Advertisement

ಮನೆಯಲ್ಲಿದ್ದೇ ಕೋವಿಡ್ ಗೆಲ್ಲಬಹುದು! ಶೇ. 90ರಷ್ಟು ಮಂದಿ ನಿಯಮ ಪಾಲಿಸಿ ಗುಣಮುಖರಾಗಿದ್ದಾರೆ

12:36 AM Apr 26, 2021 | Team Udayavani |

ಹೊಸದಿಲ್ಲಿ : “ಸೋಂಕುಪೀಡಿತರಲ್ಲಿ ಶೇ. 90ರಷ್ಟು ಮಂದಿ ಆಸ್ಪತ್ರೆಗೆ ತೆರಳದೆ ಮನೆಯಲ್ಲೇ ಇದ್ದು ಗುಣಮುಖರಾಗಲು ಅವಕಾಶ ಇದೆ. ಆದರೆ ಅವರು ನಿಯಮ ಪಾಲನೆ ಮಾಡಬೇಕು…’

Advertisement

ಈ ಅಭಿಪ್ರಾಯವನ್ನು ಹೊಸದಿಲ್ಲಿಯ ಅಖೀಲ ಭಾರತೀಯ ವೈದ್ಯವಿಜ್ಞಾನಗಳ ಸಂಸ್ಥೆ (ಏಮ್ಸ್‌) ಮುಖ್ಯಸ್ಥ ಡಾ| ರಣದೀಪ್‌ ಗುಲೇರಿಯಾ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅದೇ ಸಂಸ್ಥೆಯ ಔಷಧ ವಿಭಾಗದ ಮುಖ್ಯಸ್ಥ ಡಾ| ನವನೀತ್‌ ಶರ್ಮಾ, ಗುರುಗ್ರಾಮದ “ಮೇದಾಂತ-ದ ಮೆಡಿಸಿಟಿ’ ಆಸ್ಪತ್ರೆಯ ವೈದ್ಯ ಡಾ| ನರೇಶ್‌ ಟೆಹ್ರಾನ್‌ ಸಹಮತ ವ್ಯಕ್ತಪಡಿಸಿದ್ದಾರೆ. ಇಂಥ ಕ್ರಮಗಳನ್ನು ಅನುಸರಿಸುವ ಮೂಲಕ ಶೇ. 90ರಷ್ಟು ರೋಗಿಗಳು ಗುಣ ಹೊಂದಿದ್ದಾರೆ.

ವೈದ್ಯರ ಸೂಚನೆಯಂತೆ ನಿಯಮಿತವಾಗಿ ಔಷಧ ಸೇವನೆ, ಮಾರ್ಗಸೂಚಿ ಪಾಲನೆಯ ಜತೆಗೆ ಯೋಗ, ಅನುಲೋಮ- ವಿಲೋಮದಂಥ ಉಸಿರಾಟ ವ್ಯಾಯಮಗಳು ಕೊರೊನಾದಿಂದ ಶೀಘ್ರ ಗುಣಮುಖರಾಗಲು ನೆರವಾಗುತ್ತವೆ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳು ಶ್ವಾಸಕೋಶದ ಸಂಕುಚನ- ವಿಕಸನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅಲ್ಲದೆ ಆಮ್ಲಜನಕ ವಿನಿಮಯ ಉದ್ದೀಪನಗೊಳ್ಳುತ್ತದೆ ಎಂದು ಈ ಎಲ್ಲ ವೈದ್ಯರೂ ಹೇಳಿದ್ದಾರೆ.

ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಸುವುದು ಮತ್ತು ಇನ್ನಿತರ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸೋಂಕುಪೀಡಿತರ ಪ್ರಮಾಣವನ್ನು ಮುಂದಿನ ಮೂರು ವಾರಗಳಲ್ಲಿ ಶೇ. 5ಕ್ಕೆ ಇಳಿಸಬಹುದು ಎಂದು ಏಮ್ಸ್‌ ಆಸ್ಪತ್ರೆಯಲ್ಲಿ ಔಷಧ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಡಾ| ನವನೀತ್‌ ಸಿಂಗ್‌ ಹೇಳಿದ್ದಾರೆ.

7 ದಿನದಲ್ಲಿ ನಿವಾರಣೆ
ಪ್ರಸ್ತುತ ಉಲ್ಬಣಿಸಿರುವ ಆಮ್ಲಜನಕ ಕೊರತೆಯ ಬಗ್ಗೆ ಮಾತನಾಡಿರುವ ವೈದ್ಯರು, ಕೇಂದ್ರ ಸರಕಾರ ಸದ್ಯ ಕೈಗೊಂಡಿರುವ ಕ್ರಮಗಳಿಂದ 7 ದಿನಗಳಲ್ಲಿ ಸದ್ಯದ ಸ್ಥಿತಿ ನಿವಾರಣೆಯಾಗುವ ವಿಶ್ವಾಸವಿದೆ. ದೇಶದೆಲ್ಲೆಡೆ ಆಮ್ಲಜನಕದ ಬೇಡಿಕೆ ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಇದು ನಿಜಕ್ಕೂ ದೊಡ್ಡ ಸವಾಲು. ಉಕ್ಕು ಕೈಗಾರಿಕೆಗಳು ತಮ್ಮ ಬಳಕೆಗಾಗಿ ಅಗಾಧ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದಿಸುತ್ತವೆ. ಆ ಕ್ಷೇತ್ರದ ಕೈಗಾರಿಕಾ ಸಂಸ್ಥೆಗಳು ಆಮ್ಲಜನಕ ಸಾಗಣೆಗೆ ನೆರವು ನೀಡಬೇಕು. ಇದರಿಂದಾಗಿ ವಾರದಲ್ಲಿ ಆಮ್ಲಜನಕದ ಕೊರತೆ ನೀಗುವ ವಿಶ್ವಾಸವಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next