Advertisement

ಚಿನ್ನಕ್ಕಿಂತ ಅನ್ನ-ನೀರು ಮುಖ್ಯ

03:53 PM May 04, 2019 | pallavi |

ಸಿರುಗುಪ್ಪ: ಜೀವನದಲ್ಲಿ ಮಾನ ಉಳಿಸಲು ಒಳ್ಳೆಯ ಮಾತುಗಳು, ಪ್ರಾಣ ಉಳಿಸಲು ನೀರು ಬೇಕು. ಹಸಿವಾದಾಗ, ಬಾಯಾರಿದಾಗ ನಮಗೆ ಬಂಗಾರ, ವಜ್ರ, ವೈಡೂರ್ಯಗಳು ಉಪಯೋಗಕ್ಕೆ ಬರುವುದಿಲ್ಲ ಎಂದು ಚೀಕಲಕಪರ್ವಿ ಮಠದ ರುದ್ರಮುನಿ ಸ್ವಾಮಿಗಳು ಹೇಳಿದರು.

Advertisement

ತಾಲೂಕಿನ ಹೆರಕಲ್ಲು ಬಳಗನೂರು ಮರಿ ಶಿವಯೋಗಿಗಳ ಮಠದಲ್ಲಿ ನಡೆದ‌ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಆಹಾರ ಮತ್ತು ನೀರಿನ ಸೇವನೆಯಿಂದ ಮಾತ್ರ ಹಸಿವು ನೀಗುತ್ತದೆ. ಅದ್ದರಿಂದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅನ್ನ, ನೀರು, ಸುಭಾಷಿತ ಈ ಮೂರು ಅಂಶ ಅಳವಡಿಸಿಕೊಳ್ಳಬೇಕು. ಬಂಗಾರದಂತಹ ಲೋಹದ ಮೇಲೆ ವ್ಯಾಮೋಹಗೊಳ್ಳದೇ ನಮ್ಮ ಬದುಕನ್ನೇ ಬಂಗಾರ ಮಾಡಿಕೊಳ್ಳುವತ್ತ ಗಮನ ನೀಡಬೇಕು ಎಂದರು.

ಸಮಾಜದಲ್ಲಿ ಯಾವ ರೀತಿ ಬಾಳಬೇಕು. ಗುರು ಹಿರಿಯರೊಂದಿಗೆ, ಮಾತ-ಪಿತೃಗಳಿಗೆ ಹೇಗೆ ಗೌರವ ನೀಡಬೇಕೆಂದು ತಿಳಿಸಿಕೊಡುವುದೇ ಪುರಾಣ ಪ್ರವಚನಗಳು. ಹಾಲ್ವಿಯ ಮಹಾಂತ ಸ್ವಾಮಿಗಳು ಮೂರು ವರ್ಷದ 6 ತಿಂಗಳ ಕಾಲ ಬಸವ ಪುರಾಣ ಹೇಳಿಸುವ ಮೂಲಕ 150 ವರ್ಷಗಳ ಹಿಂದೆಯೇ ಬಸವ ತತ್ವವನ್ನು ನಾಡಿನಾದ್ಯಂತ ಸಾರಿದರು. ಮನುಷ್ಯ ಮನುಷ್ಯರಾಗಿ ಬಾಳುವುದನ್ನು ಅನ್ನದಾಸೋಹ, ಅಕ್ಷರದಾಸೋಹ, ಮಾನಸಿಕ ನೆಮ್ಮದಿಯನ್ನು ಮಠಗಳು, ಸ್ವಾಮಿಗಳು ನೀಡುತ್ತಾ ಬಂದಿದ್ದಾರೆ. ಭಕ್ತರ ಕಷ್ಟ, ಸುಖಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಡುವ ಮಠದಲ್ಲಿನ ಜೀವಂತ ದೇವರುಗಳೆಂದರೆ ಸ್ವಾಮಿಗಳಾಗಿದ್ದಾರೆ ಎಂದು ತಿಳಿಸಿದರು. ಹಗರಿಬೊಮ್ಮನಹಳ್ಳಿಯ ಹಾಲ ಶಂಕರ ಮಠದ ಹಾಲ ಶಂಕರಸ್ವಾಮೀಜಿ, ಕುಷ್ಟಗಿಯ ಮದ್ದಾನ ಮಠದ ಕರಿಬಸವ ಸ್ವಾಮೀಜಿ, ಹೆರಕಲ್ಲಿನ ಮರಿಶಿವಯೋಗಿಗಳ ಮಠದ ಚಿದಾನಂದ ತಾತನವರು ಆಶೀರ್ವಚನ ನೀಡಿದರು.

ವಟುಗಳಿಗೆ ಅಯ್ನಾಚಾರ ದೀಕ್ಷೆ
ಸಿರುಗುಪ್ಪ: ನಾವು ಮಾಡಿರುವ ಜನ್ಮ ಜನ್ಮಗಳ ಪಾಪ ಪರಿಹಾರವಾಗಿ ಜನ್ಮದಿಂದಲೇ ಮಾನವರಿಗೆ ಅಂಟಿದ ಮಲತ್ರಯಾದಿ ದೋಷಗಳನ್ನು ತೊಡೆದು ಮಾಂಸ ಪಿಂಡವನ್ನು ಮಂತ್ರ ಪಿಂಡವನ್ನಾಗಿಸಿ ಜಂಗಮ ಮೂರ್ತಿಯನ್ನಾಗಿ ಮಾಡುವುದೇ ಅಯ್ನಾಚಾರ ದೀಕ್ಷೆಯ ಉದ್ದೇಶ ಎಂದು ಶಾನವಾಸಪುರ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು. ಹಳೇಕೋಟೆ ಗ್ರಾಮದ ಬಳಗನೂರು ಮರಿಶಿವಯೋಗಿಗಳ ಮಠದಲ್ಲಿ 110ನೇ ಪುಣ್ಯಾರಾಧನೆ ಅಂಗವಾಗಿ ಜಂಗಮ ವಟುಗಳಿಗೆ ಅಯ್ನಾಚಾರ ದೀಕ್ಷೆ ನೀಡಿ ಪಂಚಾಕ್ಷರಿ ಶಿವಮಂತ್ರೋಪದೇಶ ನೀಡಿ, ಧರ್ಮೋಪದೇಶ ಮಾಡಿದ ಅವರು, ಯೋಗ್ಯ ಗುರುಗಳಿಂದ ಮಂತ್ರ ದೀಕ್ಷೆ ಪಡೆದ ವಟುಗಳು ಶಿವನ ಸ್ವರೂಪಿಗಳಾಗಿ ಲಿಂಗ, ಪಾದೋದಕ, ರುದ್ರಾಕ್ಷಿ, ಮಂತ್ರ, ಭಸ್ಮ ಸೇರಿದಂತೆ ಅಷ್ಟಾವರಣ, ಪಂಚಾವರ್ಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಜಂಗಮ ಸಮಾಜದವರು ಪ್ರಾಚೀನ ಕಾಲದಿಂದಲೂ ಪರಂಪರೆಯಾಗಿ ಬಂದಿರುವ ದೀಕ್ಷೆಯನ್ನು ತಮ್ಮ ಮಕ್ಕಳಿಗೆ ನೀಡುವ ಮೂಲಕ ಧರ್ಮದ ಹಾದಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು. ಸಿದ್ಧಬಸವ ಸ್ವಾಮೀಜಿ, ಚನ್ನಬಸಯ್ಯ ಶಾಸ್ತ್ರಿ ಇನ್ನಿತರರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next