Advertisement

ಎಚ್ಚರ…ಬಿಸಿಲ ಬೇಗೆಗೆ ನಿರ್ಜಲೀಕರಣ ಸಮಸ್ಯೆ ಹೆಚ್ಚಳ; ಅಗತ್ಯವಾಗಿ ಈ ಆಹಾರ ಸೇವಿಸಿ

04:41 PM Mar 28, 2023 | Team Udayavani |

ಹವಾಮಾನ ವೈಪರಿತ್ಯದಿಂದ ಪ್ರತೀ ವರ್ಷದಂತೆ ಈ ವರ್ಷವು ಬಿಸಿಲಿನ ತಾಪ ಹೆಚ್ಚಾಗಿದೆ. ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿ ದಿನಗಳು ಕಳೆದಿವೆ. ಇನ್ನೂ ಒಂದು ತಿಂಗಳಿಗಿಂತಲೂ ಹೆಚ್ಚು ಬೇಸಿಗೆ ಕಾಲ ಇದೆ. ಈ ಸಮಯದಲ್ಲಿ ಬಿಸಿಲಿನಿಂದಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಸಹಜ.

Advertisement

ಅತಿಯಾದ ಉಷ್ಣತೆಯನ್ನು ಸಹಿಸಿಕೊಳ್ಳಲು ದೇಹಕ್ಕೆ ತುಂಬಾ ಕಷ್ಟ. ಬೇಸಿಗೆಯಲ್ಲಿ ಬಿಸಿಲಿನ ಶಾಖ ಹೆಚ್ಚಾಗಿರುವುದರಿಂದ ದೇಹದಲ್ಲಿರುವ ನೀರಿನ ಪೋಷಕಾಂಶಗಳೆಲ್ಲವೂ ಶಾಖದಿಂದ ಹೀರಿಕೊಂಡು ಸುಸ್ತು ಉಂಟಾಗುತ್ತದೆ. ಇದರಿಂದ ನೀರಿನಾಂಶದ ಕೊರತೆ ಮಾತ್ರವಲ್ಲ, ಉಪ್ಪಿನಾಂಶದ ಕೊರತೆಯೂ ಉಂಟಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಾವು ಸೇವಿಸುವ ಆಹಾರ, ಹಣ್ಣು-ತರಕಾರಿಗಳಲ್ಲಿ ನೀರು ಸಮೃದ್ಧವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.

ಬೇಸಿಗೆ ಕಾಲದಲ್ಲಿ ನಿರ್ಜಲೀಕರಣ ಉಂಟಾಗುವುದು ಸಾಮಾನ್ಯ. ಇದಕ್ಕಾಗಿಯೇ ಹಸಿರು ತರಕಾರಿಗಳು, ಹಣ್ಣುಗಳು ಸೇವಿಸುವುದು ದೇಹ ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದರೊಂದಿಗೆ ಚರ್ಮವನ್ನು ರಕ್ಷಿಸುತ್ತದೆ. ಬೇಸಿಗೆಯಲ್ಲಿ ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಹಾಗಾಗಿ ಕೆಲವೊಂದು ಆಹಾರಗಳ ಬಗೆಗಿನ ಮಾಹಿತಿ ಇಲ್ಲಿವೆ:

ಸೊರೆಕಾಯಿ:

ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಇದು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಸುಮಾರು 96 ಪ್ರತಿಶತದಷ್ಟು ನೀರಿನ ಅಂಶವಿದೆ ಎನ್ನಲಾಗುತ್ತದೆ. ಹೀಗಾಗಿ, ಇದು ದೇಹಕ್ಕೆ ಸಾಕಷ್ಟು ನೀರನ್ನು ಒದಗಿಸುವ ಮೂಲಕ ನಮ್ಮ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ.

Advertisement

ದಪ್ಪ ಮೆಣಸಿನಕಾಯಿ:

ಈ ಮೆಣಸಿನಕಾಯಿಯಲ್ಲಿ ಶೇಕಡಾ 90ರಷ್ಟು ನೀರಿನಂಶ ಇರುವುದರಿಂದ ಬೇಸಿಗೆಯಲ್ಲಿ ಇದನ್ನು ಆಹಾರದ ಜೊತೆಗೆ ಸೇವಿಸುವುದು ಉತ್ತಮ. ಇದರಲ್ಲಿ ವಿಟಮಿನ್ ಸಿ, ಎ, ಕೆ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿದೆ.

ಕಲ್ಲಂಗಡಿ ಹಣ್ಣು:

ಕಲ್ಲಂಗಡಿ ಹಣ್ಣಿನಲ್ಲಿ ನೀರು ಸಮೃದ್ಧವಾಗಿದ್ದು, ನಿರ್ಜಲೀಕರಣ ತಡೆಯಲು ಸಹಾಯ ಮಾಡುತ್ತದೆ. ಇದು ಚರ್ಮದ ಕೋಶಗಳನ್ನು ಸೂರ್ಯನ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಕಿತ್ತಳೆಹಣ್ಣು:

ಕಿತ್ತಳೆ ಹಣ್ಣಿನಲ್ಲಿ ನೀರಿನಂಶ ಹೆಚ್ಚಾಗಿದೆ. ಇದು ವಿಟಮಿನ್ ಸಿ ಹೊಂದಿರುವುದರಿಂದ ಜನಪ್ರಿಯವಾಗಿದೆ. ಇದನ್ನು ಸಿಪ್ಪೆ ಬಿಡಿಸಿ ಅಥವಾ ಜ್ಯೂಸ್ ಮಾಡಿಯೂ ಸೇವಿಸಬಹುದು.

ಸೌತೆಕಾಯಿ:

ಬೇಸಿಗೆಯ ಸುಡುವ ಬಿಸಿಲಿಗೆ ಮತ್ತೊಂದು ಉತ್ತಮ ಆಹಾರ ಎಂದರೆ ಅದು ಸೌತೆಕಾಯಿ. ಇದರಲ್ಲಿ ನೀರಿನ ಅಂಶವೂ ಅಧಿಕವಾಗಿದೆ. ಬೇಸಿಗೆ ಕಾಲದಲ್ಲಿ ಸೌತೆಕಾಯಿಯನ್ನು ಪ್ರತಿದಿನ ತಿನ್ನುವುದರಿಂದ ದೇಹವು ನಿರ್ಜಲೀಕರಣಗೊಳ್ಳುವುದನ್ನು ತಡೆಯುತ್ತದೆ. ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ಕೂಡಾ ಸೌತೆಕಾಯಿ ಸಹಾಯ ಮಾಡುತ್ತದೆ.

ಟೊಮೇಟೊ: 

ಟೊಮೇಟೊದಲ್ಲಿ ವಿಟಮಿನ್ ಸಿ ಅಂಶವಿದೆ. ಬೇಸಿಗೆಯಲ್ಲಿ ಹೆಚ್ಚು ತಿನ್ನಬಹುದು. ಇದು ಆರೋಗ್ಯಕ್ಕೆ ಮಾತ್ರವಲ್ಲದೇ ಚರ್ಮಕ್ಕೆ ಸಹಕಾರಿ. ಇದರಲ್ಲಿ ಶೇ.93ರಷ್ಟು ನೀರು ಮತ್ತು ದೇಹವನ್ನು ಶುದ್ಧೀಕರಿಸುವ ಉತ್ಕರ್ಷಣ ನಿರೋಧಕ ಲೈಕೋಪೀನ್ ಅನ್ನು ಹೊಂದಿದೆ. ಆದ್ದರಿಂದ ಟೊಮೆಟೊವನ್ನು ಸಲಾಡ್ ಮಿಕ್ಸ್, ಸ್ಯಾಂಡ್‌ವಿಚ್ ನಲ್ಲಿ ಮಿಕ್ಸ್ ಮಾಡಿ ತಿನ್ನಬಹುದು. ಅದರಲ್ಲೂ ಹಸಿ ಟೊಮ್ಯಾಟೋ ತಿಂದರೆ ಆಗಾಗ ಹಸಿವಾಗುವುದಿಲ್ಲ.

ಇತರ ತರಕಾರಿ-ಸೊಪ್ಪುಗಳು: 

ಪಾಲಕ್, ಬ್ರೊಕೊಲಿ, ಎಲೆಕೋಸಿನಂತಹ ಎಲೆಗಳನ್ನು ಹೊಂದಿರುವ ತರಕಾರಿಗಳಲ್ಲಿ ನೀರಿನ ಅಂಶ ಹೆಚ್ಚಿರುತ್ತದೆ. ಇವುಗಳನ್ನು ಹಾಗೆ ಸೇವಿಸಬಹುದು ಅಥವಾ ಸಲಾಡ್, ಮಜ್ಜಿಗೆಯಲ್ಲಿ ಸೇರಿಸಿ ಅಥವಾ ಹಾಲಿನಲ್ಲಿ ಸ್ಮೂದಿಯಾಗಿ ತಯಾರಿಸಿ ಸೇವಿಸಬಹುದು.

ಬೇಸಿಗೆ ಕಾಲದಲ್ಲಿ ಕರಿದಿರುವಂತಹ ತಿಂಡಿ-ತಿನಿಸುಗಳಿಂದ ಆದಷ್ಟು ದೂರವಿರಿ. ಇದರಿಂದಾಗಿ ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಇತರ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರ ಬದಲಿಗೆ ಕೆಲವೊಂದು ತಾಜಾ ಹಣ್ಣು-ತರಕಾರಿಗಳನ್ನು ಆಹಾರದಲ್ಲಿ ಬಳಸಿಕೊಳ್ಳಿ.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next