Advertisement

ಮೆಣಸಿನಕಾಯಿ ಬೆಳೆಗಾರರಿಗೆ ಬರಸಿಡಿಲು

06:12 PM Dec 07, 2021 | Team Udayavani |

ಲಕ್ಷ್ಮೇಶ್ವರ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಅಕಾಲಿಕ ಮಳೆ, ಹವಾಮಾನ ವೈಪರಿತ್ಯದಿಂದ ಮುಂಗಾರಿನ ಪ್ರಮುಖ ಬೆಳೆಗಳ ಜತೆಗೆ ರೈತರ ಆಶಾದಾಯಕ ಮೆಣಸಿನಕಾಯಿ ಬೆಳೆ ಸಂಪೂರ್ಣ ನಾಶವಾಗಿದ್ದರಿಂದ ಬಂಗಾರದ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಬರಸಿಡಿಲು ಬಡಿದಂತಾಗಿದೆ.

Advertisement

ಹೆಚ್ಚು ಖರ್ಚು: ಮೆಣಸಿನಕಾಯಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಇರುವುದರಿಂದ ಮತ್ತು ಕಳೆದ ವರ್ಷ ಕ್ವಿಂಟಲ್‌ಗೆ 50 ಸಾವಿರವರೆಗೆ ಮಾರಾಟವಾಗಿದ್ದರಿಂದ ಈ ವರ್ಷ ರೈತರು ಆತಿಯಾದ ಕಾಳಜಿಯಿಂದ ಹೆಚ್ಚು ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಪ್ರಾರಂಭದಿಂದಲೂ ತೇವಾಂಶ ಹೆಚ್ಚಳದಿಂದ ಹಳದಿ, ಮುಟುರು, ಬೂದುರೋಗಕ್ಕೊಳಗಾದ ಬೆಳೆ ಸಂರಕ್ಷಣೆಗಾಗಿ ಪ್ರತಿ ಎಕರೆಗೆ ಕನಿಷ್ಟ 30 ಸಾವಿರ ರೂ. ಖರ್ಚು ಮಾಡಿದ್ದರು. ಇದೀಗ “ಹಲ್ಲ ಇದ್ರ ಕಡ್ಲಿಲ್ಲ, ಕಡ್ಲಿದ್ರ  ಹಲ್ಲಿಲ್ಲ’ ಎನ್ನುವಂತಾಗಿದೆ ರೈತರ ಪರಿಸ್ಥಿತಿ. ಬೆಳೆ ಇದ್ದಾಗ ಬೆಲೆ ಇರುವುದಿಲ್ಲ, ಬೆಲೆ ಇದ್ದಾಗ ಬೆಳೆ ಇರುವುದಿಲ್ಲ ಎನ್ನುವ ಮಾತು ಸತ್ಯವಾಗಿದೆ.

ಮಳೆಗಾಹುತಿ: ಅತಿಯಾದ ಮಳೆಯಿಂದ ಬೇರುಕೊಳೆ, ಸಿಡಿರೋಗ, ಮಚ್ಚೆರೋಗಕ್ಕೆ ಮೆಣಸಿನಕಾಯಿ ಬಳೆ ಬಲಿಯಾಗಿ ರೈತರ ಕನಸು ನುಚ್ಚುನೂರಾಗಿದೆ. ಅರೆ ಮಳೆಗಾಲಕ್ಕೆ ಸೂಕ್ತವಾದ ಈ ಬೆಳೆಗೆ ಅತಿಯಾದ ಮಳೆ ಮಾರಕವಾಗಿ ಪರಿಣಮಿಸಿದೆ.

ಬಹುತೇಕ ರೈತರ ಬೆಳೆ ಸಂಪೂರ್ಣ ನಾಶವಾಗಿದ್ದರೆ, ಅಲ್ಲೊಬ್ಬ ಇಲ್ಲೊಬ್ಬ ರೈತರ ಗುಣಮಟ್ಟದ್ದಲ್ಲದ ಬೆಳೆ ಶೇ. 10 ಉಳಿದುಕೊಂಡಿದೆ. ತೋಟಗಾರಿಕಾ ಇಲಾಖೆ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ ಶಿರಹಟ್ಟಿ/ ಲಕ್ಷ್ಮೇಶ್ವರ ತಾಲೂಕಿನ 2171 ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆಯಾಗಿದೆ. ಕಪ್ಪು ಮಣ್ಣಿನ ಪ್ರದೇಶಗಳಾದ ಲಕ್ಷ್ಮೇಶ್ವರ, ಯತ್ತಿನಹಳ್ಳಿ, ಮಾಡಳ್ಳಿ, ಯಳವತ್ತಿ, ಮಾಗಡಿ, ಗೊಜನೂರ, ರಾಮಗೇರಿ, ಬಸಾಪುರ, ಗೋವನಾಳ, ಶಿಗ್ಲಿ ಮತ್ತಿತರ ಕಡೆಗಳಲ್ಲಿ ಕಡ್ಡಿ, ಡಬ್ಬಿ ಮೆಣಸಿನಕಾಯಿ ಬೆಳೆಯಲಾಗಿತ್ತು.

ನಷ್ಟದಲ್ಲಿ ರೈತ: ಸದ್ಯ ಮಾರುಕಟ್ಟೆಯಲ್ಲಿ ಕಡ್ಡಿಗಾಯಿಗೆ 15,000ರಿಂದ 20,000 ರೂ. ಮತ್ತು ಡಬ್ಬಿಗೆ 25,000-30,000 ರೂ. ಬೆಲೆಯಿದೆ. ಬೆಲೆ ಗಗನಕ್ಕೇರಿದ್ದು ಕಂಡು ಬೆಳೆ ಬಾರದ್ದರಿಂದ ರೈತ ಸಮುದಾಯ ಕೈ ಕೈ ಹಿಚುಕಿಕೊಳ್ಳುವಂತಾಗಿದೆ. ಎಕರೆಗೆ ಕನಿಷ್ಟ 25ರಿಂದ 30 ಸಾವಿರಕ್ಕೂ
ಹೆಚ್ಚು ಖರ್ಚು ಮಾಡಿದ್ದು ಬೆಳೆ ಸಂಪೂರ್ಣ ಹಾಳಾಗಿದ್ದರಿಂದ ಕಂಬದ ಪೆಟ್ಟು ಕಪಾಳದ ಪೆಟ್ಟು ಅನುಭವಿಸುವಂತಾಗಿದೆ.

Advertisement

ಹೆಚ್ಚು ಮಳೆಯಿಂದ ಮೆಣಸಿನಕಾಯಿ ಬೆಳೆ ಬಹುತೇಕ ಕೊಳೆರೋಗಕ್ಕೆ ತುತ್ತಾಗಿದೆ. ಮಳೆ ವಾತಾವರಣ ಮುಂದುವರಿದಿರುವುದರಿಂದ ಅಳಿದುಳಿದ ಬೆಳೆ ಉಳಿಸಿಕೊಳ್ಳಲು ರೈತರಿಗೇ ಸಲಹೆ ನೀಡಲು ತೋಚದಂತಾಗಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ 4218 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಈಗಾಗಲೇ ಅಂದಾಜು 3000 ಎಕರೆ ಪ್ರದೇಶದ ಬೆಳೆಹಾನಿಯಾಗಿದೆ ಎಂಬ ವರದಿ ನೀಡಿದ್ದೇವೆ. ಸಮಗ್ರ ಸಮೀಕ್ಷೆ ಪೂರ್ಣಗೊಳ್ಳುವ ಹಂತದಲ್ಲಿದೆ. ಮೆಣಸಿ
ನಕಾಯಿ ಸೇರಿ ಇತರೆ ಬೆಳೆಗಳಿಗೆ ಎನ್‌ಡಿಆರ್‌ಎಫ್‌ ಅಡಿ ತಾತ್ಕಾಲಿಕ ಪರಿಹಾರ ಸೂಚಿಸಿದ್ದು, ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನೀಡಲಿದೆ ಎಂಬ ಮಾಹಿತಿಯಿದೆ. ಬೆಳೆಹಾನಿ ಪರಿಹಾರ ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ.
ಸುರೇಶ ಕುಂಬಾರ,
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

ಮುಂಗಾರಿನಲ್ಲಿ ಸಾವಿರಾರು ರೂ. ಸಾಲ ಮಾಡಿ ಬಿತ್ತನೆ ಮಾಡಿದ್ದ ಎಲ್ಲಾ ಬೆಳೆ ಮಳೆಗೆ ಕೊಳೆತು ಹೋಗಿದೆ. ಬೆಳ್ಳುಳ್ಳಿ, ಉಳ್ಳಾಗಡ್ಡಿ, ಶೇಂಗಾ, ಹತ್ತಿ ಮತ್ತು ಮೆಣಸಿನಕಾಯಿ ಬೆಳೆ ನಾಶವಾಗಿದೆ. ಈ ವರ್ಷದ ರೈತರ ಬದುಕು ಅತ್ಯಂತ ಕಷ್ಟಕರವಾಗಿದೆ. ಇದುವರೆಗೂ ಸರ್ಕಾರ ರೈತರಿಗೆ ಬೆಳೆಹಾನಿ, ಬೆಳೆವಿಮೆ ಪರಿಹಾರ ನೀಡಿಲ್ಲ. ಇದರಿಂದಾಗಿ ಕೃಷಿಯನ್ನೇ ನಂಬಿ ಬದುಕು ಸಾಗಿಸುವ ರೈತರ ಗೋಳು ಹೇಳತೀರದಾಗಿದೆ. ಸರ್ಕಾರ ಆದಷ್ಟು ಬೇಗ ರೈತರ ಕಷ್ಟಕ್ಕೆ ಸ್ಪಂದಿಸಬೇಕು.
ವಿರೂಪಾಕ್ಷಪ್ಪ ಆದಿ, ಶಿವಾನಂದ ಹೊಸಮನಿ, ಬಸವರಾಜ
ಮೆಣಸಿನಕಾಯಿ , ರೈತರು

Advertisement

Udayavani is now on Telegram. Click here to join our channel and stay updated with the latest news.

Next