ಹಾವೇರಿ: ಆಹಾರ ಉದ್ದಿಮೆಗಳಲ್ಲಿ ಯುವಕರಿಗೆ, ರೈತರಿಗೆ ಹಾಗೂ ಸಹಕಾರ ಸಂಸ್ಥೆಗಳಿಗೆ ಇರುವ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ|ಇಂದಿರೇಶ ಕೆ.ಎಂ.ಕರೆ ನೀಡಿದರು.
ಆತ್ಮನಿರ್ಭರ ಭಾರತ ಶೀರ್ಷಿಕೆಯಡಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ದೇವಿಹೊಸೂರ ಹಾವೇರಿ ಜಂಟಿಯಾಗಿ ಭಾರತ ಸರ್ಕಾರದ ಆಹಾರ ಸಂರಕ್ಷಣಾ ಕೈಗಾರಿಕಾ ಮಂತ್ರಾಲಯ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಂತರ್ಜಾಲ ಕಾರ್ಯಾಗಾರ ಹಾಗೂ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂರಕ್ಷಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ವಿಷಯ ಕುರಿತು ನಡೆದ ವೆಬಿನಾರ್ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ:ಎರಡನೇ ಹಂತದ ಕೋವಿಡ್ ತಡೆಗೆ ಯತ್ನ: ಸ್ಟೇನ್ ನಲ್ಲಿ ತುರ್ತು ಪರಿಸ್ಥಿತಿ, ಕರ್ಫ್ಯೂ ಜಾರಿ
ತಮಿಳನಾಡು ರಾಜ್ಯದ ತಂಜಾವೂರು ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ| ಅನಂತರಾಮಕೃಷ್ಣನ್ ಅವರು ಸರ್ಕಾರದಿಂದ ದೊರೆಯುವ ಆರ್ಥಿಕ ಸಹಕಾರ ಹಾಗೂ ತರಬೇತಿಗಳ ಅವಕಾಶಗಳ ಬಗ್ಗೆ
ಮಾಹಿತಿ ನೀಡಿದರು. ತಾಂತ್ರಿಕ ಸಂವಾದದಲ್ಲಿ ವಿಷಯ ತಜ್ಞರಾದ ಬೆಂಗಳೂರಿನ ಕೆಎಪಿಪಿಇಸಿ ಲಿ.ನ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವರಾಜ, ಡಾ| ಚಿದಾನಂದ, ಜಗನ್ನಾಥ ಪಿ.ಎಸ್.ಕೆ., ಪ್ರೊ. ಪ್ರತಾಪಕುಮಾರ ಶೆಟ್ಟಿ ಎಚ್., ಸತೀಶಚಂದ್ರ, ಡಾ| ಅಶೋಕ ಆಲೂರ ಸೂಕ್ತ ಮಾಹಿತಿ ನೀಡಿದರು.
ರಾಜ್ಯದ ವಿವಿಧ ಭಾಗಗಳಿಂದ 200ಕ್ಕೂ ಹೆಚ್ಚಿನ ರೈತ ಉತ್ಪಾದಕ ಕಂಪನಿಗಳ ಸದಸ್ಯರು, ಯುವ ಉದ್ದಿಮೆದಾರರು, ವಿದ್ಯಾರ್ಥಿಗಳು ವೆಬಿನಾರ್‌ನಲ್ಲಿ ಭಾಗವಹಿಸಿದ್ದರು. ರಾಜ್ಯ ಮಟ್ಟದ ಅಂತರ್ಜಾಲ ಕಾರ್ಯಾಗಾರ ಅಧ್ಯಕ್ಷ ಡಾ| ಲಕ್ಷ್ಮೀನಾರಾಯಣ ಹೆಗಡೆ, ಡಾ| ಪ್ರಭುದೇವ ಅಜ್ಜಪ್ಪಳವರ, ಆಯೋಜಕರಾದ ಡಾ|ತಿಪ್ಪಣ್ಣ ಕೆ.ಎಸ್., ಡಾ| ಶಿದ್ದನಗೌಡ ಯಡಚಿ, ಡಾ| ಕಿರಣ್‌ಕುಮಾರ ನಾಗಜ್ಜನವರ, ಡಾ| ಕೃಷ್ಣ ಕುರುಬೆಟ್ಟ, ಡಾ| ರವಿಕುಮಾರ ಬಿ. ಮತ್ತು ಡಾ| ವಿನಯ್‌ಕುಮಾರ ಎಂ.ಎಂ. ಕಾರ್ಯಾಗಾರ ಯಶಸ್ವಿಯಾಗಿ ನಡೆಸಿಕೊಟ್ಟರು.