ಬಾಗಲಕೋಟೆ: ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಷಯದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಗುಡ್ಡ ಸುತ್ತಿ, ಕೊನೆಗೂ ಒಂದು ಅಂತಿಮ ನಿರ್ಧಾರಕ್ಕೆ ಬಂದಿದೆ.
ಹೌದು, ಹೆರಕಲ್ದಿಂದ ಬಾಗಲಕೋಟೆಗೆ ಕುಡಿಯುವ ನೀರು ಪೂರೈಕೆ ಯೋಜನೆಯ ಜಾಕವೆಲ್ಗೆ ನಿತ್ಯ 7550 ಕೆ.ವಿ ವಿದ್ಯುತ್ ಅಗತ್ಯವಿದೆ. ಈ ವಿದ್ಯುತ್ ಪಡೆಯಲು, ಕಳೆದ ಆರು ವರ್ಷಗಳಿಂದ ಬಿಟಿಡಿಎ, ಮೂರು ಕಡೆ ಗುಡ್ಡ ಅಲೆದಾಟ ನಡೆಸಿರುವುದು ಬಹಿರಂಗ ಸತ್ಯ.
ಏನದು ಗುಡ್ಡ ಸುತ್ತುವುದು: ಬೀಳಗಿ ತಾಲೂಕು ಹೆರಕಲ್ ಬಳಿ ಬಿಟಿಡಿಎದಿಂದ ಜಾಕವೆಲ್ ನಿರ್ಮಿಸಲಾಗಿದೆ. ಈ ಜಾಕವೆಲ್ ನಿರ್ಮಾಣ ಮಾಡುವ ಕಾಮಗಾರಿ 2013ರಲ್ಲೇ ಆರಂಭಗೊಂಡಿತ್ತು. ಅದೇ ವೇಳೆಗೆ ಯೋಜನೆಗೆ ಬೇಕಾದ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡು, ಕಾಮಗಾರಿ ಅನುಷ್ಠಾನಗೊಳಿಸಿದ್ದರೆ, ಇಷ್ಟೊತ್ತಿಗೆ ಬಾಗಲಕೋಟೆಯ ಜನತೆಗೆ ಕೃಷ್ಣೆಯ ಹಿನ್ನೀರು ದೊರೆಯುತ್ತಿತ್ತು. ಆದರೆ, ಬಿಟಿಡಿಎ ಅಧಿಕಾರಿಗಳ ವಿಳಂಬ ಧೋರಣೆ, ನಿರ್ಲಕ್ಷ್ಯದಿಂದ ಆರು ವರ್ಷದಿಂದ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಲ್ಲ.
2013ರಲ್ಲಿ ಯೋಜನೆಯ ನೀಲನಕ್ಷೆ ತಯಾರಿಸುವ ವೇಳೆ, ಕುಂದರಗಿ ವಿದ್ಯುತ್ ಉಪ ಕೇಂದ್ರದಿಂದ ಹೆರಕಲ್ ಜಾಕವೆಲ್ಗೆ ವಿದ್ಯುತ್ ಕಲ್ಪಿಸುವುದನ್ನು ನೀಲನಕ್ಷೆಯಲ್ಲಿ ಅಳವಡಿಸಲಾಗಿತ್ತು. ಆದರೆ, ಕುಂದರಗಿ ಉಪ ವಿದ್ಯುತ್ ಕೇಂದ್ರದಿಂದ ದಿನದ 24 ಗಂಟೆ ವಿದ್ಯುತ್ ಕೊಡಲು ಸಾಧ್ಯವಿಲ್ಲ ಎಂಬುದು ಅರಿವಿಗೆ ಬಂದ ಬಳಿಕ, ಬಾಗಲಕೋಟೆ ತಾಲೂಕಿನ ಸೀಮಿಕೇರಿ ಪುನರ್‌ವಸತಿ ಕೇಂದ್ರ (ಹೂಲಗೇರಿ-ಹೆದ್ದಾರಿ ಬಳಿ)ದ ಮುಂದೆ ಇರುವ 220 ವಿದ್ಯುತ್ ವಿತರಣೆ ಕೇಂದ್ರದಿಂದ ವಿದ್ಯುತ್ ಕಲ್ಪಿಸಲು ಚಿಂತನೆ ಮಾಡಿ, ಸರ್ವೇ ಕೂಡ ಮಾಡಲಾಯಿತು. ಇದು ಅತ್ಯಂತ ದೂರ ಹಾಗೂ ದುಬಾರಿಯಾಗುತ್ತದೆ ಎಂದು ತಿಳಿದ ಬಳಿಕ, ಮಧ್ಯೆ ಎರಡು ವರ್ಷ, ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯನ್ನೇ ನೆನಗುದಿಗೆ ತಳ್ಳಲಾಯಿತು.
ತೋಳಮಟ್ಟಿಯಿಂದ ವಿದ್ಯುತ್: ಕುಂದರಗಿ, ಸೀಮಿಕೇರಿ ಬಳಿಕ, ಇದೀಗ ಬೀಳಗಿ ತಾಲೂಕು ತೋಳಮಟ್ಟಿ 220 ಕೆವಿ ವಿದ್ಯುತ್ ವಿತರಣೆ ಕೇಂದ್ರದಿಂದ ಜಾಕವೆಲ್ಗೆ ವಿದ್ಯುತ್ ಕೊಡಲಾಗುತ್ತಿದೆ. ಎರಡು ವರ್ಷಗಳ ಬಳಿಕ, ತೋಳಮಟ್ಟಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ವಿದ್ಯುತ್ ಕೇಂದ್ರದಿಂದ ಹೆರಕಲ್ ಬಳಿ ಇರುವ ಜಾಕವೆಲ್ ವರೆಗೆ ಕಂಬ ಅಳವಡಿಸಿ, ಅಲ್ಲಿಂದ ಜಾಕವೆಲ್ ಬಳಿ ನಿರ್ಮಿಸಿರುವ 33/66 ಕೆ.ವಿ ವಿದ್ಯುತ್ ವಿತರಣೆ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಿಕೊಂಡು, ಆ ಬಳಿಕ ಜಾಕವೆಲ್ಗೆ ವಿದ್ಯುತ್ ಕಲ್ಪಿಸುವ ಯೋಜನೆ, ಕಳೆದ ಒಂದು ವಾರದ ಹಿಂದೆ ಅನುಷ್ಠಾನಗೊಳಿಸಿದೆ.
ಈ ಕಾಮಗಾರಿಗೆ 5.50 ಕೋಟಿ ವೆಚ್ಚದ ಯೋಜನೆಗೆ ಟೆಂಡರ್ ಕರೆದಿದ್ದು, ವಿಜಯಪುರದ ಬಸವೇಶ್ವರ ಇಲೆಕ್ಟ್ರಿಕಲ್ಸ್ ಏಜನ್ಸಿ ಗುತ್ತಿಗೆ ಪಡೆದಿದೆ. ತೋಳಮಟ್ಟಿಯಿಂದ ಹೆರಕಲ್ ಜಾಕವೆಲ್ ವರೆಗೆ ಒಟ್ಟು 11 ಕಿ.ಮೀ ವಿದ್ಯುತ್ ಕಂಬ ಅಳವಡಿಸಿ, ಜಾಕವೆಲ್ ಬಳಿ ಇರುವ 33 ಕೆ.ವಿ ವಿದ್ಯುತ್ ವಿತರಣೆ ಕೇಂದ್ರಕ್ಕೆ ಕನೆಕ್ಟ್ ಮಾಡುವ ಕಾಮಗಾರಿಯ ಆದೇಶ ಪತ್ರ ನೀಡಲಾಗಿದೆ.
ಗೊಂದಲ ನಿವಾರಣೆಗೆ ಆರು ವರ್ಷ: ಹೆರಕಲ್ ಜಾಕವೆಲ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಿಟಿಡಿಎ ಅಧಿಕಾರಿಗಳು ಬರೋಬ್ಬರಿ ಆರು ವರ್ಷ ಸಮಯ ಪಡೆದಿರುವುದು ಅವರ ಕಾರ್ಯ ವೈಖರಿಗೆ ಹಿಡಿದ ಕನ್ನಡಿ ಎಂಬ ಜನಾಕ್ರೋಶ ಕೇಳಿ ಬರುತ್ತಿದೆ.
72 ಕೋಟಿ ವೆಚ್ಚದ ಯೋಜನೆ ಆರಂಭಿಸಿ, ಆರು ವರ್ಷ ಕಳೆದಿವೆ. ಜಾಕವೆಲ್ ಮತ್ತು ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಮಾಡುವ ವೇಳೆಯೇ, ವಿದ್ಯುತ್ ಕಾಮಗಾರಿಯೂ ಜೊತೆ ಜೊತೆಗೆ ಮಾಡಿದ್ದರೆ, ಯೋಜನೆಯಡಿ ನೀರು ಪಡೆಯಲು ಸಾಧ್ಯವಿತ್ತು. ಪೈಪ್‌ಲೈನ್ ಅಳವಡಿಸಿ, ಜಾಕ್‌ವೆಲ್ ನಿರ್ಮಿಸಲು ಆರು ವರ್ಷ, ವಿದ್ಯುತ್ ಸಂಪರ್ಕ ಕೊಡಲು ಆರು ವರ್ಷ ಹೀಗೆ ಸಮಯ ಪಡೆದರೆ, ಯೋಜನೆಯ ಮೂಲ ಉದ್ದೇಶ, ಜನರಿಗೆ ಕಲ್ಪಿಸುವುದು ಯಾವಾಗ ಎಂಬುದು ಜನರ ಪ್ರಶ್ನೆ.
•ಶ್ರೀಶೈಲ ಕೆ. ಬಿರಾದಾರ