Advertisement

ರಸ್ತೆ ನಿಯಮ ತಪ್ಪದೇ ಪಾಲಿಸಿ

10:46 AM Mar 15, 2019 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಹನ ಸವಾರರಿಗೆ ರಸ್ತೆ ನಿಯಮಗಳನ್ನು ಪಾಲಿಸುವಂತೆ ಹೇಳುವ ಮೊದಲು ಅವರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ವಿವಿಧ ರೀತಿಯ ಸೂಚನಾ ಫಲಕಗಳು, ಅವಶ್ಯ ಇರುವ ಕಡೆ ಸಿಗ್ನಲ್‌, ಝಿಬ್ರಾ ಕ್ರಾಸಿಂಗ್‌, ರಿಪ್ಲೆಕ್ಟರ್‌ಗಳನ್ನು ಕಟ್ಟುನಿಟ್ಟಾಗಿ ಅಳವಡಿಸಬೇಕು ಎಂದು ಸೂಚಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ ಮಾತನಾಡಿ, ಒಂದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುವ ಬ್ಲಾಕ್‌ ಸ್ಪಾಟ್‌, ಸೂಚನಾ ಫಲಕ ಹಾಗೂ ರೋಡ್‌ ಮಾರ್ಕಿಂಗ್‌ ಕುರಿತು ಆರ್‌ಟಿಒ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ವತಿಯಿಂದ ಜಂಟಿ ಸಮೀಕ್ಷೆ ಕೈಗೊಂಡು ವರದಿ ಸಿದ್ಧಪಡಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಯಾದಗಿರಿ ನಗರದಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕೈಗೊಂಡು ಅವೈಜ್ಞಾನಿಕ ಪಾರ್ಕಿಂಗ್‌ ತಡೆಯಬೇಕು. ಟ್ರಾಫಿಕ್‌
ಸಿಗ್ನಲ್‌, ಸಿ.ಸಿ. ಟಿವಿ ಕ್ಯಾಮರಾ ಅಳವಡಿಸಬೇಕು. ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು ಎಂದು ನಿರ್ದೇಶಿಸಿದ ಜಿಲ್ಲಾಧಿಕಾರಿ, ಕೆಲ ಕಡೆಗಳಲ್ಲಿ ನಗರಸಭೆಯಿಂದ ರಸ್ತೆಗಳನ್ನು ಸ್ವತ್ಛಗೊಳಿಸಿದಾಗ ಕಸ ಮತ್ತು ಮಣ್ಣು ರಸ್ತೆ ಪಕ್ಕದಲ್ಲಿಯೇ ಬಿಡಲಾಗುತ್ತಿದೆ. ಇದರಿಂದ ಆ ಕಸ ಮತ್ತು ಮಣ್ಣು ರಸ್ತೆಯಲ್ಲಿಯೇ ಹರಡಿಕೊಳ್ಳುತ್ತದೆ. ಹಾಗಾಗಿ, ಇದನ್ನು ಬೇರೆಡೆಗೆ ಸಾಗಿಸಲು ಕ್ರಮ ವಹಿಸುವಂತೆ ಪೌರಾಯುಕ್ತ ರಮೇಶ ಸುಣಗಾರಗೆ ಸೂಚನೆ ನೀಡಿದರು.

ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಲು 3 ಲಕ್ಷ ರೂ. ಅನುದಾನ ಲಭ್ಯವಿದ್ದು, ಅದನ್ನು ಮಾರ್ಚ್‌ 31ರೊಳಗೆ ಸದುಪಯೋಗಪಡಿಸಿಕೊಳ್ಳಬೇಕು. ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಇನ್ನು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸಿ, ರಸೀದಿ ನೀಡಬೇಕು. ಬೈಕ್‌ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. 4 ಚಕ್ರದ ವಾಹನಗಳ ಚಾಲಕರು ಸೀಟ್‌ ಬೆಲ್ಟ್ ಹಾಕಿಕೊಳ್ಳಬೇಕು. ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವ ಮತ್ತು ರಸ್ತೆ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

Advertisement

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ ಮಾತನಾಡಿ, ಸೈದಾಪುರ ಬಸ್‌ ನಿಲ್ದಾಣ ಆವರಣ ಗೋಡೆಗೆ ಹೊಂದಿಕೊಂಡು ಪಾನ್‌ ಶಾಪ್‌ಗ್ಳನ್ನು ಸ್ಥಾಪಿಸಲಾಗಿದೆ. ಇದರಿಂದ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸುರಪುರ ಬಸ್‌ ನಿಲ್ದಾಣದ ಬಳಿ ಒನ್‌ ವೇ ಜಾರಿಗೆ ತರಬೇಕು ಎಂದು ಕೋರಿದರು. 2019ನೇ ಸಾಲಿನ ರಸ್ತೆ ಸುರಕ್ಷತಾ ಕ್ರಿಯಾ ಯೋಜನೆಯ ಕರಡನ್ನು ಸಭೆಯಲ್ಲಿ ಮಂಡಿಸಲಾಯಿತು. ಡಿವೈಎಸ್‌ಪಿ ಯು. ಶರಣಪ್ಪ, ನಗರ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಚಂದ್ರಶೇಖರ ಸಿ.ಬಿ., ಶಹಾಪುರ ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ವೃತ್ತ ನಿರೀಕ್ಷಕ ನಾಗರಾಜ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ ಚನ್ನಬಸಪ್ಪ ಮೇಕಾಲೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಪವಿಭಾಗದ ಎಇಇ ಸಿದ್ದಲಿಂಗಪ್ಪ ಐರೆಡ್ಡಿ, ಜೆಸ್ಕಾಂನ ಎಇಇ ವಿಶ್ವನಾಥರೆಡ್ಡಿ ಸಭೆಯಲ್ಲಿ ಹಾಜರಿದ್ದರು.

ಬಿಡಾಡಿದನಗಳನ್ನು ರಸ್ತೆಗೆ ಬಿಡುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಬೈಕ್‌ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೆ. ಅಲ್ಲದೆ, ಸಂಚಾರ ದಟ್ಟಣೆ ಉಂಟಾಗುತ್ತದೆ. ಕಾರಣ ದನಗಳನ್ನು ರಸ್ತೆಗೆ ಬಿಡದಂತೆ ಅವುಗಳ ಮಾಲೀಕರಿಗೆ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಬೇಕು. ರಸ್ತೆಗೆ ಬಿಟ್ಟಲ್ಲಿ ವಶಪಡಿಸಿಕೊಂಡು ಯಾದಗಿರಿ ಹನುಮಾನ ಗೋ ಶಾಲೆ ಅಥವಾ ಶಹಾಪುರದ ವಿಶ್ವ ಗೋ ಮಾತಾ ಗುರುಕುಲ ಗೋ ಶಾಲೆಗಳಿಗೆ ಸಾಗಿಸಬೇಕು. ಬಿಡಾಡಿ ದನಗಳ ಮಾಲೀಕರು ಬಿಡಿಸಿಕೊಂಡು ಹೋಗಲು ಬಂದಾಗ ದಂಡ ವಿಧಿಸಬೇಕು.
 ಸೋನಾವಣೆ ರಿಷಿಕೇಶ ಭಗವಾನ್‌, ಎಸಿ

Advertisement

Udayavani is now on Telegram. Click here to join our channel and stay updated with the latest news.

Next