ಸಾಗರ: ಕೆಲವರು ಆಪಾದನೆ ಮಾಡಲು ಕಾಯುತ್ತಿದ್ದಾರೆ. ಇಂತಹುದ್ದಕ್ಕೆ ಹೆದರುವ ಪ್ರಶ್ನೆಯೆ ಇಲ್ಲ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಅವರು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪಾದನೆಗಳಿಗೆ ತಿರುಗೇಟು ನೀಡಿದರು.
ಇಲ್ಲಿನ ಗಾಂಧಿ ಮೈದಾನದ ನಗರಸಭೆ ರಂಗಮಂದಿರದಲ್ಲಿ ನಗರಸಭೆ ವತಿಯಿಂದ ಆ. ೧೩ರಿಂದ ೧೫ರವರೆಗೆ ನಡೆಯುವ ರಾಷ್ಟ್ರಧ್ವಜ ವಿತರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಮನೆಮನೆ ಮೇಲೂ ರಾಷ್ಟ್ರಧ್ವಜ ಹಾರಿಸುವುದು ದೇಶದ ಕೆಲಸ. ಇಲ್ಲಿ ಪಕ್ಷ, ಜಾತಿಮತ ಬೇಧ ಮರೆತು ಕೆಲಸ ಮಾಡಬೇಕು. ಟೀಕೆ ಮಾಡುವ ಕೆಲವರು ಬಂದು ಕೆಲಸ ಮಾಡಬೇಕು. ಆಗ ರಾಷ್ಟ್ರಸೇವೆಯಲ್ಲಿ ಅವರು ತೊಡಗಿಸಿಕೊಂಡಂತೆ ಆಗುತ್ತದೆ ಎಂದು ಹೆಸರು ಹೇಳದೆ ಛೇಡಿಸಿದರು.
ಬಾವುಟ ತಯಾರಿಸುವಾಗ ಎಲ್ಲ ರೀತಿಯ ಎಚ್ಚರಿಕೆ ವಹಿಸಲಾಗಿದೆ. ಸಣ್ಣಪುಟ್ಟ ಲೋಪವನ್ನು ಕೆಲವರು ಎತ್ತಿ ಆಡುವ ಕೆಟ್ಟ ಮನಸ್ಥಿತಿಯವರು ಇದ್ದಾರೆ. ಸಾರ್ವಜನಿಕರು ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು. ಧ್ವಜ ತಯಾರಿಸಲು ಯಾರ ಬಳಿಯೂ ಹಣವನ್ನು ವಸೂಲಿ ಮಾಡಿಲ್ಲ ಎಂದು ಹೇಳಿದರು.
ತಾಲೂಕಿನಲ್ಲಿ ೫೦ರಿಂದ ೬೦ ಸಾವಿರ ಮನೆ ಇದ್ದು, ಹೆಚ್ಚುವರಿಯಾಗಿ ೧೭ ಸಾವಿರ ಬಾವುಟವನ್ನು ಎಲ್ಲ ರೀತಿಯಲ್ಲೂ ಸಿದ್ಧಪಡಿಸಲಾಗಿದೆ. ಗುರುವಾರದಿಂದ ಶಾಲಾಕಾಲೇಜು, ಸಂಘಸಂಸ್ಥೆಗಳ ಮೂಲಕ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಾಗುತ್ತದೆ. ಮನೆಗೊಂದೇ ಬಾವುಟ ಹಾರಿಸುವತ್ತ ಎಲ್ಲರೂ ಗಮನ ಹರಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಸದಸ್ಯರಾದ ಟಿ.ಡಿ.ಮೇಘರಾಜ್, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಪೌರಾಯುಕ್ತ ರಾಜು ಡಿ. ಬಣಕಾರ್, ತಾಲ್ಲೂಕು ಪಂಚಾಯ್ತಿ ಇಓ ಪುಷ್ಪಾ ಕಮ್ಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್., ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಟಿಎಪಿಎಂಸಿಎಸ್ ಅಧ್ಯಕ್ಷ ಲೋಕನಾಥ ಬಿಳಿಸಿರಿ, ನಗರಸಭಾ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.