Advertisement

ಆಟಕ್ಕುಂಟು ಲೆಕ್ಕಕ್ಕಿಲ್ಲದ ಆಹಾರ ಸುರಕ್ಷೆ-ಗುಣಮಟ್ಟ ಪ್ರಾಧಿಕಾರ!

01:25 AM May 30, 2023 | Team Udayavani |

ಬೆಂಗಳೂರು: ಆಳವಾಗಿ ಬೇರೂರಿರುವ ಆಹಾರ ಕಲಬೆರಕೆ ತಡೆಗಟ್ಟುವಲ್ಲಿ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರವು ವಿಫ‌ಲವಾಗಿದ್ದು, ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರವು ಮಂಗಳವಾರ ಸಭೆ ನಡೆಸಿ ಪ್ರಾಧಿಕಾರಕ್ಕೆ ಸರ್ಜರಿ ಮಾಡಲು ಮುಂದಾಗಿದೆ.

Advertisement

ರಾಜ್ಯದಲ್ಲಿ ಸಾವಿರಾರು ಆಹಾರ ಉತ್ಪಾದಕ ಕಾರ್ಖಾನೆಗಳು, ಹೊಟೇಲ್‌ಗ‌ಳಿದ್ದು, ಇವುಗಳಲ್ಲಿ ಶುಚಿತ್ವದ ಕೊರತೆ, ಕಳಪೆ ಗುಣಮಟ್ಟದ ಉತ್ಪನ್ನ ಬಳಸುತ್ತಿರುವ ಆರೋಪ ಕೇಳಿಬರುತ್ತಿವೆ. ದಿನಬಳಕೆ ಆಹಾರ ವಸ್ತುಗಳ ಕಲಬೆರಕೆ ದಂಧೆ ರಾಜ್ಯವ್ಯಾಪಿ ಇದೆ. ಇದರಿಂದ ಜನಸಾಮಾನ್ಯರ ಆರೋಗ್ಯಕ್ಕೆ ತೊಂದರೆ ಉಂಟಾಗುವ ಆತಂಕವಿದೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವಲ್ಲಿ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರವು ವಿಫ‌ಲವಾಗಿದೆ.

ಕಲಬೆರಕೆ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಿಗಿ ಕ್ರಮ ಕೈಗೊಳ್ಳದಿರುವುದು ವಂಚಕ ವ್ಯಾಪಾರಿಗಳಿಗೆ ವರವಾಗಿದೆ.

ಇದನ್ನು ಮನಗಂಡಿರುವ ನೂತನ ಕಾಂಗ್ರೆಸ್‌ ಸರಕಾರವು ಅಕ್ರಮಗಳಿಗೆ ಬ್ರೇಕ್‌ ಹಾಕಲು ಚಿಂತಿಸಿದೆ. ಈ ನಿಟ್ಟಿನಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಮಂಗಳವಾರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಪ್ರಾಧಿಕಾರದ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದಾರೆ.

ಪ್ರಾಧಿಕಾರದ ವೈಫ‌ಲ್ಯವೇನು ?
ಧಾನ್ಯ ಮತ್ತು ಕಾಳುಗಳಿಗೆ ಬಣ್ಣ ಮಿಶ್ರಣ, ಅಡುಗೆ ಎಣ್ಣೆಗೆ ನಕಲಿ ಎಣ್ಣೆ, ಬೆಣ್ಣೆಗೆ ಕೊಬ್ಬು, ಹಾಲಿಗೆ ಯೂರಿಯಾ, ಕಾಫಿ ಮತ್ತು ಟೀ ಪುಡಿ ಆಕರ್ಷಕವಾಗಿ ಕಾಣಲು ಅತಿಯಾದ ರಾಸಾಯನಿಕ, ಮರದ ಹೊಟ್ಟು ಮಿಶ್ರಣ, ಕರಿದ ಪದಾರ್ಥಗಳಿಗೆ ರುಚಿ ಹೆಚ್ಚಿಸಲು, ಹಣ್ಣು, ತರಕಾರಿ ಆಕರ್ಷಕವಾಗಿ ಕಾಣಲು ಅಪಾಯಕಾರಿ ರಾಸಾಯನಿಕ ಬಳಕೆ, ಕಳಪೆ ಗುಣಮಟ್ಟದ ಬೇಳೆ-ಕಾಳು, ಎಣ್ಣೆ, ಮೈದಾ, ಗೋದಿ ಹಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಹೀಗೆ ರಾಜ್ಯದಲ್ಲಿ ಹತ್ತು-ಹಲವು ಅಕ್ರಮಗಳು ದಂಧೆ ಇವೆ. ಆದರೆ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು 2022-23ರಲ್ಲಿ ಕೇವಲ 131 ಅಕ್ರಮ ಪತ್ತೆ ಹಚ್ಚಿದ್ದಾರೆ. ಈ ಪೈಕಿ 109 ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯ ರ್ಥಗೊಂಡಿದ್ದು, 7.88 ಲಕ್ಷ ರೂ. ದಂಡ ಸಂಗ್ರಹವಾಗಿದೆ. ಬೆಂಗಳೂರು, ಬೆಳಗಾವಿ, ಮಂಗಳೂರು, ಹಾಸನ, ವಿಜಯಪುರ, ಕೊಡಗು ಜಿಲ್ಲೆಗಳಲ್ಲಿ ಕಲಬೆರಕೆ ದಂಧೆ ಹೆಚ್ಚಾಗಿದೆ.

Advertisement

ಶೇ. 70ರಷ್ಟು ಹುದ್ದೆಗಳು ಖಾಲಿ
ಪ್ರಾಧಿಕಾರದಲ್ಲಿ ಒಟ್ಟು 422 ಹುದ್ದೆ ಮಂಜೂರಾಗಿದ್ದು, ಸದ್ಯ 158 ಸಿಬಂದಿ ಕೆಲಸ ಮಾಡುತ್ತಿದ್ದಾರೆ. ಬರೋಬ್ಬರಿ 264 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ 8 ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಆಹಾರ ಸುರಕ್ಷಾಧಿಕಾರಿ 158, ಪ್ರಥಮ ದರ್ಜೆ ಸಹಾಯಕ 29, ಕಿರಿಯ ಆಹಾರ ವಿಶ್ಲೇಷಕ 18, ಮುಖ್ಯ ಆಹಾರ ವಿಶ್ಲೇಷಕ 4, ಅಂಕಿತಾಧಿಕಾರಿ 14, ಶೀಘ್ರಲಿಪಿಕಾರ, ಕಿರಿಯ ಮೈಕ್ರೋ ಬಯಾಲಜಿಸ್ಟ್‌, ಕಾನೂನು ಸಲಹೆಗಾರ ವಿಭಾಗಕ್ಕೆ ಒಬ್ಬರನ್ನೂ ನೇಮಿಸಿಲ್ಲ.

ನಿಯೋಜನೆಗೆ ಪೈಪೋಟಿ
ಆರೋಗ್ಯ ಇಲಾಖೆಯಡಿ ಪ್ರಾಧಿಕಾರವು ಕಾರ್ಯ ನಿರ್ವಹಿಸುತ್ತಿದ್ದು, ಆರೋಗ್ಯ ಇಲಾಖೆಗೆ ನೇಮಕವಾದ ಕೆಲವು ವೈದ್ಯರು ಖಾಲಿ ಉಳಿದಿರುವ ಹು¨ªೆಗಳನ್ನು ದುರ್ಬಳಕೆ ಮಾಡಿ
ಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ. ಆರೋಗ್ಯ ಇಲಾಖೆಯಲ್ಲಿ 85 ಸಾ. ರೂ. ವಿಶೇಷ ಭತ್ತೆ ಸಿಗುತ್ತಿದ್ದರೂ ಅದನ್ನು ತಿರಸ್ಕರಿಸುವ ವೈದ್ಯರು ಪ್ರಾಧಿಕಾರಕ್ಕೆ ನಿಯೋಜನೆ ಮೇರೆಗೆ ಬರಲು ಪೈಪೋಟಿಗಿಳಿದಿರುವುದು ಈ ಆರೋಪಗಳಿಗೆ ಪುಷ್ಟಿ ನೀಡುತ್ತವೆ.

~ ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next