ಈಗ ತಿಂಗಳ ಮೇಲೆ ಒಂದು ವಾರ ಕಾಲ, ಮನೆಯೇ ಜಗತ್ತು ಅಂತ ಮಾಡಿಕೊಂಡು ಕೂತಮೇಲೆ, ಒಮ್ಮೊಮ್ಮೆ ಅನ್ಸುತ್ತೆ – ಇಷ್ಟು ದಿನ ಬಾಲಕ್ಕೆ ಬೆಂಕಿ ಬಿದ್ದವನ ಹಾಗೆ, ಈ ಊರು ಆ ದೇಶ ಅಂತ ಸುತ್ತುತಾ ಇದ್ದೆನಲ್ಲ, ಯಾಕೆ? ಅಂತ.
ನನ್ನ ಭಾಷಣ, ಉಪದೇಶ, ಉಪ್ಪಿನಕಾಯಿ ಇದೆಲ್ಲಾ ಇಲ್ಲದೇನೂ ಪ್ರಪಂಚ ಬದುಕಿಯೇ ಇದೆ ಅಲ್ವಾ!? ಅರ್ಥ ಇಷ್ಟೇ- ಯಾವ ತಣ್ತೀಕ್ಕೂಮನುಷ್ಯ ಜಗತ್ತು ಬದುಕ್ತಾ ಇಲ್ಲ. ತಾನು, ತನ್ನ ಖುಷಿಗೆ, ತೀಟೆಗೆ, ಲಾಭಕ್ಕೆ, ಭೋಗಕ್ಕೆ ಬದುಕ್ತಾ ಇದೆ. ನಾವು ನಮ್ಮನ್ನ, ನಮ್ಮ ಬದುಕಿನಾಚೆಗೊಂದು ಸಲ ನಿಂತು ನೋಡಬೇಕು. ತಿರುಗೋ ಭೂಮಿಯ ಮೇಲೆ ನಿಂತವರಿಗೆ, ಭೂಮಿ ತಿರುಗೋದು ಕಾಣೋದಿಲ್ಲ. ರೈಲಿನೊಳಗೆ ಎಲ್ಲ ಕಿಟಕಿಗಳನ್ನೂ ಮುಚ್ಚಿಕೊಂಡು ಕೂತವನಿಗೆ ರೈಲು ಓಡುತ್ತಿರೋದು ಕಾಣೋದಿಲ್ಲ. ಇರಲಿ…
ಮಾರ್ಚಿ 23 ನೇ ತಾರೀಕು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಟಿ.ವಿ. ಮೇಲೆ ಬಂದು-ಮುಂದಿನ ಮೂರು ವಾರ ಇಡೀ ದೇಶ ಲಾಕ್ ಡೌನ್ ಅಂತ ಘೋಷಿಸಿದಾಗ, ನನಗೇನೂ ಬೇಜಾರಾಗಲಿಲ್ಲ. ಈಗ ಆಕಸ್ಮಿಕವಾಗಿ ಸಿಗುವ ರಜೆಯಲ್ಲಿ, ರಾಮಾಯಣ-ಮಹಾಭಾರತಗಳನ್ನು ಓದಿಬಿಡಬೇಕು ಅಂತ ಮನಸ್ಸಾಯಿತು. ಪಾವಗಡ ಪ್ರಕಾಶರಾವ…, ಬನ್ನಂಜೆ ಗೋವಿಂದಾಚಾರ್ಯ, ಮತ್ತು ಶತಾವಧಾನಿ ಗಣೇಶ್ ಅವರ ಪ್ರವಚನಗಳನ್ನು ಕೇಳಿದೆ. ಕುವೆಂಪು ಅವರ ರಾಮಾಯಣ ದರ್ಶನಂನ್ನು ಮತ್ತೂಮ್ಮೆ ಆಸ್ಥೆಯಿಂದ ಓದಿದೆ. ಈಗ ಮನಸ್ಸಿನ ತುಂಬಾ, ರಾಮಾಯಣದ ಭಾವ, ವಿಚಾರ, ಜಿಜ್ಞಾಸೆಗಳೇ ತುಂಬಿಕೊಂಡಿವೆ.
ಲಾಕ್ ಡೌನ್ ಅವಧಿಯ ಈ ರಜೆಯಲ್ಲಿ, ನಾನೂ- ಹೆಂಡತಿಯೂ ಸೇರಿಕೊಂಡು, ಮನೆಯ ಮೂಲೆ ಮುಡುಕಲಿನಲ್ಲಿದ್ದ ಕೊಳೆ ಕಸವನ್ನೆಲ್ಲಾ ತೆಗೆದಿದ್ದೇವೆ. ಸಾವಿರಾರು ಪುಸ್ತಕಗಳ ರಾಶಿಯಲ್ಲಿ, ಒಂದೊಂದೇ ಪುಸ್ತಕ ತೆಗೆದು ಧೂಳೊರೆಸಿ, ಮುಟ್ಟಿ- ಮಾತಾಡಿಸಿ, ಒಂದು ಕ್ರಮದಲ್ಲಿ ಎತ್ತಿಟ್ಟಿದ್ದೇವೆ. ನನಗೀಗ ಅನ್ನಿಸ್ತಾ ಇದೆ; ಇಡೀ ಜಗತ್ತು, ವರ್ಷಕ್ಕೊಮ್ಮೆ ಲಾಕ್ ಡೌನ್ ಆಗಲೇಬೇಕು.
ಇಲ್ಲವಾದರೆ ನಮ್ಮ ಮನೆ- ಮನಗಳ ಮೂಲೆ ಮುಡುಕಲಿನ ಕಸ ಹೊಡೆಯಲು ನಮಗೆ ಪುರಸೊತ್ತೇ ಸಿಗೋದಿಲ್ಲ.
● ಪ್ರೊ. ಕೃಷ್ಣೇಗೌಡ. ಖ್ಯಾತ ವಾಗ್ಮಿ, ಸಾಹಿತಿಗಳು