Advertisement

ಜಮೀನುಗಳಿಗೆ ನೀರು ಹರಿಸಲು ಒತ್ತಾಯ

01:31 PM Aug 29, 2017 | |

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ ಕಾಲುವೆ ವ್ಯಾಪ್ತಿಯ ಎಲ್ಲ ಜಮೀನುಗಳಿಗೆ ನೀರು ಒದಗಿಸದಿದ್ದರೆ ಮುಖ್ಯ ಅಭಿಯಂತರರ ಕಚೇರಿ ಎದುರಿನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಹೇಳಿದರು. ಸೋಮವಾರ ಸ್ಥಳೀಯ ಕೆಬಿಜೆಎನ್‌ಎಲ್‌ ಮುಖ್ಯ ಅಭಿಯಂತರಗೆ ಮನವಿ ಸಲ್ಲಿಕೆಗೆ ಮುಂಚೆ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಬರುವ ವಿವಿಧ ಕಾಲುವೆಗಳ ಸಮೀಪದಲ್ಲಿ ನೀರಾವರಿಯಾಗಲು ಯಾವುದೇ ತೊಂದರೆಯಾಗದಿದ್ದರೂ ಕೂಡ ನೀರೆತ್ತುವ ಯಂತ್ರಗಳು ಅವಶ್ಯಕತೆಗಿಂತಲೂ ಕಡಿಮೆಯಾದ್ದರಿಂದ ಸಾವಿರಾರು ಎಕರೆ ಭೂಮಿ ನೀರಾವರಿಯಿಂದ ವಂಚಿತಗೊಂಡಿತ್ತು. ಆದರೆ ಈಗ ಮೂರನೇ ಹಂತದ ಮುಳವಾಡ ಏತ ನೀರಾವರಿ ಯೋಜನೆಗಾಗಿ ನೀರೆತ್ತುವ
ಯಂತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲಾಗಿದೆ. ಇವುಗಳ ಮೂಲಕ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು. ಮುಳವಾಡ ಏತನೀರಾವರಿ ಯೋಜನೆಯ ಪೂರ್ವ ಕಾಲುವೆ ವ್ಯಾಪ್ತಿಯಲ್ಲಿ ಗಣಿ, ಮಾರಡಗಿ, ಮಜರೆಕೊಪ್ಪ ಗ್ರಾಮಗಳ ಸುಮಾರು 500 ಎಕರೆ ಜಮೀನು ಹಾಗೂ ಮಸೂತಿ ಮುಖ್ಯ ಸ್ಥಾವರದಿಂದ ಕಾಲುವೆಯು ಎನ್‌ಟಿಪಿಸಿ ಒಳಗೆ ಹಾದು ಹೋಗುವುದನ್ನು ರದ್ದುಗೊಳಿಸಿದ್ದರ ಪರಿಣಾಮ ಅಂಗಡಗೇರಿ, ಹುಣಶ್ಯಾಳ, ವಂದಾಲ ಗ್ರಾಮಗಳ ನೂರಾರು ಎಕರೆ ಜಮೀನು ನೀರಿನಿಂದ ವಂಚಿಗೊಂಡಿವೆ. ಅದಕ್ಕೆ ಪರ್ಯಾಯ ಕಾಲುವೆ ನಿರ್ಮಿಸಿ ನೀರು ಒದಗಿಸಬೇಕು ಎಂದರು. ಪೂರ್ವಕಾಲುವೆ ವಿತರಣಾ ಕಾಲುವೆ ಸಂಖ್ಯೆ 6ರಲ್ಲಿ ಬರುವ 300 ಎಕರೆ ಜಮೀನು ಹಾಗೂ ಮುಳವಾಡ ಪಶ್ಚಿಮ ಕಾಲುವೆ ವಿತರಣಾ ಕಾಲುವೆ ಸಂಖ್ಯೆ-10ರಲ್ಲಿ ಸುಮಾರು 800 ಎಕರೆ, ಕೊಲ್ಹಾರ ಪುನರ್ವಸತಿ ಕೇಂದ್ರದಿಂದ ಯುಕೆಪಿ ಕ್ಯಾಂಪ್‌ಗೆ ಹೋಗುವ ರಸ್ತೆ ಪಕ್ಕದಲ್ಲಿರುವ ವಿತರಣಾ ಕಾಲುವೆಯಿಂದ 600 ಎಕರೆ ಅಲ್ಲದೇ ಕೊಲ್ಹಾರದ ರಾಚೋಟೇಶ್ವರ ಗುಡಿ ಹತ್ತಿರ ಹಾದು ಹೋಗಿರುವ ಕಾಲುವೆಯಿಂದ 400 ಎಕರೆ ಜಮೀನು ಮತ್ತು ಕೊಲ್ಹಾರದಿಂದ ಉಪ್ಪಲದಿನ್ನಿ ರಸ್ತೆ ರಾ.ಹೆ.218 ದಾಟಿಸದೆ ಇರುವುದರಿಂದ 500 ಎಕರೆ ಭೂಮಿ ನೀರಾವರಿಯಿಂದ ವಂಚಿತಗೊಂಡಿದೆ ಎಂದು ಹೇಳಿದರು. ಕೂಡಲೇ ಕೃಷ್ಣಾಭಾಗ್ಯಜಲ ನಿಗಮದ ವತಿಯಿಂದ ತುರ್ತಾಗಿ ನೀರಾವರಿ ಯೋಜನೆಯಿಂದ ವಂಚಿತಗೊಂಡಿರುವ ಭೂಮಿಗೆ ನೀರು ಒದಗಿಸಬೇಕು. ಇಲ್ಲದಿದ್ದರೆ ತಿಂಗಳ ನಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಅಭಿಯಂತರ ಜಗನ್ನಾಥ ರಡ್ಡಿ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ ಮುಖಂಡ ಚಿನ್ನಪ್ಪ ಗಿಡ್ಡಪ್ಪಗೋಳ, ನಿತ್ಯಾನಂದ ಮೇಲಿನಮಠ, ಕರವೀರ ಮಡಿವಾಳರ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ, ಚಿಮ್ಮಲಗಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚನಗೊಂಡ, ಅಂದಾನಿ ತೋಳಮಟ್ಟಿ, ರಾಮು ಜಗತಾಪ, ರಮೇಶ
ಗಾಯಕವಾಡ, ಯಮನಪ್ಪ ಪರೂತಿ, ಗುರುರಾಜ ಬಂಡಿವಡ್ಡರ, ಶಂಕರ ನಾಯಕ, ಮುದಕಪ್ಪ ಬಿರಾದಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next