Advertisement
ಎಸಿಪಿ ಕಚೇರಿ ಖಾಸಗಿ ಕಟ್ಟಡದಲ್ಲಿ ನಾಲ್ಕು ಟ್ರಾಫಿಕ್ ಮತ್ತು ಸಿಸಿಬಿ ಹಾಗೂ ಸೈಬರ್ ಪೊಲೀಸ್ ಠಾಣೆ ಸಹಿತ ಒಟ್ಟು 21 ಪೊಲೀಸ್ ಠಾಣೆಗಳು ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿವೆ. ಅವುಗಳಲ್ಲಿ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಸಂಚಾರ ದಕ್ಷಿಣ, ಸಂಚಾರ ಉತ್ತರ, ಸಿಸಿಬಿ ಠಾಣೆಗಳು ಹಾಗೂ ದಕ್ಷಿಣ ಉಪ ಆಯುಕ್ತರ (ಎಸಿಪಿ) ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಿಸಿಬಿ ಠಾಣೆ ಬಂದರು ಇಲಾಖೆಯ ಕಟ್ಟಡದಲ್ಲಿ ಹಾಗೂ ಸಂಚಾರ ಉತ್ತರ ಠಾಣೆ ಬೈಕಂಪಾಡಿಯ ಎಪಿಎಂಸಿ ಕಟ್ಟಡದಲ್ಲಿದ್ದರೆ ಇನ್ನುಳಿದ 3 ಠಾಣೆಗಳು ಮತ್ತು ಎಸಿಪಿ ಕಚೇರಿ ಖಾಸಗಿ ಕಟ್ಟಡಗಳಲ್ಲಿವೆ.
ಸಿಸಿಬಿ ಠಾಣೆ ಪ್ರಾರಂಭದಿಂದಲೂ ಬಂದರು ಇಲಾಖೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮಂಗಳೂರು ಗ್ರಾಮಾಂತರ ಠಾಣೆಯು ಪ್ರಾರಂಭದಲ್ಲಿ ಬಿಕರ್ನಕಟ್ಟೆಯ ಕೈಕಂಬದಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಹೆದ್ದಾರಿ ಮತ್ತು ಫ್ಲೈ ಓವರ್ ನಿರ್ಮಾಣವಾದಾಗ ರಸ್ತೆಗೆ ಜಾಗ ಬಿಟ್ಟು ಕೊಟ್ಟ ಕಾರಣ ಸ್ಥಳಾವಕಾಶದ ಕೊರತೆಯಿಂದಾಗಿ ಈ ಠಾಣೆಯನ್ನು ತಾತ್ಕಾಲಿಕವಾಗಿ ಮರೋಳಿಯ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ಅಲ್ಲಿ ಕಾರ್ಯ ನಿರ್ವಹಿಸಿದ್ದು, ಠಾಣೆಯ ವಿಶಾಲ ವ್ಯಾಪ್ತಿಯನ್ನು ಪರಿಗಣಿಸಿ ಅದನ್ನು ವಿಭಜಿಸಿ ಪ್ರತ್ಯೇಕ ಕಂಕನಾಡಿ ನಗರ ಠಾಣೆಯನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಈ ಹೊಸ ಠಾಣೆ ನಾಗುರಿಯಲ್ಲಿ ಖಾಸಗಿ ಕಟ್ಟಡದಲ್ಲಿ ಒಂದೂವರೆ ವರ್ಷದ ಹಿಂದೆ ಆರಂಭವಾಗಿತ್ತು. ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಯನ್ನು ವರ್ಷದ ಹಿಂದೆ ವಾಮಂಜೂರಿನ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು ಪ್ರಸ್ತುತ ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ.
Related Articles
ಹೊಸತಾಗಿ ಅಸ್ತಿತ್ವಕ್ಕೆ ಬಂದ ಮಂಗಳೂರು ನಗರ ದಕ್ಷಿಣ ಸಂಚಾರ ಪೊಲೀಸ್ ಠಾಣೆ 2017 ಸೆ. 10ರಂದು ನಾಗುರಿಯ ಗರೋಡಿ ಬಳಿ ಖಾಸಗಿ ಕಟ್ಟಡದಲ್ಲಿ ಆರಂಭಿಸಲಾಗಿತ್ತು. ಈ ಸಂಚಾರಿ ಠಾಣೆಯು ನಾಲ್ಕು (ಕಂಕನಾಡಿ ನಗರ, ಉಳ್ಳಾಲ, ಕೊಣಾಜೆ, ಮಂಗಳೂರು ಗ್ರಾಮಾಂತರ) ಕಾನೂನು ಸುವ್ಯವಸ್ಥೆಯ ಪೊಲೀಸ್ ಠಾಣೆಯ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ದಕ್ಷಿಣದಲ್ಲಿ ತಲಪಾಡಿ, ಪೂರ್ವದಲ್ಲಿ ಬೋಳಿಯಾರ್ ಮತ್ತು ಮಲ್ಲೂರು, ಉತ್ತರದಲ್ಲಿ ಬೋಂದೆಲ್ ತನಕ ಒಟ್ಟು 43 ಕಿ.ಮೀ.ನಷ್ಟು ವಿಶಾಲಕ್ಕೆ ವ್ಯಾಪಿಸಿದೆ. ಮೂರು ರಾಷ್ಟ್ರೀಯ ಹೆದ್ದಾರಿಗಳು (ರಾ.ಹೆ. 66, 75, 169) ಈ ಠಾಣೆ ವ್ಯಾಪ್ತಿಯಲ್ಲಿವೆ. ಆಗಿಂದಾಗ್ಗೆ ಸಂಚಾರ ಅಸ್ತವ್ಯಸ್ತಕ್ಕೆ ಕಾರಣವಾಗುವ ನಂತೂರು, ಪಂಪ್‌ವೆಲ್, ತೊಕ್ಕೊಟ್ಟು ಜಂಕ್ಷನ್‌ಗಳು ಈ ಠಾಣೆಯ ವ್ಯಾಪ್ತಿಯಲ್ಲಿವೆ. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೊತ್ತು ಈ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಜಾಂ, ಅಪಘಾತಗಳೂ ಸಂಭವಿಸುತ್ತವೆ. ಇಷ್ಟು ದೊಡ್ಡ ವ್ಯಾಪ್ತಿಯ ಠಾಣೆಗೆ ಸ್ವಂತ ಕಟ್ಟಡವೂ ಇಲ್ಲ, ವಾಹನ ನಿಲುಗಡೆಗೆ ಜಾಗವೂ ಇಲ್ಲ. ಪೊಲೀಸರ ವಾಹನಗಳನ್ನು ಮತ್ತು ವಿವಿಧ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕುವ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಬೇಕಾಗಿದೆ.
Advertisement
ಕಂಕನಾಡಿ ನಗರ ಠಾಣೆಯ ಸ್ಥಿತಿಯೂ ಇದೇ ಆಗಿದ್ದು, ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿಯೂ ಪ್ರಸ್ತಾಪವಾಗಿದೆ.
ನಗರದಲ್ಲಿ ನಿವೇಶನ ಸಿಗುತ್ತಿಲ್ಲಸ್ವಂತ ಕಟ್ಟಡವನ್ನು ಹೊಂದಲು ನಗರ ವ್ಯಾಪ್ತಿಯಲ್ಲಿ ಸರಕಾರಿ ಜಮೀನು ಲಭಿಸುತ್ತಿಲ್ಲ. ಪಾಲಿಕೆಯು ಈ ದಿಶೆಯಲ್ಲಿ ಸಹಕಾರ ನೀಡುತ್ತಿಲ್ಲ ಎನ್ನುತ್ತಾರೆ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್. ಪಡೀಲ್ ನಲ್ಲಿ ರೇಶ್ಮೆ ಇಲಾಖೆಯ ಜಮೀನು ಇದ್ದು, ಅದನ್ನು ಕಂಕನಾಡಿ ನಗರ ಮತ್ತು ಸಂಚಾರ ದಕ್ಷಿಣ ಠಾಣೆಗೆ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಅದನ್ನು ನೀಡಲು ಮೀನ ಮೇಷ ಎಣಿಸಲಾಗುತ್ತಿದೆ. ಇದೀಗ ಜಿಲ್ಲಾಧಿಕಾರಿಗೆ ಪತ್ರ ಬರೆದು ಪಡಿಲ್‌ನಲ್ಲಿ ಈ ಎರಡೂ ಠಾಣೆಗಳಿಗೆ ನಿವೇಶನ ಒದಗಿಸುವಂತೆ ಪತ್ರ ಬರೆದು ಕೋರಲಾಗಿದೆ ಎಂದಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ
ಗ್ರಾಮಾಂತರ ಠಾಣೆಗೆ ಸ್ವಂತ ಕಟ್ಟಡ ಹೊಂದಲು ವಾಮಂಜೂರಿನಲ್ಲಿ ಜಾಗ ಸಿಕ್ಕಿದೆ. ಸಂಚಾರ ಉತ್ತರ ಠಾಣೆಯನ್ನು ಇತ್ತೀಚೆಗೆ ಬೈಕಂಪಾಡಿಯ ಎಪಿಎಂಸಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಂಕನಾಡಿ ನಗರ ಠಾಣೆ ಮತ್ತು ಸಂಚಾರ ದಕ್ಷಿಣ ಠಾಣೆಗೆ ಪಡೀಲ್‌ನಲ್ಲಿ ಜಾಗ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪಡೀಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣ ಕೂಡ ನಿರ್ಮಾಣ ಆಗುತ್ತಿರುವುದರಿಂದ ಅಲ್ಲಿಯೇ ಪಕ್ಕದಲ್ಲಿ ಪೊಲೀಸ್ ಠಾಣೆಯೂ ಸ್ಥಾಪನೆಯಾದರೆ ಹೆಚ್ಚು ಅನುಕೂಲವಾಗಲಿದೆ.
– ಟಿ.ಆರ್. ಸುರೇಶ್,
ಪೊಲೀಸ್ ಕಮಿಷನರ್ ಹಿಲರಿ ಕ್ರಾಸ್ತಾ