Advertisement

ಬಲವಂತದ ಮತಾಂತರ: ನಿಯಂತ್ರಣಕ್ಕೆ ಕೇಂದ್ರ ಮುಂದಾಗಲಿ

12:45 AM Nov 15, 2022 | Team Udayavani |

ಬಲವಂತದ ಧಾರ್ಮಿಕ ಮತಾಂತರ ಒಂದು ಗಂಭೀರವಾದ ವಿಚಾರ. ಇದು ಆಂತರಿಕ ಭದ್ರತೆಗೆ ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ. ಬಹು ಹಿಂದಿನಿಂದಲೂ ಧಾರ್ಮಿಕ ಮತಾಂತರದ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಅಲ್ಲದೆ ಕೆಲವೊಂದು ರಾಜ್ಯಗಳು ಬಲವಂತದ ಮತಾಂತರ ತಪ್ಪಿಸುವ ಸಲುವಾಗಿ ಈಗಾಗಲೇ ಕಾಯ್ದೆಗಳನ್ನು ತಂದಿವೆ.

Advertisement

ಸದ್ಯ ಬಲವಂತದ ಧಾರ್ಮಿಕ ಮತಾಂತರದ ಬಗ್ಗೆ ವಿಚಾರಣೆ ನಡೆಸು ತ್ತಿರುವ ಸುಪ್ರೀಂ ಕೋರ್ಟ್‌ ಇದನ್ನು ಗಂಭೀರವಾದ ವಿಷಯ ಎಂದಿದೆ. ಅಲ್ಲದೆ ಕೇಂದ್ರ ಸರಕಾರದ ಕಡೆಯಿಂದಲೂ ಪ್ರಮಾಣಪತ್ರ ಸಲ್ಲಿಸುವಂತೆ ಸೂಚನೆ ನೀಡಿದೆ. ಅಂದರೆ ಇಂಥ ಬಲವಂಥದ ಮತಾಂತರವನ್ನು ಸ್ಥಗಿತಗೊಳಿಸಲು ಯಾವ ಕ್ರಮ ತೆಗೆದುಕೊಂಡಿದ್ದೇವೆ ಎಂಬ ಬಗ್ಗೆ ಮಾಹಿತಿ ನೀಡಿ ಎಂದಿದೆ. ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ ಈ ಬಗ್ಗೆ ಆದೇಶ ಹೊರಡಿಸಿದೆ. ದೇಶದಲ್ಲಿ ಹಣ ಮತ್ತು ಕೊಡುಗೆಗಳನ್ನು ನೀಡಿ ಮತಾಂತರ ಮಾಡಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.ಇಲ್ಲಿ ನ್ಯಾಯಮೂರ್ತಿಗಳ ಅಭಿಪ್ರಾಯವನ್ನು ಗಮನಿಸಬೇಕು. ನ್ಯಾ| ಎಂ.ಆರ್‌. ಶಾ ಅವರು ಬಲವಂತದ ಮತಾಂತರ ಒಂದು ಗಂಭೀರವಾದ ವಿಚಾರವಾಗಿದ್ದು, ಇದರಿಂದ ದೇಶದ ಭದ್ರತೆಗೂ ಅಪಾಯವಿದೆ ಎಂದಿದ್ದಾರೆ. ಹಾಗೆಯೇ ಇಂಥ ಬಲವಂತದ ಮತಾಂತ‌ರವನ್ನು ತಪ್ಪಿಸಲು ಕೇಂದ್ರ ಸರಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸೂಚಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಈ ಅಭಿಪ್ರಾಯವನ್ನು ಗಮನಿಸುವುದಾದರೆ ದೇಶದಲ್ಲಿ ಬಲವಂತದ ಮತಾಂತರವೆಂಬುದು ಪಿಡುಗಾಗಿದೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ. ಅಲ್ಲದೆ ಹಿಂದಿನಿಂದಲೂ ಉತ್ತೇಜನ, ಆಮಿಷ ಒಡ್ಡಿ ಮತಾಂತರ ಮಾಡಿಕೊಳ್ಳಲಾಗುತ್ತಿದೆ ಎಂಬ ಪ್ರಕರಣಗಳನ್ನು ಆಗಾಗ್ಗೆ ಕೇಳುತ್ತಲೇ ಇದ್ದೇವೆ. ಇಂಥ ಸಂದರ್ಭದಲ್ಲಿ ಬಲವಂತದ ಮತಾಂತರ ತಪ್ಪಿಸುವತ್ತ ಗಮನಹರಿಸಬೇಕಾಗಿದೆ. ಆದರೆ ದೇಶದಲ್ಲಿ ಸಂವಿಧಾನ ಎಲ್ಲರಿಗೂ ಧಾರ್ಮಿಕ ಹಕ್ಕುಗಳನ್ನು ನೀಡಿದೆ. ಪ್ರತಿಯೊಬ್ಬರೂ ತಮಗೆ ಬೇಕಾದ ಧರ್ಮವನ್ನು ಅನುಸರಿಸಬಹುದು. ಇದನ್ನು ಯಾರೂ ತಡೆಯುವಂತಿಲ್ಲ. ಒಂದು ವೇಳೆ ತಡೆದರೆ ಆತನ ಹಕ್ಕಿಗೆ ಧಕ್ಕೆಯಾದಂತೆ ಆಗುತ್ತದೆ. ಇದನ್ನು ಮನಗಂಡೇ ಕೇಂದ್ರ ಸರಕಾರವಾಗಲಿ ಅಥವಾ ರಾಜ್ಯ ಸರಕಾರವಾಗಲಿ ಕಾನೂನು ರೂಪಿಸಬೇಕಾಗಿದೆ.

ಈಗಾಗಲೇ ಕರ್ನಾಟಕದಲ್ಲಿಯೂ ಬಲವಂತದ ಮತಾಂತರದ ಬಗ್ಗೆ ಒಂದು ಕಾನೂನು ರೂಪಿಸಲಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿಯೂ ಈ ಸಂಬಂಧ ಕಾನೂನುಗಳಿವೆ. ಆದರೆ ದೇಶಕ್ಕೊಂದು ಏಕೀಕೃತ ಕಾನೂನು ಇಲ್ಲ. ಹಾಗೆಯೇ ದೇಶಕ್ಕೇ ಅನ್ವಯವಾಗುವಂತೆ ಕಾನೂನು ರೂಪಿಸ ಬೇಕಾದರೆ ಎಲ್ಲ ರಾಜ್ಯಗಳನ್ನು ಸಂಪರ್ಕಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಮತಾಂತರವೆಂಬುದೇ ಧರ್ಮಸೂಕ್ಷ್ಮ ವಿಚಾರ. ಇಲ್ಲಿ ಎಚ್ಚರಿಕೆಯಿಂದಲೇ ಹೆಜ್ಜೆ ಇಡಬೇಕಾಗುತ್ತದೆ. ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಒಂದು ಅಫಿದಾವಿತ್‌ ಸಲ್ಲಿಸಬೇಕಾಗುತ್ತದೆ. ಜತೆಗೆ ಕೇಂದ್ರ ಸರಕಾರವು ಇಂಥ ಕಾನೂನು ರೂಪಿಸಲು ಸಾಧ್ಯವೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಬೇಕಾಗುತ್ತದೆ.

ಏನೇ ಆಗಲಿ ಆಮಿಷವೊಡ್ಡಿ ಅಥವಾ ಬೆದರಿಕೆ ಮೂಲಕ ಮತಾಂತರ ಮಾಡುವುದು ಅಪರಾಧವೇ. ಸದ್ಯ ಕರ್ನಾಟಕದಲ್ಲಿ ಇದಕ್ಕೆ ಜೈಲು ಶಿಕ್ಷೆ ಮತ್ತು ದಂಡವೂ ಇದೆ. ಜತೆಗೆ ಮತಾಂತರದ ಸಂದರ್ಭದಲ್ಲಿ ಅನುಸರಿಸಬೇಕಾದ ವಿಷಯಗಳ ಬಗ್ಗೆಯೂ ವಿಸ್ತೃತವಾಗಿ ವಿವರಿಸಲಾಗಿದೆ. ಈ ಬಗ್ಗೆಯೂ ಕೇಂದ್ರ ಸರಕಾರ ಗಮನಹರಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next