Advertisement
ಉತ್ತರ ಪ್ರದೇಶ ಮೂಲದ ಅನುರಾಗ್ ತಿವಾರಿ 2007ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದರು. ಬುಧವಾರ ಜನ್ಮದಿನದ ಹಿನ್ನೆಲೆಯಲ್ಲಿ ಲಕ್ನೋಗೆ ತೆರಳಿದ್ದರು. ಎರಡು ದಿನಗಳಿಂದ ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದ ಅವರು ಬುಧವಾರ ಬೆಳಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
Related Articles
Advertisement
ಸಂಸದೆ ಶೋಭಾ ಕರಂದ್ಲಾಜೆ ಪತ್ರಈ ಮಧ್ಯೆ, ಅನುರಾಗ್ ತಿವಾರಿ ಅನುಮಾನಾಸ್ಪದ ಸಾವಿನ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿ ಸಂಸದೆ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಅನುರಾಗ್ ತಿವಾರಿ ಅವರ ಮೃತದೇಹ ಲಕ್ನೋದ ವಸತಿಗೃಹ ಪಕ್ಕದ ರಸ್ತೆಬದಿ ಪತ್ತೆಯಾಗಿದೆ. ಇದರಿಂದಾಗಿ ಅವರ ಸಾವಿನ ಬಗ್ಗೆ ಅನುಮಾನ ಮೂಡುವಂತಾಗಿದೆ. ಸತ್ಯಾಂಶ ಹೊರಬೀಳುವ ಮುನ್ನವೇ ಅವರ ಸಾವಿಗೆ ಪತ್ನಿಯೊಂದಿಗಿನ ಜಗಳ ಕಾರಣ ಎಂಬ ವರದಿಗಳು ಪ್ರಕಟವಾಗುತ್ತಿವೆ. ಆದರೆ, ಈ ಸಾವಿನ ಹಿಂದೆ ಬೇರೆ ಕಾರಣಗಳು ಇವೆ ಎಂಬ ಶಂಕೆಯಿದ್ದು, ಅದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಯೋಗಿ ಆದಿತ್ಯನಾಥ್ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ದಿಗ್ಭ್ರಮೆ
ಯುವ ಐಎಎಸ್ ಅಧಿಕಾರಿಯ ನಿಗೂಢ ಸಾವಿಗೆ ರಾಜ್ಯ ಸರ್ಕಾರವೂ ದಿಗ್ಭ್ರಮೆ ವ್ಯಕ್ತಪಡಿಸಿದೆ. ಅನುರಾಗ್ ತಿವಾರಿ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಐಎಎಸ್ ಅಧಿಕಾರಿಗಳಾದ ಅಭಿರಾಂ ಶಂಕರ್ ಹಾಗೂ ಪಂಕಜ್ ಕುಮಾರ್ ಪಾಂಡೆ ಅವರನ್ನು ಲಕ್ನೋಗೆ ಕಳುಹಿಸಿದ್ದು, ಸಾವಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವಂತೆ ಸೂಚಿಸಿದ್ದಾರೆ.ಇನ್ನೊಂದೆಡೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಉತ್ತರ ಪ್ರದೇಶದ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿ ಪ್ರಕರಣದ ಸಮಗ್ರ ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಹುಟ್ಟುಹಬ್ಬದಂದೇ ಸಾವು
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯವರಾದ ಅನುರಾಗ್ ತಿವಾರಿ ಎಂಜಿನಿಯರಿಂಗ್ ಪದವೀಧರರು. ಮೃತ ತಿವಾರಿ ಅವರ ಜೇಬಿನಲ್ಲಿ ಪರ್ಸ್ ಇದ್ದು, ಅದರಲ್ಲಿನ ಗುರುತು ಚೀಟಿ ಆಧಾರದಲ್ಲಿ ಐಎಎಸ್ ಅಧಿಕಾರಿ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಮೇ 17 ಅವರ ಜನ್ಮದಿನವಾಗಿದ್ದು, 37ನೇ ವರ್ಷಕ್ಕೆ ಕಾಲಿಡುವ ದಿನವೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ತಿವಾರಿ ಅವರ ಸಾವು ಉತ್ತರ ಪ್ರದೇಶ ರಾಜಧಾನಿಯಲ್ಲಿ ಒಂದು ಬಗೆಯ ಆಘಾತ ಸೃಷ್ಟಿಸಿದೆ. ಉತ್ತರ ಪ್ರದೇಶದ ವಿಧಿವಿಜ್ಞಾನ ತಜ್ಞರು ಅವರ ಕೂಲಂಕಶವಾಗಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಇನ್ನಷ್ಟೇ ನೀಡಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ. *”ಕಿರಿಯ ವಯಸ್ಸಿನ ಅನುರಾಗ್ ತಿವಾರಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸಾವಿಗೆ ಕಾರಣ ಏನು ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಇಬ್ಬರು ಐಎಎಸ್ ಅಧಿಕಾರಿಗಳನ್ನು ಲಕ್ನೋಗೆ ಕಳುಹಿಸಲಾಗಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ