಎಲ್ಲೆಲ್ಲಿ ಸ್ಕಿಮ್ಮಿಂಗ್‌ ಮೆಷಿನ್‌ ಅಳವಡಿಕೆ
ನಗರದ  ಗರುಡಾ ಮಾಲ್‌ನಲ್ಲಿರುವ ಸಿಟಿ ಬ್ಯಾಂಕ್‌ ಎಟಿಎಂ, ಎಂ.ಜಿ.ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂ, ಟ್ರಿನಿಟಿ ವೃತ್ತ, ಬ್ರಿಗೇಡ್‌ ರಸ್ತೆಗಳಲ್ಲಿರುವ ಕೋಟಕ್‌ ಮಹೇಂದ್ರ ಸೇರಿದಂತೆ ನಗರದ ಐದು ಕಡೆ ಸ್ಕಿಮ್ಮಿಂಗ್‌ ಯಂತ್ರ ಅಳವಡಿಸಿ, ಗ್ರಾಹಕರ ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳ ಪಾಸ್‌ವರ್ಡ್‌ ಮಾಹಿತಿಯನ್ನು ಪಡೆದು ನಕಲಿ ಕಾರ್ಡ್‌ಗಳನ್ನು ಅಭಿವೃದ್ಧಿ ಪಡಿಸಿ ಹಣ ದೋಚಲು ಸಂಚು ರೂಪಿಸಿದ್ದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೋಟಕ್‌ ಮಹೀಂದ್ರ ಬ್ಯಾಂಕ್‌ ಎಟಿಎಂ, ಗರುಡಾ ಮಾಲ್‌ನಲ್ಲಿರುವ ಸಿಟಿ ಬ್ಯಾಂಕ್‌ ಎಟಿಎಂನಲ್ಲಿ ಎರಡು ಬಾರಿ, ಎಂ.ಜಿ.ರಸ್ತೆಯ ಕೆನರಾಬ್ಯಾಂಕ್‌ ಎಟಿಎಂನಲ್ಲಿ ಎರಡು ಬಾರಿ, ಟ್ರಿನಿಟಿ ಮೆಟ್ರೋ ಬಳಿಯ ಕೋಟಕ್‌ ಮಹೀಂದ್ರ ಬ್ಯಾಂಕ್‌ಎಟಿಎಂ ಹಾಗೂ ಬ್ರಿಗೆಡ್‌ ರಸ್ತೆ ಜಂಕ್ಷನ್‌ನಲ್ಲಿನ ಕೋಟಕ್‌ ಬ್ಯಾಂಕ್‌ನ ಎಟಿಎಂಗಳಲ್ಲಿ ಅಳವಡಿಸಿದ್ದ ಸ್ಕಿಮ್ಮಿಂಗ್‌ ಉಪಕರಣಗಳನ್ನು ವಾಪಸ್‌ ತೆಗೆದುಕೊಂಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಈ ಕೃತ್ಯದ ಬಗ್ಗೆ ಸಂಬಂಧಪಟ್ಟ ಬ್ಯಾಂಕ್‌ಗಳು ಹಾಗೂ ಆರ್‌ಐಗೆ  ಮಾಹಿತಿ ನೀಡಿದ್ದು, ಎಟಿಎಂ ಬಳಕೆದಾರರ ಕಾರ್ಡ್‌ಗಳ ಮಾಹಿತಿಗಳು ಕಳ್ಳತನವಾಗದಂತೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು  ಪತ್ರ ಬರೆದಿರುವುದಾಗಿ ಪ್ರತಾಪ್‌ ರೆಡ್ಡಿ ತಿಳಿಸಿದರು.

ಸ್ಥಳ ಬದಲಾವಣೆ
ಎಂ.ಜಿ.ರಸ್ತೆ ಎಟಿಎಂ ಕೇಂದ್ರದಲ್ಲಿ ಅಳವಡಿಸಿದ್ದ ಸ್ಕಿಮ್ಮಿಂಗ್‌ ಯಂತ್ರ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ, ಇತ್ತ ಆರೋಪಿಗಳು ತಾವು ನೆಲೆಸಿದ್ದ ಎಂ.ಜಿ. ರಸ್ತೆಯ ಕರ್ಜನ್‌ ಕೋರ್ಟ್‌ ಹೋಟೆಲ್‌ನ್ನು ಏಕಾಏಕಿ ಖಾಲಿ ಮಾಡಿದರು. ಬಳಿಕ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಆರ್‌ಜಿ ರಾಯಲ್‌ ಹೋಟೆಲ್‌ಗೆ ವಾಸ್ತವ್ಯ ಬದಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next