Advertisement

ಬೇಸಗೆಯಲ್ಲಿ ಆಹಾರ-ವಿಹಾರ, ಜೀವನಶೈಲಿ

10:29 AM Mar 28, 2022 | Team Udayavani |

ಬೇಸಗೆಯ ಕಾವು ಹೆಚ್ಚಾಗತೊಡಗಿದೆ. ಮನೆಯ ಹೊರಗೆ ಕಾಲಿಟ್ಟರೆ ಸೂರ್ಯನ ಶಾಖದಿಂದ ದೇಹವೆಲ್ಲ ಸುಟ್ಟಂತೆ ಅನುಭವವಾಗುತ್ತದೆ. ಹಾಗೆಂದು ಮನೆಯೊಳಗಡೆ ಕುಳಿತರೂ ದೇಹದಿಂದ ಬೆವರಿಳಿಯಲಾರಂಭಿಸುತ್ತದೆ. ಫ್ಯಾನ್‌ ಎಷ್ಟೇ ರಭಸವಾಗಿ ತಿರುಗಿದರೂ ಅದರ ಗಾಳಿಯೂ ಬಿಸಿಯಾಗಿರುವಂತೆ ಭಾಸವಾಗುತ್ತದೆ. ಇನ್ನು ಹವಾನಿಯಂತ್ರಕದಡಿಯಲ್ಲಿ ಕುಳಿತರೆ ದೇಹ ತಣ್ಣಗಾದಂತೆ ಭಾಸವಾದರೂ ದಾಹ ಹೆಚ್ಚಾಗಿ ತಂಪಾದ ಪಾನೀಯ ಸೇವಿಸುವ ಎಂದೆನಿಸುತ್ತದೆ. ಇನ್ನು ಬೇಸಗೆಯಲ್ಲಿ ಕಾಡುವ ಸಾಂಕ್ರಾಮಿಕ ಕಾಯಿಲೆಗಳು, ಚರ್ಮದ ಸಮಸ್ಯೆಗಳು ಹಲವಾರು. ಮಕ್ಕಳ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಒಟ್ಟಾರೆ ಬೇಸಗೆ ಋತು ವಯೋಮಾನ ಭೇದವಿಲ್ಲದೆ ಎಲ್ಲರನ್ನೂ ಹೈರಾಣಾಗಿಸುತ್ತದೆ. ಇವೆಲ್ಲದರ ಕುರಿತಂತೆ ಬೆಳಕು ಚೆಲ್ಲುವ ಮತ್ತು ಬೇಸಗೆಯಲ್ಲಿ ಆರೋಗ್ಯ ರಕ್ಷಣೆ ಹಾಗೂ ಜೀವನಶೈಲಿ ಹೇಗಿರಬೇಕು ಎಂಬ ಬಗೆಗೆ ಮಾಹಿತಿಗಳನ್ನು ಒಳಗೊಂಡ ಲೇಖನ ಸರಣಿ ಇಂದಿನಿಂದ.

Advertisement

ಮನುಷ್ಯ ಜನ್ಮವು ಎಲ್ಲ ಜೀವಿಗಳಿಗಿಂತ ಶ್ರೇಷ್ಠ ವಾದ ಜನ್ಮವಾಗಿರುತ್ತದೆ. ಮಾನವನ ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಿಗೆ ಆರೋ ಗ್ಯವೇ ಮೂಲ ವಾಗಿ ರುತ್ತದೆ. ಈ ಜೀವನವನ್ನು ನಾವು ಅನೇಕ ಒಳ್ಳೆಯ ಸಾಧನೆಗಳನ್ನು ಮಾಡುವುದಕ್ಕೋಸ್ಕರ ಉಪಯೋಗಿಸಿಕೊಳ್ಳಬೇಕು.

ಈ ಸಾಧನೆಯ ಹಾದಿಯಲ್ಲಿ ಆರೋಗ್ಯವೇ ಮುಖ್ಯವಾದ ಸಾಧನವಾಗಿದೆ. ಹಾಗಾದರೆ ಆರೋಗ್ಯ ವೆಂದರೇನು?-ನಮ್ಮ ಆಯುರ್ವೆàದ ಶಾಸ್ತ್ರದಲ್ಲಿ ಈ ಪ್ರಕಾರವಾಗಿ ವ್ಯಾಖ್ಯಾನಿ ಸಲಾಗಿದೆ. “ಸಮ ದೋಷ, ಸಮಾಗ್ನಿಶ್ಚ, ಸಮ ಧಾತು, ಮಲಕ್ರಿಯಾ ಪ್ರಸನ್ನ ಆತ್ಮ ಇಂದ್ರಿಯ ಮನಃ ಸ್ವಸ್ಥ ಇತ್ಯಭಿದೀಯತೆ’ಇದರ ಅರ್ಥ ನಮ್ಮ ಶರೀರದಲ್ಲಿರುವ ತ್ರಿದೋಷ ಗಳು, ಸಪ್ತ ಧಾತುಗಳು, ಹದಿ ಮೂರು ಪ್ರಕಾರದ ಅಗ್ನಿಗಳು ಹಾಗೂ ತ್ರಿವಿಧ ಮಲ ಗಳು ಸಮತ್ವದಲ್ಲಿ ಅಂದರೆ ಸರಿ ಯಾಗಿ ಕಾರ್ಯ ನಿರ್ವ ಹಿಸಿ, ಇದರ ಜತೆಯಾಗಿ ನಮ್ಮ ಆತ್ಮ, ಮನಸ್ಸು ಮತ್ತು ಇಂದ್ರಿ ಯಗಳು ಪ್ರಸನ್ನವಾಗಿ (ತೃಪ್ತವಾಗಿ)ಇರುವುದೇ ಆರೋಗ್ಯ.

ಈ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲು ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಕಾಲ ಪರಿಣಾಮವು ಒಂದಾಗಿದೆ. ಭೂಮಿಯು ಸೂರ್ಯನ ಸುತ್ತ ತಿರುಗುತ್ತಿರುವ ಪರಿಣಾಮವಾಗಿ ಋತುಗಳು ಸಂಭವಿಸುತ್ತವೆ. ಅದನ್ನೇ ಋತು ಚಕ್ರವೆಂದು ಕರೆದರೆ ಆ ಋತುಗಳಿಗೆ ಅನುಗುಣವಾಗಿ ಆಹಾರ ಮತ್ತು ವಿಹಾರವನ್ನು ಕೈಗೊಳ್ಳುವುದೇ ಋತುಚರ್ಯೆಯಾಗಿದೆ.

ನಮ್ಮ ಆಚಾರ್ಯರು ಋತುಚರ್ಯೆವನ್ನು ವಿಸ್ತಾರವಾಗಿ ಹೇಳಿರುತ್ತಾರೆ. ಒಂದು ವರ್ಷವನ್ನು ಎರಡು ಅಯನಗಳಾಗಿ ಮತ್ತು ಒಂದು ಅಯನವನ್ನು 3 ಋತುಗಳಾಗಿ ವಿಭಾಗಿಸಲಾಗಿದೆ.

Advertisement

ಉತ್ತರಾಯಣದಲ್ಲಿ (ಆದಾನ ಕಾಲ) ಶಿಶಿರ, ವಸಂತ ಮತ್ತು ಗ್ರೀಷ್ಮ ಋತುಗಳು ಬರುತ್ತವೆ. ದಕ್ಷಿಣಾಯಣದಲ್ಲಿ (ವಿಸರ್ಗ ಕಾಲ) ವರ್ಷಾ, ಶರದ್‌ ಮತ್ತು ಹೇಮಂತ ಋತುಗಳು ಬರುತ್ತವೆ. ಬೇಸಗೆ ಕಾಲವು ವಸಂತ ಮತ್ತು ಗ್ರೀಷ್ಮ ಋತು ಗಳನ್ನು ಒಳಗೊಂಡಿರುತ್ತದೆ. ಆದಾನ ಕಾಲದಲ್ಲಿ ಸೂರ್ಯನು ಪ್ರಖರವಾಗಿರುವುದರಿಂದ ತಾಪವು ಏರುತ್ತಾ ಹೋಗಿ ಹಗಲು ದೀರ್ಘ‌ವಾಗಿ ಪ್ರಕೃತಿ ಯಲ್ಲಿ ಉಷ್ಣತೆಯು ಜಾಸ್ತಿಯಾಗುತ್ತದೆ. ಇದರಿಂದಾಗಿ ನೀರಿನ ಅಂಶವೂ ಬತ್ತಿ ಹೋಗುತ್ತದೆ.

ವಸಂತ ಋತುವನ್ನು ಬೇಸಗೆಯಂತಲೂ ಮತ್ತು ಗ್ರೀಷ್ಮ ಋತುವನ್ನು ಕಡುಬೇಸಗೆಯೆಂದು ವಿಭಾಗಿಸಬಹುದು. ಹೀಗಾಗಿ ನಾವು ಬೇಸಗೆ ಪ್ರಾರಂಭದಲ್ಲಿ ವಸಂತ ಋತುಚರ್ಯೆಯನ್ನು ಮತ್ತು ಅನಂತರದಲ್ಲಿ ಗ್ರೀಷ್ಮ ಋತುವಿನಲ್ಲಿ ಗ್ರೀಷ್ಮ ಋತುಚರ್ಯೆಯನ್ನು ಪಾಲಿಸಬೇಕು.

ಈ ಕಾಲದಲ್ಲಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಈ ಕೆಳಗೆ ವಿವರಿಸಿದ ಆಹಾರವನ್ನು ಸೇವಿಸಿದರೆ ಆರೋಗ್ಯ ರಕ್ಷಣೆ ಸಾಧ್ಯ.

ಹಳೆಯ ಧಾನ್ಯಗಳು: ಹಳೆಯದಾದ ಅಕ್ಕಿ, ಗೋಧಿ, ಹೆಸರುಬೇಳೆ, ಬಾರ್ಲಿ ಮುಂತಾದ ಧಾನ್ಯ ಗಳನ್ನು ಬಳಸಿ ತಯಾರಿಸಿದ ಖಾದ್ಯಗಳನ್ನು ಸೇವಿಸಬೇಕು. ಕೆಂಪು ಅಕ್ಕಿಯ ಅನ್ನವನ್ನು ತಿಳಿಯಾದ ಸಾರು ಮತ್ತು ಮಜ್ಜಿಗೆಯ ಜತೆ ತೆಗೆದು ಕೊಳ್ಳಬ ಹುದು. ಎಣ್ಣೆಯ ಜಿಡ್ಡಿನಿಂದ ಕೂಡಿದ ಆಹಾರವು ಒಳ್ಳೆಯದಲ್ಲ.

ತರಕಾರಿಗಳು: ಪಡವಲಕಾಯಿ, ಹೀರೆಕಾಯಿ, ಸೌತೆಕಾಯಿ, ಕುಂಬಳಕಾಯಿ, ಮೂಲಂಗಿ, ಟೊಮೇಟೊ, ಈರುಳ್ಳಿ ಇತ್ಯಾದಿ ತರಕಾರಿಗಳು ಉತ್ತಮ. ಸೌತೆಕಾಯಿ, ಕ್ಯಾರೆಟ್‌, ಬೀಟ್‌ರೂಟ್‌ ಇತ್ಯಾದಿ ತರಕಾರಿಗಳನ್ನು ಸಲಾಡ್‌ ರೂಪದಲ್ಲಿ ಹಸಿಯಾಗಿ ಸೇವಿಸಬೇಕು.

ಅಂಬಲಿಗಳು: ಬಿಳಿಜೋಳದ ಹಿಟ್ಟಿನ ಅಂಬಲಿ, 2 ಚಮಚ ಹಿಟ್ಟನ್ನು ಒಂದು ಗ್ಲಾಸ್‌ ನೀರಿನಲ್ಲಿ ಕುದಿಸಿ, ಮಜ್ಜಿಗೆ, ಉಪ್ಪು, ಜೀರಿಗೆ ಪುಡಿಯನ್ನು ಸೇರಿಸಿ ಕುಡಿಯಬೇಕು. ಈ ರೀತಿಯಾಗಿ ರಾಗಿ ಅಂಬಲಿ, ಅಕ್ಕಿ ಅಂಬಲಿ, ಬಾರ್ಲಿ ಅಂಬಲಿ, ಕಾರ್ನ್ಫ್ಲೋರ್‌ ಅಂಬಲಿ ಮಾಡಬಹುದು.

ಪಾನಕಗಳು: ತಣ್ಣಗಿನ ಸಿಹಿಯಾಗಿರುವ ಕೋಕಂ ಪಾನಕ, ಸೊಗದೇ ಬೇರಿನ, ಕಲ್ಲಂಗಡಿ, ಕರಬೂಜ, ಮಾವಿನ ಹಣ್ಣಿನ ಪಾನಕಗಳನ್ನು ಸೇವಿಸ ಬೇಕು. ಇತರ ಎಲ್ಲ ಹಣ್ಣುಗಳ ರಸಗಳು ತುಂಬಾ ಶಕ್ತಿಯನ್ನು ನೀಡುತ್ತವೆ.

ರಸಾಲಗಳು: ಇದನ್ನು ಒಂದು ವಿಶೇಷವಾದ ಪೇಯ ಎಂದು ವಿವರಿಸಿದ್ದಾರೆ. ಮೊಸರಿ ನಲ್ಲಿ ಸಕ್ಕರೆ, ಶುಂಠಿ, ಕಾಳುಮೆಣಸು ಮತ್ತು ಜೀರಿಗೆಯನ್ನು ಸೇರಿಸಿ ಕಡೆದು ಸೇವಿಸಬೇಕು. ಇದು ಇಂದಿನ ಆಧುನಿಕ ಯುಗದಲ್ಲಿ Masala Lassi, Sweet Lassi, Mango Lassi ಇತ್ಯಾದಿ ರೂಪದಲ್ಲಿ ಲಭ್ಯವಿದೆ. ಸುಲಭವಾಗಿ ಸಕ್ಕರೆ, ಉಪ್ಪು ಬೆರೆಸಿದ ಮಜ್ಜಿಗೆ ಸೇವಿಸಬಹುದು.

ಮಂಥಗಳು: ಪಂಚಸಾರ(ದ್ರಾಕ್ಷಾ, ಮಧೂಕ, ಖರ್ಜೂರ, ಕಾಶ್ಮರ್ಯ ಮತ್ತು ಪರೂಷಕದ) ಮಂಥವನ್ನು ಸೇವಿಸಬೇಕು. ಇದನ್ನೇ ಈ ಕಾಲದಲ್ಲಿ Dryfruits Milk Shake ಎಂದು ಕರೆಯುತ್ತಾರೆ.

ಸೂಪುಗಳು: ವಿವಿಧ ತರಕಾರಿಗಳು ಮತ್ತು ಮೆಕ್ಕೆಜೋಳ (Corn Flour)ದ ಹಿಟ್ಟಿನಿಂದ ಮಾಡಿದ ಸೂಪುಗಳನ್ನು ಸೇವಿಸಬೇಕು. ಕರ್ಪೂರ ಮುಂತಾದ ಸುಗಂಧಿತ ದ್ರವ್ಯಗಳಿಂದ ಕೂಡಿದ ಶೀತಲ ನೀರನ್ನು ಸೇವಿಸಬೇಕು.

ವಿಹಾರ
ಪ್ರಾತಃಕಾಲ ಪಾದಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ ಅಭ್ಯಂಗ ಮಾಡಬೇಕು. ಬೆಚ್ಚಗಿನ ನೀರಿನಲ್ಲಿಯೇ ಸ್ನಾನ ಮಾಡಬೇಕು. ಸ್ನಾನದ ಬಳಿಕ ಶ್ರೀಗಂಧ, ಉಶಿರಾ, ಗೋಪಿಚಂದನಗಳನ್ನು ಲೇಪಿಸಬೇಕು. ಸಂಜೆ ಸುಂದರವಾದ ಉದ್ಯಾನವನದಲ್ಲಿ ವಿಹರಿಸಬೇಕು. ಅತಿಯಾದ ವ್ಯಾಯಾಮ ಮಾಡಬಾರದು. ಬಿಸಿಲಿನಲ್ಲಿ ತಿರುಗಾಡಬಾರದು. ಹಗಲಿನ ಸಮಯದಲ್ಲಿ ಮಲಗಿಕೊಳ್ಳಬಾರದು. ರಾತ್ರಿ ವೇಳೆ ಚಂದ್ರನನ್ನು ಆಹ್ಲಾದಿಸಬೇಕು.

ಈ ರೀತಿಯಾದ ಜೀವನಶೈಲಿಯನ್ನು ಬೇಸಗೆ ಕಾಲದಲ್ಲಿ ನಾವು ಅನುಸರಿಸುವುದರಿಂದ ಬೇಸಗೆಯ ತಾಪದಿಂದ ರಕ್ಷಿಸಿಕೊಂಡು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

– ಡಾ| ಪ್ರೀತಿ ಪಾಟೀಲ್‌
ಮಣಿಪಾಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next