Advertisement

ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯ

02:53 PM Jul 11, 2017 | Team Udayavani |

ನಾಯಕನಹಟ್ಟಿ: ಅವೈಜ್ಞಾನಿಕವಾಗಿ ಕೆಳಸೇತುವೆ ನಿರ್ಮಾಣಕ್ಕೆ ಬದಲಾಗಿ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ
ರೈತಸಂಘದ ವತಿಯಿಂದ ಸೋಮವಾರ ತಳಕು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 150-ಎ ಪಕ್ಕದಲ್ಲಿರುವ ಕೋಡಿಹಳ್ಳಿ ಕ್ರಾಸ್‌
ನಿಂದ ಬೇಡರೆಡ್ಡಿಹಳ್ಳಿ ಸೇರಿದಂತೆ ನಾನಾ ಗ್ರಾಮಗಳಿಗೆ ತೆರಳಲು ರಸ್ತೆಗೆ ಅಡ್ಡಲಾಗಿ ರೈಲ್ವೆ ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಇವು ಅವೈಜ್ಞಾನಿಕವಾಗಿರುವುದರಿಂದ ಹಲವಾರು ಸಮಸ್ಯೆಗಳು ಉಂಟಾಗಿವೆ ಎಂದು ದೂರಿದರು.

ಈಗಾಗಲೇ ನೀರು ನಿಲ್ಲದ ಎತ್ತರ ಪ್ರದೇಶಗಳಲ್ಲಿ ಸೇತುವೆಗಳನ್ನು ನಿರ್ಮಿಸಬೇಕು. ಆದರೆ ತಗ್ಗು ಪ್ರದೇಶದಲ್ಲಿ ಸೇತುವೆ ನಿರ್ಮಿಸಿರುವುದರಿಂದ ಸಣ್ಣ ಪ್ರಮಾಣದ ಮಳೆಯಾದರೂ ನೀರು ನಿಲ್ಲುತ್ತಿದೆ. ಜತೆಗೆ ಸೇತುವೆಗಳಿಗೆ ಸರಿಯಾದ ರಸ್ತೆಯನ್ನು ನಿರ್ಮಿಸಿಲ್ಲ. ಸೇತುವೆ ಭೂಮಟ್ಟದಿಂದ 16 ಅಡಿ ಆಳದಲ್ಲಿರುವುದರಿಂದ ಬೆಳಕಿನ ಸಮಸ್ಯೆಯಿದೆ. ಸಂಜೆಯಾದರೆ ಅಕ್ರಮ
ಚಟುವಟಿಕೆಗಳ ತಾಣವಾಗುತ್ತಿವೆ. ಒಂದು ಸೇತುವೆ ಕಾಮಗಾರಿ ಮುಗಿದಿದ್ದು, ಈಗಾಗಲೇ ಸಮಸ್ಯೆಗಳು ಜನರಿಗೆ ಅರ್ಥವಾಗುತ್ತಿವೆ. ಇಂತಹ ನಾಲ್ಕು ಸೇತುವೆಗಳು ಪೂರ್ಣಗೊಂಡರೆ ಜನರ  ಓಡಾಟ, ಸೇರಿದಂತೆ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಕೆಳಸೇತುವೆ ಕಾಮಗಾರಿ ಸ್ಥಗಿತಗೊಳಿಸಿ ಮೇಲ್ಸೇತುವೆ ಕಾಮಗಾರಿಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಮತ್ತೋರ್ವ ರೈತ ಮುಖಂಡ ನಿಜಲಿಂಗಪ್ಪ ಮಾತನಾಡಿ, ತಳಕು, ಬಿ.ಜಿ. ಕೆರೆ ಸೇರಿದಂತೆ ಹಲವಾರು ಗ್ರಾಮಗಳ ರೈತರು ರೈಲ್ವೆ ಮಾರ್ಗ ಹಾಗೂ ಸೇತುವೆಗಳಿಗೆ ತಮ್ಮ ಜಮೀನುಗಳನ್ನು ನೀಡಿದ್ದಾರೆ. ಜಮೀನಿನ ಮಧ್ಯೆ ರೈಲ್ವೆ ಹಳಿ ಹಾದು ಹೋಗಿರುವ
ರೈತರಿಗೆ ಇಲಾಖೆ ಅನವಶ್ಯಕವಾಗಿ ತೊಂದರೆ ನೀಡುತ್ತಿದೆ. ಒಂದು ಕಡೆಯಿಂದ ಮತ್ತೂಂದು ಕಡೆಗೆ ಪೈಪ್‌ಲೈನ್‌ ಹಾಕಲು ಅವಕಾಶ ನೀಡುತ್ತಿಲ್ಲ. ಕೆಳಸೇತುವೆ ಅಡಿ ಪೈಪ್‌ಲೈನ್‌ ತೆಗೆದುಕೊಂಡು ಹೋಗಲು 1.5 ಲಕ್ಷ ರೂ.ಗಳನ್ನು ಇಲಾಖೆಗೆ ದಂಡ ರೂಪದಲ್ಲಿ ಪಾವತಿಸಿ ಪೈಪ್‌ಲೈನ್‌ ತೆಗೆದುಕೊಂಡು ಹೋಗಬೇಕಾಗಿದೆ. ರೈಲ್ವೆ ಇಲಾಖೆ ಬ್ರಿಟಿಷ್‌ ರೀತಿಯ ದಬ್ಟಾಳಿಕೆ ನಡೆಸುತ್ತಿದೆ. ಕೆಳ ಸೇತುವೆ ನಿರ್ಮಾಣಕ್ಕೆ ಮುಂಚೆ ಸಮೀಪದಲ್ಲಿನ ಹಾಗೂ ಹಾದು ಹೋಗುವ ಗ್ರಾಮಗಳ ಜನರೊಂದಿಗೆ ಚರ್ಚಿಸಿಲ್ಲ. ಸೇತುವೆ ಕಾಮಗಾರಿಗಳನ್ನು
ತಕ್ಷಣ ಸ್ಥಗಿತಗೊಳಿಸಬೇಕು. ಇಲ್ಲವಾದರೆ ರೈಲು ತಡೆ, ಹೋಬಳಿ ಬಂದ್‌ ಸೇರಿದಂತೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ
ಎಂದು ಎಚ್ಚರಿಸಿದರು. 

ರೈಲ್ವೆ ಇಲಾಖೆ ಇಂಜಿನಿಯರ್‌ ನಾರಾಯಣಮೂರ್ತಿ ಮಾತನಾಡಿ, ಇದೀಗ ಕೈಗೊಂಡಿರುವ ಸೇತುವೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಅನುಮಾನವಿದ್ದರೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಪರಿಶೀಲನೆ ನಡೆಸಲಿ ಎಂದು ಹೇಳಿದರು. 

Advertisement

ರೈತ ಮುಖಂಡರಾದ ತಿಮ್ಮಪ್ಪಯ್ಯನಹಳ್ಳಿ ರಾಜಣ್ಣ, ಮರ‌್ಲಹಳ್ಳಿ ರವಿಕುಮಾರ್‌, ಕೆ. ಮಲ್ಲೇಶಪ್ಪ, ಡಿ. ಚಂದ್ರಶೇಖರ ನಾಯ್ಕ,
ಬೆಳಗಲ್‌ ಈಶ್ವರಯ್ಯಸ್ವಾಮಿ, ಸಿ.ಬೋರಯ್ಯ, ತಾಪಂ ಸದಸ್ಯರಾದ ನಾಗೇಂದ್ರಪ್ಪ, ರಾಮರೆಡ್ಡಿ, ಜಗನ್ನಾಥ ರೆಡ್ಡಿ, ಎಚ್‌.ವಿ.
ಹನುಮಂತ ರೆಡ್ಡಿ, ಗ್ರಾಪಂ ಅಧ್ಯಕ್ಷೆ ಸೂರಮ್ಮ ಮಂಜುನಾಥ್‌, ಶಿವಾನಂದ, ತಾಪಂ ಸದಸ್ಯ ರಾಮರೆಡ್ಡಿ, ವಕೀಲ ಸಮೀವುಲ್ಲಾ
ಮತ್ತಿತರರು ಇದ್ದರು. ರೈತರು ತಳಕು ರೈಲ್ವೆ ನಿಲ್ದಾಣವನ್ನು ಪ್ರವೇಶಿಸದಂತೆ ರೈಲ್ವೆ ಹಾಗೂ ಸ್ಥಳೀಯ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. 

ಕಾಮಗಾರಿಯ ಪುನರ್‌ ಪರಿಶೀಲನೆ ನಡೆಸಲಿ ರೈಲ್ವೆ ಮೇಲ್ಸೇತುವೆ ಬಗ್ಗೆ ಸಂಸದ ಬಿ.ಎನ್‌. ಚಂದ್ರಪ್ಪ ಅವರ ಗಮನಕ್ಕೆ
ತರಲಾಗಿದೆ. ಅವೈಜ್ಞಾನಿಕವಾಗಿ ಸೇತುವೆಗಳನ್ನು ನಿರ್ಮಿಸಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು ಕಾಮಗಾರಿಯ ಪುನರ್‌ ಪರಿಶೀಲನೆ ನಡೆಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ
ಕಾಮಗಾರಿ ಕೈಗೊಳ್ಳಬೇಕು ಎಂದು ಜಿಪಂ ಸದಸ್ಯ ಓಬಳೇಶ್‌ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next