ಕಾಡಿನಲ್ಲಿ ಆಳವಾದ ನದಿಯೊಂದಿತ್ತು. ಆ ನದಿಯಲ್ಲಿ ಮೊಸಳೆಯೊಂದು ವಾಸವಾಗಿತ್ತು. ಅಲ್ಲಿಗೆ ನೀರು ಕುಡಿಯಲು ಬರುವ ಪ್ರಾಣಿಗಳನ್ನು ಹೊಂಚು ಹಾಕಿ ಕಬಳಿಸುತ್ತಿತ್ತು. ಒಮ್ಮೆ ಮೊಸಳೆಯ ದುರಾದೃಷ್ಟಕ್ಕೆ ಎಂಟು ದಿನಗಳಾದರೂ ಒಂದು ಪ್ರಾಣಿಯೂ ನದಿಯತ್ತ ಸುಳಿಯಲಿಲ್ಲ. ಹಸಿವು ಹೆಚ್ಚಾಗಿ ಮೊಸಳೆ ತತ್ತರಿಸಿ ಹೋಯಿತು. ಒಂದು ಸಣ್ಣ ಮಾಂಸದ ತುಂಡಾದರೂ ಸಿಕ್ಕರೆ ಸಾಕು ಎಂದು ಆ ದಡದಿಂದ ಈ ದಡಕ್ಕೆ, ಈ ದಡದಿಂದ ಆ ದಡಕ್ಕೆ ಅಲೆದಾಡಿತು. ಅಷ್ಟರಲ್ಲಿ ಅಲ್ಲೇ ಹಾರಾಡುತ್ತಿದ್ದ ಕೊಕ್ಕರೆ ಅದರ ಕಣ್ಣಿಗೆ ಬಿತ್ತು. ಉಪಾಯ ಮಾಡಿ ಅದನ್ನು ಕಬಳಿಸಬೇಕೆಂದು ನಿರ್ಧರಿಸಿ ದಂಡೆಗೆ ಬಂದಿತು. ಕೊಕ್ಕರೆಯನ್ನು ಕರೆದು “ಗೆಳೆಯಾ, ನನ್ನ ದವಡೆ ಹಲ್ಲುಗಳಲ್ಲಿ ಆಹಾರದ ತುಂಡು ಸಿಕ್ಕಿಹಾಕಿಕೊಂಡಿದೆ. ಎಷ್ಟು ಪ್ರಯತ್ನಿಸಿದರೂ ಗಂಟಲಿಗೂ ಇಳಿಯದೇ ಹೊರಗೂ ಬಾರದೆ ಕಿರಿಕಿರಿಯೆನಿಸುತ್ತಿದೆ. ಅದನ್ನು ನಿನ್ನ ಉದ್ದನೆಯ ಕೊಕ್ಕಿನಿಂದ ಹೆಕ್ಕಿ ತಿಂದುಬಿಡು. ನಿನ್ನ ಹೊಟ್ಟೆಯೂ ತುಂಬುತ್ತದೆ; ನನ್ನ ಸಮಸ್ಯೆಯೂ ಬಗೆಹರಿಯುತ್ತದೆ. ದಯವಿಟ್ಟು ಸಹಾಯ ಮಾಡುವೆಯಾ?’ ಎಂದು ಪ್ರಾರ್ಥಿಸಿತು.
ಕೊಕ್ಕರೆ ಸ್ವಲ್ಪ ಯೋಚಿಸಿ, “ಖಂಡಿತವಾಗಿಯೂ ನಿನಗೆ ಸಹಾಯ ಮಾಡುವ ಮನಸ್ಸಿದೆ. ಆದರೆ, ನನಗೆ ಎರಡು ದಿನಗಳಿಂದ ಕೊಕ್ಕಿನಲ್ಲಿ ಸಿಕ್ಕಾಪಟ್ಟೆ ನೋವಿದೆ. ಆದ್ದರಿಂದ ಬೇರೆ ಉಪಕರಣ ಬಳಸಿ ನಿನ್ನ ಬಾಯಿಯನ್ನು ಸ್ವತ್ಛಗೊಳಿಸುವೆ’ ಎಂದಿತು. ಹೇಗಾದರೂ ಸರಿ ಕೊಕ್ಕರೆ ತನ್ನ ಹತ್ತಿರ ಬಂದರೆ ಸಾಕೆಂದು ಮೊಸಳೆ ಕೊಕ್ಕರೆಯ ನಿಬಂಧನೆಗೆ ಒಪ್ಪಿತು.
ಕೊಕ್ಕರೆ ಮೊಸಳೆಯ ಬಳಿ ಬಂದು ಬಾಯಿ ಅಗಲಿಸಲು ಹೇಳಿತು. ಒಳಗೊಳಗೇ ನಗುತ್ತಾ ಮೊಸಳೆ ಬಾಯಿ ತೆರೆಯಿತು. ಕೊಕ್ಕರೆ ಬಾಯಿ ಹತ್ತಿರ ಬಂದ ಕೂಡಲೆ ಕಬಳಿಸಬೇಕೆಂದು ಮನಸ್ಸಿನಲ್ಲಿ ಲೆಕ್ಕ ಹಾಕಿತು. ಕೊಕ್ಕರೆ, ಮೊಸಳೆಗೆ ಇನ್ನೂ ದೊಡ್ಡದಾಗಿ ಬಾಯಿ ಅಗಲಿಸಲು ಹೇಳಿತು. ಮೊಸಳೆ ಕಷ್ಟಪಟ್ಟು ಬಾಯಿ ಹಿಗ್ಗಿಸಿದ ತಕ್ಷಣವೇ ಕೊಕ್ಕರೆ ತನ್ನೊಡನೆ ತಂದಿದ್ದ ಮರದ ಕೋಲನ್ನು ಮೊಸಳೆಯ ಬಾಯೊಳಗೆ ಉದ್ದಕ್ಕೆ ನಿಲ್ಲಿಸಿತು. ಈಗ ಮೊಸಳೆ ಏನು ಮಾಡಿದರೂ ಬಾಯಿ ಮುಚ್ಚಲು ಸಾಧ್ಯವಿರಲಿಲ್ಲ. ಮೊಸಳೆಯ ಹಲ್ಲುಗಳನ್ನು ಶುದ್ಧಗೊಳಿಸಿದ ಬಳಿಕ ಬುದ್ಧಿವಂತ ಕೊಕ್ಕರೆ ಕೋಲಿನೊಂದಿಗೆ ಹಾರಿ ಹೋಯಿತು. ಬೇಸ್ತು ಬಿದ್ದ ಮೊಸಳೆ ಹಾರಿ ಹೋಗುತ್ತಿದ್ದ ಕೊಕ್ಕರೆಯನ್ನೇ ಮಿಕ ಮಿಕ ನೋಡಿತು.
ಅಶೋಕ ವಿ ಬಳ್ಳಾ