Advertisement

ಚರಂಡಿ ಕಾಮಗಾರಿಯಲ್ಲಿ ಲೋಪ : ಕಾಮಗಾರಿ ನಡೆದ ವರ್ಷದಲ್ಲೇ 30 ಕಡೆ ಕುಸಿದ ಚರಂಡಿ

03:53 PM Jan 10, 2022 | Team Udayavani |

ಗುಂಡ್ಲುಪೇಟೆ: ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿ ನಿರ್ಮಾಣವಾಗಿರುವ ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದ್ದು, ವರ್ಷ ಕಳೆಯುವುದರೊಳಗೆ ಸುಮಾರು 30ಕ್ಕೂ ಅಧಿಕ ಕಡೆ ಕುಸಿದು ಹೋಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದ್ದು, ಜನ ಪ್ರತಿನಿಧಿಗಳು ಹಾಗೂ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ
ಕೇಳಿ ಬರುತ್ತಿದೆ.

Advertisement

ಹೊಸ ಕಾಮಗಾರಿ ನಡೆದಿತ್ತು: ಮಳೆ ಬಂದ ಸಂದರ್ಭದಲ್ಲಿ ರಸ್ತೆ ಮೇಲೆ ನೀರು ನಿಲ್ಲುತ್ತದೆ ಎಂಬ ಉದ್ದೇಶದಿಂದ ಈ ಹಿಂದೆ ಹೆದ್ದಾರಿ ಬದಿ ಗುಣಮಟ್ಟದಿಂದ ನಿರ್ಮಾಣ ಮಾಡಲಾಗಿದ್ದ ಚರಂಡಿ ಕಿತ್ತುಹಾಕಿ, ಹೆದ್ದಾರಿ ಪ್ರಾಧಿಕಾರದ ವತಿಯಿಂದ ಸುಮಾರು 60 ಲಕ್ಷ ರೂ.ವೆಚ್ಚದಲ್ಲಿ ಹೊಸದಾಗಿ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ನಿಗದಿತ ಪಟ್ಟಿ ಪ್ರಕಾರ ಕಬ್ಬಿಣ, ಸಿಮೆಂಟ್‌ ಹಾಕದ ಕಾರಣ ನಿರ್ಮಾಣ ಹಂತದಲ್ಲೇ ಹಲವು ಕಡೆ ಕುಸಿದು ಹೋಗಿತ್ತು. ದಿನ ಕಳೆದಂತೆ ಕುಸಿತದ ಪ್ರಮಾಣ ಅಧಿಕವಾಗಿ ಜನ ಹೆಚ್ಚು ಸಂಚರಿಸುವ ಸ್ಥಳದ 30 ಕಡೆ ಬಾಯ್ತೆರೆದಿದೆ.

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ: ಹೆದ್ದಾರಿ ಬದಿಯ ಚರಂಡಿ ಕಾಮಗಾರಿ ಕಳಪೆಯಾಗಿರುವ ಕಾರಣ 30ಕ್ಕೂ ಅಧಿಕ ಕಡೆ ಕುಸಿದಿದ್ದರೂ ಇಲ್ಲಿಯ ತನಕ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ತಾಲೂಕು ಅಧ್ಯಕ್ಷ ರಂಗಪ್ಪನಾಯಕ ಒತ್ತಾಯಿಸಿದ್ದಾರೆ.

ಯಾರ ಹೆಗಲಿಗೆ ಉಸ್ತುವಾರಿ?: ಕಾಮಗಾರಿ ಕಳಪೆಯಾಗಿ ನಡೆದರೂ ಪುರಸಭೆ ಹಾಗೂ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸಬೂಬು ಹೇಳಿ
ನುಣಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಇದರ ಉಸ್ತುವಾರಿ ಯಾರ ಹೆಗಲಿಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಹೆದ್ದಾರಿ ಚರಂಡಿ ವೀಕ್ಷಣೆಗೂ ಬನ್ನಿ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಕಾಂಕ್ರೀಟ್‌ ರಸ್ತೆ ಕಾಮಗಾರಿ ನಡೆಯುವ ವೇಳೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಹಾಗೂ ಪುರಸಭೆ ಅಧ್ಯಕ್ಷ ಪಿ.ಗಿರೀಶ್‌ ಸೇರಿ ಹಲವು ಅಧಿಕಾರಿಗಳು ಕಾಮಗಾರಿ ವೀಕ್ಷಣೆ ಮಾಡಿದ್ದಾರೆ. ಆದರೆ, ಹೆದ್ದಾರಿ ಚರಂಡಿ ಕಾಮಗಾರಿ ಕಳಪೆಯಿಂದ ನಡೆದು ಹಲವು ಕಡೆ ಕುಸಿದು ಹೋಗಿದ್ದರೂ ಇತ್ತ ಏಕೆ
ಮುಖ ಮಾಡುತ್ತಿಲ್ಲ. ಆದ್ದರಿಂದ ಕಳಪೆ ಕಾಮಗಾರಿ ವೀಕ್ಷಣೆಗೂ ಬನ್ನಿ ಎಂದು ಪುರಸಭಾ ಸದಸ್ಯರಾದ ಎನ್‌. ಕುಮಾರ್‌ ಒತ್ತಾಯಿಸಿದರು.

Advertisement

ವಾಹನ ಚರಂಡಿ ಮೇಲೆ ಹತ್ತಿದರೆ ಹೊದಿಕೆ ಕುಸಿತ
ಕಳೆದ ಕೆಲ ದಿನಗಳ ಹಿಂದೆ ಅಧಿಕ ಭಾರ ಹೊತ್ತ ವಾಹನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ, ಗುರುಪ್ರಸಾದ್‌ ಹೋಟೆಲ್‌ ಹತ್ತಿರ, ಶ್ರೀಕಂಠೇಶ್ವರ ಶೋರೂಂ ಮುಂದಿನ ಚರಂಡಿ ಮೇಲೆ ಹತ್ತಿದ ಪರಿಣಾಮ ವಾಹನಗಳ ಚಕ್ರ ಚರಂಡಿಯಲ್ಲಿ ಸಿಲುಕಿತ್ತು. ನಂತರ ಕ್ರೇನ್‌ ಸಹಾಯದಿಂದ ಮೇಲೆತ್ತಲಾಯಿತು. ಇನ್ನು ಮಡಹಳ್ಳಿ ಸರ್ಕಲ್‌, ಗಂಗಾಬಾರ್‌, ಅಂಚೆ ಕಚೇರಿ, ಲಾವಣ್ಯ ಶೋರೂಂ, ಪುರಸಭೆ ಮುಂದೆ, ಹಳೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹತ್ತಿರ, ತಾಲೂಕು ಕಚೇರಿ ಮುಂದೆ ಸೇರಿದಂತೆ ಇನ್ನೂ ಅನೇಕ ಕಡೆ ಚರಂಡಿ ಕುಸಿದಿದ್ದರೂ ಈ ಬಗ್ಗೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಕೆಲ ಸಂಘಟನೆಗಳು ಚರಂಡಿ ಕುಸಿದ ವೇಳೆ ಆಕ್ರೋಶ ಹೊರ ಹಾಕಿ, ಪ್ರತಿಭಟನೆಗೆ ಮಾತ್ರ ಸೀಮಿತವಾಗಿದ್ದಾರೆ.

ಶಾಸಕ-ಪುರಸಭೆ ಅಧ್ಯಕ್ಷರು ಶಾಮೀಲು
ಚರಂಡಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಹಾಗೂ ಪುರಸಭೆ ಅಧ್ಯಕ್ಷ ಪಿ.ಗಿರೀಶ್‌ ಸೇರಿ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವ ಜತೆಗೆ ಅಕ್ರಮ ನಡೆಸಿದವರ ವಿರುದ್ಧ ಕ್ರಮ ವಹಿಸಬೇಕು.
– ಮಹಮದ್‌ ಇಲಿಯಾಸ್‌, ಪುರಸಭೆ ಸದಸ್ಯ.

ಮುಖ್ಯ ಎಂಜಿನಿಯರ್‌ ಉಸ್ತುವಾರಿ ಇಲ್ಲದ ಕಾರಣ ಚರಂಡಿ ಕಾಮಗಾರಿ ಕಳಪೆಯಿಂದ ನಡೆದಿದ್ದು, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಈಗಾಗಲೇ ಪುರಸಭೆ ವತಿಯಿಂದ ಪತ್ರ
ಬರೆಯಲಾಗಿದೆ.
– ಪಿ.ಗಿರೀಶ್‌, ಪುರಸಭೆ ಅಧ್ಯಕ್ಷ

– ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next