ಕಾರ್ಕಳ: ಬಿಸಿಲಿನ ಬೇಗೆಯಿಂದ ಎಲ್ಲ ಜೀವಗಳು ತತ್ತರಿಸುತ್ತಿವೆ. ಮನುಷ್ಯರಷ್ಟೆ ಅಲ್ಲ, ಪ್ರಾಣಿ-ಪಕ್ಷಿಗಳು ನೀರು, ಆಹಾರಕ್ಕಾಗಿ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರಿತ ಇಲ್ಲೊಬ್ಬರು ಕಳೆದ ಮೂರು ವರ್ಷಗಳಿಂದ ಪಕ್ಷಿಗಳಿಗೆ ನೀರು ಒದಗಿಸುತ್ತ ಬರುತ್ತಿದ್ದಾರೆ.
ಸುರೇಂದ್ರ ಪೂಜಾರಿ ಅವರು ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ನಲ್ಲಿ ಗೈಡ್ ಆಗಿ ಕೆಲಸ ನಡೆಸುತ್ತಿದ್ದಾರೆ. ತಾವು ಕೆಲಸ ಮಾಡುತಿದ್ದ ಪರಿಸರದಲ್ಲಿ ನೂರಾರು ಪಕ್ಷಿಗಳು ಬೇಸಗೆಯಲ್ಲಿ ನೀರಿಗಾಗಿ ಚಡಪಡಿಸುತ್ತಿರುವುದನ್ನು ಕಂಡಿದ್ದರು. ಇದನ್ನು ಅರಿತು ಪಕ್ಷಿಗಳ ಮೇಲಿನ ವಿಶೇಷ ಪ್ರೀತಿಯಿಂದ ಕಳೆದ ಎರಡು ವರ್ಷಗಳಿಂದ ತಾವು ಕೆಲಸ ಮಾಡುವ ಸ್ಥಳದಲ್ಲೆ ಪಕ್ಷಿಗಳಿಗೆ ನೀರು, ಕಾಳು, ಅಕ್ಕಿ , ಅನ್ನ ನೀಡುತ್ತ ಬಂದಿದ್ದು ಈ ವರ್ಷವೂ ಅದನ್ನು ಮುಂದುವರಿಸಿದ್ದಾರೆ.
ಥೀಂ ಪಾರ್ಕ್‌ನ ಒಂದು ಬದಿ ಎತ್ತರದ ಜಾಗದಲ್ಲಿ ತಟ್ಟೆ ಆಕಾರದ ಪಾತ್ರೆಯಲ್ಲಿ ಬೆಳಗ್ಗೆ, ಮಧ್ಯಾಹ್ನದ ಹೊತ್ತು ನೀರು, ಅನ್ನ ಅಥವಾ ಅಕ್ಕಿ ಇಡುತ್ತಾರೆ. ಪರಿಸರದಲ್ಲಿರುವ ಪಾರಿವಾಳ, ಗುಬ್ಬಚ್ಚಿ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಬಂದು ಇಲ್ಲಿ ನೀರು ಕುಡಿದು ದಣಿವಾರಿಸಿಕೊಳ್ಳುತ್ತಿವೆ. ಪ್ರಾಣಿ- ಪಕ್ಷಿಗಳ ಬಗ್ಗೆ ವಿಶೇಷ ಒಲವು ತೋರುವ ಅವರು ನಮ್ಮಂತೆ ಪ್ರಾಣಿ- ಪಕ್ಷಿಗಳಿಗೂ ಜೀವವಿದೆ. ಈ ಕಣ್ಣುಕೋರೈಸುವ ಬಿಸಿಲ ತಾಪದ ನಡುವೆ ಅವುಗಳು ಬಾಯಾರಿಕೆಯಿಂದ ಬಸವಳಿಯುತ್ತವೆ. ಅವುಗಳಿಗೆ ಎಲ್ಲರೂ ಮನೆಯ ವರಾಂಡದಲ್ಲಿ ನೀರು, ಆಹಾರ ಇಡುವ ಮೂಲಕ ಅವುಗಳ ಬಗ್ಗೆ ವಿಶೇಷ ಕಾಳಜಿ ತೋರಿಸಬೇಕು. ಬೇಸಗೆಯ ಮೂರ್‍ನಾಲ್ಕು ತಿಂಗಳ ಅವಧಿಯಲ್ಲಿ ಈ ರೀತಿ ನಾವು ಪರಿಸರ ಕಾಳಜಿ ತೋರಿಸುವುದರಿಂದ ಪ್ರಾಣಿ-ಪಕ್ಷಿ ಸಂಕುಲಕ್ಕೆ ನೆರವಾಗ ಬೇಕೆನ್ನುತ್ತಾರೆ ಅವರು.