Advertisement

ಪ್ರಮಾಣಪತ್ರ ನೀಡುವಾಗ ಮಾರ್ಗಸೂಚಿ ಪಾಲಿಸಿ

05:00 PM Jan 08, 2022 | Team Udayavani |

ಬೆಳಗಾವಿ: ಯಾವುದೇ ಜಾತಿ ಪ್ರಮಾಣಪತ್ರ ನೀಡುವಾಗ ಸ್ಥಾನಿಕ ವಿಚಾರಣೆ ಮಾಡಬೇಕು ಹಾಗೂ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಹಿಂದುಳಿದ ವರ್ಗಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಂಧುತ್ವ ಪ್ರಮಾಣಪತ್ರ ನೀಡುವಾಗ ಸಾಮಾನ್ಯವಾಗಿ ತಂದೆಯ ಜಾತಿ ಪರಿಗಣಿಸಲಾಗುತ್ತದೆ. ಯಾವುದೇ ಜಾತಿಪ್ರಮಾಣ ಪತ್ರ ನೀಡುವಾಗ ಸ್ಥಾನಿಕ ಚೌಕಾಶಿ ನಡೆಸಿ ಆಯಾ ಜಾತಿಯ ಗುಣಲಕ್ಷಣ ಖಚಿತಪಡಿಸಿಕೊಳ್ಳಬೇಕು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ವಸತಿ ನಿಲಯಗಳಲ್ಲಿ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಹಾಸಿಗೆ, ಮಂಚಗಳ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಬೇಕು. ಶಾಸಕರ ಅನುದಾನದಲ್ಲಿ ಈ ಸೌಕರ್ಯ ಕಲ್ಪಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಪ್ರವೇಶ ದೊರಕದಿರುವ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಯೋಜನೆ ಮುಂದುವರಿಸುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

Advertisement

ಬೆಳಗಾವಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಮಾತನಾಡಿ, ಕೇಂದ್ರ-ರಾಜ್ಯಗಳ ಪಟ್ಟಿಯಲ್ಲಿ ಕೆಲವು ಕೆಟಗರಿಗಳ ವರ್ಗೀಕರಣದಲ್ಲಿ ವ್ಯತ್ಯಾಸ ಕಂಡುಬರುವುದರಿಂದ ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿ ಸೌಲಭ್ಯಗಳಲ್ಲಿ ಕೂಡ ವ್ಯತ್ಯಾಸ ಕಂಡುಬರುತ್ತಿದೆ. ಪ್ರತಿ ಜಾತಿಗಳ ಗುಣಲಕ್ಷಣಗಳ ಸಮಗ್ರ ಪಟ್ಟಿ ಆಯೋಗದಿಂದ ಸಿದ್ಧಪಡಿಸಿದರೆ ಜಾತಿ ಪ್ರಮಾಣಪತ್ರ ನೀಡುವಾಗ ಗೊಂದಲ ಉಂಟಾದರೆ ಇಂತಹ ಪಟ್ಟಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕೋವಿಡ್‌ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಬಾಲಸ್ವರಾಜ್‌ ಯೋಜನೆಯಡಿ ಪ್ರತಿ ತಿಂಗಳು 3 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ ಹೇಳಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗೌರಿಶಂಕರ ಮಾತನಾಡಿ, ಬುಡಾ ವ್ಯಾಪ್ತಿಯಲ್ಲಿ ವಸತಿ ನಿಲಯಗಳ ನಿರ್ಮಾಣಕ್ಕೆ ಮೂರು ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ ಲೀಸ್‌ ಹಣ
ಪಾವತಿಸಲು ಅನುದಾನ ಲಭ್ಯವಿಲ್ಲದಿರುವುದರಿಂದ ನಿವೇಶನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಈ ವೇಳೆ ಆಯೋಗದ ಸದಸ್ಯರಾದ ಕಲ್ಯಾಣಕುಮಾರ್‌, ರಾಜಶೇಖರ್‌, ಅರುಣಕುಮಾರ್‌, ಕೆ.ಟಿ. ಸುವರ್ಣ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಡಾ| ಉಮಾ ಸಾಲಿಗೌಡರ ಸೇರಿದಂತೆ ಇತರರಿದ್ದರು.

ಹೆಚ್ಚುವರಿ ಪ್ರವೇಶ ಕಲ್ಪಿಸಿರುವ ಮಕ್ಕಳಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಬೇಕು. ಕೆಲವು ವಸತಿ ನಿಲಯಗಳಲ್ಲಿ ಖಾಲಿ ಉಳಿಯುವ ಹಿಂದುಳಿದ ವರ್ಗಗಳ ವಿವಿಧ ಕೆಟಗರಿ ಸೀಟುಗಳನ್ನು ಇತರೆ ಅರ್ಹ ಕೆಟಗರಿಯ ಮಕ್ಕಳಿಗೆ ನಿಯಮಾವಳಿ ಪ್ರಕಾರ ಹಂಚಿಕೆ ಮಾಡಬೇಕು.
ಕೆ. ಜಯಪ್ರಕಾಶ್‌ ಹೆಗ್ಡೆ,
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next