ಕುಂದಾಪುರ: ಎಲ್ಲೆಡೆ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮಲೆನಾಡು, ಕೊಲ್ಲೂರು ಘಾಟಿ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಬೈಂದೂರು ತಾಲೂಕಿನ ಹಲವೆಡೆಗಳಲ್ಲಿ ನದಿಗಳು, ಉಪನದಿ, ತೊರೆಗಳು ತುಂಬಿ ಹರಿಯುತ್ತಿವೆ. ಕರಾವಳಿಯ ಕುಂದಾಪುರ, ಬೈಂದೂರು, ಬೆಳ್ತಂಗಡಿ, ಸುಳ್ಯ, ಪುತ್ತೂರು, ಉಡುಪಿ ಮೊದಲಾದ ತಾಲೂಕುಗಳಲ್ಲದೆ ಮಲೆನಾಡು, ಕೊಡಗಿನ ಗ್ರಾಮೀಣ ಭಾಗದ ಹಲವೆಡೆ ಶಾಲಾ ಮಕ್ಕಳು ಕಾಲು ಸಂಕ, ಕಾಡಿನಂತಹ ದುರ್ಗಮ ಹಾದಿ ದಾಟಿ ಬರಬೇಕಾದ ಪರಿಸ್ಥಿತಿಯಿದೆ. ಇಂತಹ ಮಕ್ಕಳ ಬಗ್ಗೆ ಶಿಕ್ಷಕರು ಹೆತ್ತವರು ಹೆಚ್ಚಿನ ನಿಗಾ ವಹಿಸಬೇಕಾಗಿದೆ.
ನಿರಂತರ ಮಳೆಯಿಂದಾಗಿ ಅಡಿಕೆ ಮರ ಅಥವಾ ಇನ್ನಿತರ ಮರಗಳಿಂದ ನಿರ್ಮಿಸಿರುವ ಕಾಲುಸಂಕಗಳು ಜಾರುತ್ತಿವೆ. ಇಂತಹ ಕೆಲವು ಸಂಕಗಳಿಗೆ ಎರಡೂ ಕಡೆ ಆಧಾರ ಹಿಡಿಕೆ ಇರುವುದಿಲ್ಲ. ಸ್ವಲ್ಪ ಆಯತಪ್ಪಿದರೂ, ಉಕ್ಕಿ ಹರಿಯುವ ನದಿಗೆ ಬಿದ್ದು ನೀರುಪಾಲಾಗುವ ಭೀತಿ ಇಲ್ಲದಿಲ್ಲ. ಪುಟ್ಟ ಮಕ್ಕಳು ಪ್ರಾಣಭಯದಿಂದಲೇ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ.
ದೇಶ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ಆದರೆ ಇನ್ನೂ ಗ್ರಾಮೀಣ ಭಾಗದ ಹಳ್ಳಿಗಳು ನದಿ, ಹೊಳೆ ದಾಟಲು ಸರಿಯಾದ ಸೇತುವೆ, ಕಿರು ಸೇತುವೆಯಂತಹ ಮೂಲ ಸೌಕರ್ಯದಿಂದ ವಂಚಿತವಾಗಿವೆ. ಅನೇಕ ಕಡೆಗಳಲ್ಲಿ ಕಾಲು ಸಂಕವನ್ನೇ ದಾಟಿ ಬರುವ ಶಾಲಾ ವಿದ್ಯಾರ್ಥಿಗಳು ನೂರಾರು ಮಂದಿ ಇದ್ದಾರೆ. ಕಾಲು ಸಂಕ ದಾಟುವಾಗ ಜಾಗ್ರತೆ ಅಗತ್ಯ. ಕಾಲುಸಂಕ ಮಟ್ಟಸವಾಗಿ ಇರುವುದಿಲ್ಲ. ನಿತ್ಯವೂ ಬೆಳಗ್ಗೆ – ಸಂಜೆ ಇದೇ ಕಾಲು ಸಂಕ ದಾಟಿ ಬರುವ ಪುಟ್ಟ ವಿದ್ಯಾರ್ಥಿಗಳ ಬಗ್ಗೆ ಹೆತ್ತವರು, ಶಿಕ್ಷಕರು ಅತ್ಯಂತ ಹೆಚ್ಚಿನ ಜಾಗರೂಕತೆ ವಹಿಸಬೇಕಿದೆ.
ನಗರ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಭಾಗದ ಜನರಿಗೆ ಸುಗಮ ಸಂಚಾರಕ್ಕೆ ಸೌಲಭ್ಯ ಕಲ್ಪಿಸಬೇಕಾದುದು ಸರಕಾರ ಹಾಗೂ ಸ್ಥಳೀಯ ಆಡಳಿತಗಳ ಆದ್ಯ ಕರ್ತವ್ಯ ಹಾಗೂ ಹೊಣೆಗಾರಿಕೆಯೂ ಹೌದು. ಆದರೆ ಜವಾಬ್ದಾರಿ ಮರೆತ ಕಾರಣದಿಂದಾಗಿ ಈ ರೀತಿಯ ಅವಘಢಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಹೀಗಾಗಿ ಇಂತಹ ಪರಿಸ್ಥಿತಿ ಇರುವ ಕಡೆಗಳಲ್ಲಿ ಮಕ್ಕಳನ್ನು ಕಳುಹಿಸುವ ಕಡೆಗಳಲ್ಲಿ ಹೆತ್ತವರು ಹಾಗೂ ಶಿಕ್ಷಕರು ಮೈಯೆಲ್ಲ ಕಣ್ಣಾಗಿಕೊಂಡು ಎಚ್ಚರವಹಿಸಬೇಕಾಗಿದೆ.
ಶಾಲಾ ಸಂಪರ್ಕ ಸೇತು
2018ರಲ್ಲಿ ಮಲೆನಾಡಿನ ಶಾಲೆಯೊಂದರ ವಿದ್ಯಾರ್ಥಿ ಕಾಲುಸಂಕ ದಾಟುವಾಗ ಬಿದ್ದು ನೀರಿನಲ್ಲಿ ಕೊಚ್ಚಿಹೋದುದನ್ನು ಗಮನಿಸಿ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶಾಲಾ ಸಂಪರ್ಕ ಸೇತು ಯೋಜನೆಯನ್ನು ಜಾರಿಗೆ ತಂದಿದ್ದರು. ಆ ಬಳಿಕ ಬಿಜೆಪಿ ಸರಕಾರ ಈ ಯೋಜನೆಯನ್ನು “ಗ್ರಾಮ ಬಂಧು ಸೇತು’ವಾಗಿ ಮುಂದುವರಿಸಿದೆ.
ಫಂಡಿಜೆ ವಾಳ್ಯದ ಘಟನೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಜೆ ವಾಳ್ಯದಲ್ಲಿ 2018ರಲ್ಲಿ ಮಳೆಗಾಲದ ಸಂದರ್ಭ ಕಾಲುಸಂಕ ದಾಟುವಾಗ ಸುಜಯ್ ಎಂಬಾತ ಜಾರಿ ಬಿದ್ದಿದ್ದ. ಜತೆಗಿದ್ದ ಸಹಪಾಠಿ ಆದಿತ್ಯ ತತ್‌ಕ್ಷಣ ಆತನ ಕಾಲನ್ನು ಹಿಡಿದು ಸಾಕಷ್ಟು ಹೊತ್ತು ನೇತಾಡುವ ಸ್ಥಿತಿಯಲ್ಲೇ ಹಿಡಿದಿಟ್ಟುಕೊಂಡು ಜೀವ ರಕ್ಷಿಸಿದ್ದ. ಬಳಿಕ ಮಕ್ಕಳ ಕೂಗು ಕೇಳಿ ಊರವರು ಧಾವಿಸಿ ಬಂದು ಇಬ್ಬರನ್ನೂ ರಕ್ಷಿಸಿದ್ದರು. ಆದಿತ್ಯನ ಸಾಹಸವನ್ನು ಸರಕಾರ ಗುರುತಿಸಿ ಪುರಸ್ಕರಿಸಿತ್ತು.