Advertisement

ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ಒತ್ತಾಯ

05:22 PM Jun 24, 2022 | Team Udayavani |

ಮೈಸೂರು: ಯಾರಾದರೂ ವಿಧಾನಸಭಾ ಸದಸ್ಯರು ಯಾವುದಾದರೂ ಕಾರಣಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋಗುವಂತಿಲ್ಲ. ಒಂದು ವೇಳೆ ಗೆದ್ದ ಪಕ್ಷಕ್ಕೆ  ರಾಜೀನಾಮೆ ನೀಡಿದರೆ ಅಂಥವರು ಹತ್ತು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮವನ್ನು ಜಾರಿ ಗೊಳಿಸಬೇಕೆಂದು ವಿಧಾನಸಭೆ ಪ್ತಿ ಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Advertisement

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.

ಪ್ರಜಾಪ್ರಭುತ್ವಕ್ಕೆ ಮಾರಕ: ಆಪರೇಷನ್‌ ಕಮಲ ಎಂಬುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ. ಮಹಾರಾಷ್ಟ್ರದಲ್ಲಿ 40 ಜನ ಶಾಸಕರನ್ನು ಆಪರೇಷನ್‌ ಕಮಲದ ಮೂಲಕ ದುಡ್ಡು ಕೊಟ್ಟು ಕೊಂಡುಕೊಳ್ಳುವುದು ಪ್ರಜಾ ಪ್ರಭುತ್ವಕ್ಕೆ ಮಾಡುವ ದ್ರೋಹ ಎಂದು ಖಂಡಿಸಿದರು.

ಸಿದ್ದರಾಮಯ್ಯ ಆಕ್ರೋಶ: ಆಪರೇಷನ್‌ ಕಮಲ ಹುಟ್ಟಿದ್ದು ಬಿಜೆಪಿಯವರಿಂದ. ರಾಜ್ಯದಲ್ಲಿ 2008 ರಲ್ಲಿ ಯಡಿಯೂರಪ್ಪ ಅವರು ಇದನ್ನು ಆರಂಭಿಸಿದರು. ಈಗ ಎಲ್ಲ ಕಡೆ ರೋಗದಂತೆ ಹಬ್ಬುತ್ತಿದೆ. ಇದೊಂದು ರಾಜಕೀಯ ರೋಗ. ಇದಕ್ಕೆ ಯಾರೂ ಪೋ›ತ್ಸಾಹ ನೀಡಬಾರದು. ಯಾರೋ ಕೆಲವರು ಸ್ವಯಂ ಪ್ರೇರಿತ ರಾಗಿ ರಾಜೀನಾಮೆ ನೀಡಿ ಬೇರೆ ಪಕ್ಷ ಸೇರಿದರೆ ಸರಿ, ಆದರೆ ಈ ರೀತಿ ಶಾಸಕರನ್ನು ದುಡ್ಡುಕೊಟ್ಟು ಕೊಂಡುಕೊಳ್ಳುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ಮುಗಿಲು ಮುಟ್ಟಿದೆ:
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಹುಮತ ಇದೆಯಾ? ಅವರು ಗೆದ್ದಿದ್ದು 104, ಇದರಲ್ಲೇ ಅಧಿಕಾರ ಹಿಡಿಯುತ್ತೀವಿ ಎಂದರೆ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಅವಕಾಶ ಇಲ್ಲ. 40 ಜನ ಶಾಸಕರನ್ನು ದುಡ್ಡು ಕೊಟ್ಟು ಕೊಂಡುಕೊಳ್ತೀವಿ ಎಂದರೆ ಈ ಹಣ ಎಲ್ಲಿಂದ ಬಂದಿರಬೇಕು? ಪ್ರತಿಯೊಬ್ಬರಿಗೆ 25 ರಿಂದ 40 ಕೋಟಿ ರೂ . ಕೊಡ್ತಿದ್ದಾರೆ. ಭ್ರಷ್ಟಾಚಾರದ ಹಣವಲ್ಲವೇ ಇದು? ಭ್ರಷ್ಟಾಚಾರ ಮಾಡದೆ ಇಷ್ಟು ಹಣ ಎಲ್ಲಿಂದ ಬರುತ್ತೆ? ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಆರೋಪಿಸಿದರು.

Advertisement

ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯು ದ್ರೌಪದಿ ಮುರ್ಮ ಅವರನ್ನು ತನ್ನ ಅಭ್ಯರ್ಥಿ  ಯನ್ನಾಗಿ ಕಣಕ್ಕೆ ಇಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ದ್ರೌಪದಿ ಮುರ್ಮ ಅವರು ಬಿಜೆಪಿ ಕಾರ್ಯಕರ್ತೆ. ಮೊದಲು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು, ಬಿಜೆಪಿಯ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿದ್ದವರು, ಒಮ್ಮೆ ರಾಜ್ಯಪಾಲರಾಗಿದ್ದರು. ಈಗ ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಿದ್ದಾರೆ.

ಇದರಲ್ಲಿ ವಿಶೇಷತೆಯಿಲ್ಲ. ಇಂಥವರನ್ನು ನಾಮಕಾವಸ್ತೆಗೆ ಕೂರಿಸಲು ರಾಷ್ಟ್ರಪತಿ ಅಭ್ಯರ್ಥಿಯಾಗಿ ಮಾಡುತ್ತಾರೆ. ರಾಮನಾಥ ಕೋವಿಂದ್‌ ಅವರು ರಾಷ್ಟ್ರಪತಿಯಾಗಿ ಏನು ಕೆಲಸ ಮಾಡಿದರು? ರಾಜೇಂದ್ರ ಪ್ರಸಾದ್‌ ಅಥವಾ ರಾಧಾಕೃಷ್ಣನ್‌ ಅವರ ಹಾಗೆ ಕೆಲಸ ಮಾಡಿದ್ರಾ? ಸಾಮಾಜಿಕ ನ್ಯಾಯ ಪಾಲನೆ ಮಾಡುವುದಾದರೆ ಈ ಹೆಣ್ಣುಮಗಳನ್ನು ಆರ್‌. ಎಸ್‌.ಎಸ್‌ ನ ಸರಸಂಘಚಾಲಕರನ್ನಾಗಿ ಮಾಡಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next