Advertisement

ರುಚಿಯಾದ ಬಾಳೆ ಹಣ್ಣಿನ ಪರೋಟ ಮಾಡುವ ಸರಳ ವಿಧಾನ ನಿಮಗಾಗಿ….

05:12 PM Sep 16, 2022 | ಶ್ರೀರಾಮ್ ನಾಯಕ್ |

ಸಾಮಾನ್ಯವಾಗಿ ಪರೋಟ ಎಂದ ಕ್ಷಣ ನಮ್ಮ ಮನಸ್ಸಿಗೆ ಬರುವುದು ಆಲೂ ಪರೋಟ, ಗೋಬಿ ಪರೋಟ, ಪನ್ನೀರ್‌ ಪರೋಟ ಹೀಗೆ ವಿವಿಧ ರೀತಿಯಲ್ಲಿ ಪರೋಟವನ್ನು ನೀವು ತಿಂದಿರಬಹುದು ಆದರೆ ಬಾಳೆ ಹಣ್ಣಿನ ಪರೋಟದ ರುಚಿಯನ್ನು ಸವಿದು ನೋಡಿದ್ದೀರಾ? ಇಲ್ಲವೆಂದರೆ ಅತೀ ಸರಳ ವಿಧಾನದಲ್ಲಿ “ಬಾಳೆ ಹಣ್ಣಿನ ಪರೋಟ” ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ. ಮಕ್ಕಳಿಗಂತೂ ಇದು ತಂಬಾನೇ ಇಷ್ಟವಾಗುತ್ತದೆ ಮತ್ತು ಇದು ಆರೋಗ್ಯಕ್ಕೂ ಕೂಡ ಅಷ್ಟೇ ಒಳ್ಳೆಯ ತಿಂಡಿ ತಿನಿಸಾಗಿದೆ.

Advertisement

ಬೇಕಾಗುವ ಸಾಮಗ್ರಿಗಳು
ಬಾಳೆ ಹಣ್ಣು-5, ಗೋಧಿ ಹಿಟ್ಟು 2 ಕಪ್‌, ಬೆಲ್ಲ- 1 ದೊಡ್ಡ ಚಮಚ, ತುಪ್ಪ ಸ್ವಲ್ಪ, ಎಣ್ಣೆ -1 ದೊಡ್ಡ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಒಂದು ಪಾತ್ರೆಗೆ ಬಾಳೆ ಹಣ್ಣನ್ನು ಹಾಕಿ ಸರಿಯಾಗಿ ಮೆತ್ತಗೆ ಮಾಡಿಕೊಳ್ಳಿ. ನಂತರ ಅದಕ್ಕೆ ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ. ತದನಂತರ ಗೋಧಿ ಹಿಟ್ಟನ್ನು ಹಾಕಿ ಸರಿಯಾಗಿ ಕಲಸಿಟ್ಟ ಮೇಲೆ ಸ್ವಲ್ಪ ನೀರನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮಾಡಿ ನಂತರ ಒಂದು ಚಮಚ ಎಣ್ಣೆ ಹಾಕಿ ಪುನಃ ಮಿಕ್ಸ್‌ ಮಾಡಿಕೊಳ್ಳಿ. ಮಾಡಿಟ್ಟ ಹಿಟ್ಟಿನ ಪಾತ್ರೆಗೆ ಮುಚ್ಚಳ ಮುಚ್ಚಿ ಸುಮಾರು 20 ರಿಂದ 25 ನಿಮಿಷಗಳ ಹಾಗೇ ಬಿಡಿ. ನಂತರ ನಿಮಗೆ ಬೇಕಾಗುವ ರೀತಿಯಲ್ಲಿ ಉಂಡೆ ತಯಾರಿಸಿದ ಮೇಲೆ ಸ್ವಲ್ಪ ಹಿಟ್ಟನ್ನು ಉದುರಿಸಿ ಲಟ್ಟಿಸಿ. ಅದಕ್ಕೆ ತುಪ್ಪ ಸವರಿ ಅರ್ಧ ಭಾಗ ಮಡಚಿ ,ಮತ್ತೆ ತುಪ್ಪವನ್ನು ಸವರಿ ಕೋನಾಕಾರವಾಗಿ ಮಡಚಿರಿ. ನಂತರ ಸಮವಾಗಿ ಎಲ್ಲಾ ಬದಿಗಳನ್ನು ಲಟ್ಟಿಸಿ.

ಒಂದು ಕಾವಲಿಗೆ ತುಪ್ಪವನ್ನು ಹಾಕಿ ಲಟ್ಟಿಸಿದ್ದ ಪರೋಟವನ್ನು ಹಾಕಿ ಚೆನ್ನಾಗಿ ಎರಡು ಬದಿ ಬೇಯಿಸಿರಿ.ಬಿಸಿ-ಬಿಸಿಯಾದ ರುಚಿಕರವಾದ ಬಾಳೆ ಹಣ್ಣಿನ ಪರೋಟ ಸವಿಯಲು ಸಿದ್ಧ .

*ಶ್ರೀರಾಮ್ ನಾಯಕ್

Advertisement
Advertisement

Udayavani is now on Telegram. Click here to join our channel and stay updated with the latest news.

Next