Advertisement
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕೃಷಿರಂಗದಲ್ಲಿ ಸರಕಾರದ ಅತ್ಯಧಿಕ ಬೆಂಬಲ ಸಿಕ್ಕಿದ್ದು ಕಬ್ಬಿನ (ಸಕ್ಕರೆ) ಕಾರ್ಖಾನೆಗಳಿಗೆ ಎನ್ನಬಹುದು. ಆದರೆ ಸಕ್ಕರೆ ಲಾಬಿ “ನಮ್ಮದು ನಷ್ಟದ ವ್ಯವಹಾರ’ ಎನ್ನುತ್ತಲೇ ಇದೆ. ಆದರೆ, ವರ್ಷದಿಂದ ವರ್ಷಕ್ಕೆ ಸಕ್ಕರೆ ಉತ್ಪಾದನೆ ಹೆಚ್ಚುತ್ತಲೇ ಇದೆ! ಜೊತೆಗೆ, ಕಳೆದ ಹತ್ತು ವರುಷಗಳಲ್ಲಿ ಸಕ್ಕರೆ ಉದ್ಯಮವು ಸರಕಾರದಿಂದ ಸುಲಭ ಷರತ್ತಿನ ಸಾಲ ಮತ್ತು ಇತರ ಸವಲತ್ತುಗಳನ್ನು ಪಡೆಯುತ್ತಲೇ ಇದೆ. ಹಾಗಿದ್ದರೂ, ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಹಣವನ್ನು ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ.
Related Articles
Advertisement
ಇತ್ತ ಸಕ್ಕರೆ ಉದ್ಯಮವನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂದು ವಾದಿಸುತ್ತದೆ ಸಕ್ಕರೆ ಲಾಬಿ. ಅತ್ತ, ಸರಕಾರ ಕೋಟಿಗಟ್ಟಲೆ ರುಪಾಯಿ ಆರ್ಥಿಕ ಬೆಂಬಲ ನೀಡಬೇಕೆಂದು ಆಗ್ರಹಿಸುತ್ತದೆ. ಇದು ಸಕ್ಕರೆ ಉದ್ಯಮದ ದ್ವಿಮುಖ ನೀತಿಯನ್ನು ಸೂಚಿಸುತ್ತದೆ. 2012ರಲ್ಲಿ ಆಗಿನ ಕೇಂದ್ರ ಸರಕಾರ ನೇಮಿಸಿದ ಸಿ. ರಂಗರಾಜನ್ ಸಮಿತಿ, ಸಕ್ಕರೆ ಉದ್ಯಮವನ್ನು ನಿಯಂತ್ರಣ ಮುಕ್ತಗೊಳಿಸಬೇಕೆಂದು ಶಿಫಾರಸ್ಸು ಮಾಡಿತು. ಅದನ್ನು ಕೇಂದ್ರ ಸರಕಾರ ಜಾರಿ ಮಾಡಿದರೂ. ಎಫ್ಆರ್ ಬೆಲೆ ನಿರ್ಧರಿಸುವ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಂಡಿತು!
ಸರಕಾರ ಕೋಟಿಗಟ್ಟಲೆ ರುಪಾಯಿ ಆರ್ಥಿಕ ಸಹಾಯ ನೀಡಿದರೂ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಿಲ್ಲ. ಇದರಿಂದಾಗಿ ರೈತರಿಗೆ ಇಮ್ಮಡಿ ನಷ್ಟ! ಒಂದೆಡೆ, ರೈತರು ಅಧಿಕ ಬಡ್ಡಿದರದಲ್ಲಿ ಬೆಳೆ ಸಾಲ ಪಡೆದು, ಕಬ್ಬು ಬೆಳೆ ಕಟಾವಿಗಾಗಿ ಒಂದು ವರ್ಷ ಕಾಯುತ್ತಾರೆ. ಇನ್ನೊಂದೆಡೆ, ರೈತರಿಂದ ಕಬ್ಬು ಖರೀದಿಸಿದ ಕಾರ್ಖಾನೆ, ಕಬ್ಬಿನ ಬೆಲೆ ಪಾವತಿಗೆ ವರ್ಷಗಟ್ಟಲೆ ವಿಳಂಬ ಮಾಡಿದರೂ ಆ ವಿಳಂಬದ ಅವಧಿಗೆ ರೈತರಿಗೆ ಬಡ್ಡಿ ಪಾವತಿಸುವುದಿಲ್ಲ. ಅಷ್ಟೇ ಅಲ್ಲ, ಸಕ್ಕರೆ ಕಾರ್ಖಾನೆಗಳು ವಿವಿಧ ಯೋಜನೆಗಳ ಅನುಸಾರ ಪಡೆದ ಸಾಲದಲ್ಲಿ ರು. 2,081 ಕೋಟಿ ಬಾಕಿ ಮಾಡಿವೆ (ಮಾರ್ಚ್ 2019ರಲ್ಲಿ) ಎಂದು ಮಾಹಿತಿ ನೀಡುತ್ತದೆ ಕೇಂದ್ರ ಸರಕಾರದ ಸಕ್ಕರೆ ನಿರ್ದೇಶನಾ ವಿಭಾಗ. ಅಂತೂ, ತಾವು ಪಡೆದ ಸಾಲವನ್ನು ಸಕ್ಕರೆ ಕಾರ್ಖಾನೆಗಳು ಹೇಗೆ ಬಳಕೆ ಮಾಡುತ್ತಿವೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ.
ಮೂರು ಮುಖ್ಯ ಸಕ್ಕರೆ ಉತ್ಪಾದನಾ ರಾಜ್ಯಗಳಲ್ಲಿ, ಸಕ್ಕರೆ ಉದ್ಯಮದ ಮೇಲೆ ರಾಜಕಾರಣಿಗಳ ಬಿಗಿ ಹಿಡಿತ ಹೇಗಿದೆ ಗಮನಿಸಿ. ಅಲ್ಲಿ ರಾಜಕಾರಣಿಗಳು ನಿಯಂತ್ರಿಸುವ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹೀಗಿದೆ- ಮಹಾರಾಷ್ಟ್ರದಲ್ಲಿ ಎನ್.ಸಿ.ಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮತ್ತು ಆ ಪಕ್ಷದ ಇತರ ಮುಖಂಡರು 187 ಸಕ್ಕರೆ ಕಾರ್ಖಾನೆಗಳು. ಅಲ್ಲಿನ ಮರಾಠವಾಡದಲ್ಲಿ ಬಿಜೆಪಿ ಪಕ್ಷದ ಪಂಕಜ ಮುಂಡೆ ಮತ್ತು ಅವರ ಕುಟುಂಬ 7 ಸಕ್ಕರೆ ಕಾರ್ಖಾನೆಗಳು. ಅಲ್ಲಿನ ಇತರ ನಾಲ್ವರು ರಾಜಕೀಯ ಮುಖಂಡರು/ ಕುಟುಂಬ 13 ಸಕ್ಕರೆ ಕಾರ್ಖಾನೆಗಳು. ಕರ್ನಾಟಕದಲ್ಲಿ ಬಿಜೆಪಿ ನಾಯಕರೊಬ್ಬರು ನಾಲ್ಕು ಸಕ್ಕರೆ ಕಾರ್ಖಾನೆಗಳ ಮತ್ತು ಕಾಂಗ್ರೆಸ್ ನೇತಾರರೊಬ್ಬರು ಒಂದು ಕಾರ್ಖಾನೆಯ ಒಡೆಯರು. ಭಾರತದ ಒಟ್ಟು ಸಕ್ಕರೆ ಉತ್ಪಾದನೆಗೆ ಶೇ.37ರಷ್ಟು ಪಾಲು ನೀಡುವ ಉತ್ತರ ಪ್ರದೇಶದಲ್ಲಂತೂ ಸರಕಾರಿ ಸಕ್ಕರೆ ಕಾರ್ಖಾನೆಗಳು ರೊಟ್ಟಿಗಳಂತೆ ಮಾರಾಟವಾದವು! ಅಲ್ಲಿ 2010ರಲ್ಲಿ ಬಹುಜನ ಸಮಾಜ ಪಕ್ಷದ ಮಾಯಾವತಿ ಅವರು ಮುಖ್ಯಮಂತ್ರಿ ಆಗಿದ್ದಾಗ, ಸರಕಾರಿ ಮಾಲೀಕತ್ವದ 21 ಸಕ್ಕರೆ ಕಾರ್ಖಾನೆಗಳನ್ನು ತೀರಾ ಕಡಿಮೆ ಬೆಲೆಗೆ ಮಾರಿದರು.
ಈ ಮೂರು ರಾಜ್ಯಗಳಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಮಾಡಿರುವ ಹಣ: ಉತ್ತರಪ್ರದೇಶದಲ್ಲಿ ರು. 10,102 ಕೋಟಿ, ಮಹಾರಾಷ್ಟ್ರದಲ್ಲಿ ರು. 4,999 ಕೋಟಿ ಮತ್ತು ಕರ್ನಾಟಕದಲ್ಲಿ ರು. 3,041 ಕೋಟಿ. ಇವೆಲ್ಲವನ್ನೂ ಗಮನಿಸಿದಾಗ ಸ್ಪಷ್ಟವಾಗುವ ಸಂಗತಿ: ಕಾರ್ಖಾನೆಗಳು ಕಬ್ಬು ಬೆಳೆಗಾರರ ಬಾಕಿ ಪಾವತಿಸುವಂತೆ ಮಾಡದಿದ್ದರೆ, ಕಬ್ಬು ಬೆಳೆಗಾರರಿಗೆ ಕಬ್ಬು ಕಹಿಯಾಗಿಯೇ ಇರುತ್ತದೆ; ಅವರ ಸಂಕಟಗಳು ಹಾಗೆಯೇ ಇರುತ್ತವೆ.
ಲಾಭವಿದೆ ಅನ್ನೋದನ್ನು ಒಪ್ಪಲ್ಲ…ಒಂದು ಕೆ.ಜಿ ಸಕ್ಕರೆಯ ಉತ್ಪಾದನಾ ವೆಚ್ಚ ರೂ. 35. ಈ ಪ್ರಕ್ರಿಯೆಯಲ್ಲಿ ಸಿಗುವ ಉತ್ತಮ ಗುಣಮಟ್ಟದ ಇಥನಾಲ್ 0.6 ಲೀಟರ್. ಈ ಇಥನಾಲಿಗೆ ಲೀಟರಿಗೆ ರೂ.52 ಬೆಲೆ ಸಿಗುವಾಗ, ಒಂದು ಕಾರ್ಖಾನೆ ತನ್ನ ಬಿ-ವರ್ಗದ ಕಾಕಂಬಿಯನ್ನು ಇಥನಾಲ್ ಉತ್ಪಾದನೆಗೆ ಬಳಸಿದರೆ, ಆ ಕಾರ್ಖಾನೆಗೆ ಸಕ್ಕರೆಯ ಉತ್ಪಾದನಾ ವೆಚ್ಚ ದಕ್ಕುತ್ತದೆ. ಆದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಇಥನಾಲ್ ಉತ್ಪಾದನೆಯಿಂದ ಆದಾಯ ಲಭಿಸುತ್ತದೆಂದು ಒಪ್ಪುವುದಿಲ್ಲ! -ಅಡ್ಡೂರು ಕೃಷ್ಣ ರಾವ್