ಬೆಳ್ತಂಗಡಿ: ಆತ್ಮಕಲ್ಯಾಣಕ್ಕೆ ಆಗಬೇಕಾದ ಕಾರ್ಯವೇ ಧರ್ಮಾಂಗ. ಇದಕ್ಕೆ ಪರಾವಲಂಬನೆ ಅಸಾಧ್ಯ. ಅವರವರ ಧರ್ಮ ಅನುಸರಿಸಿ ಜನ್ಮ ಸಾರ್ಥಕಗೊಳಿಸಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಅವರು ಶನಿವಾರ ಸಂಜೆ ಎಸ್‌ಡಿಎಂ ಕಲಾಭವನ ದಲ್ಲಿ ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೆಬಲ್ ಟ್ರಸ್ಟ್ ವತಿಯ ಅವಿಭಜಿತ ದ.ಕ. ಜಿಲ್ಲಾ ಸ್ವ ಸಹಾಯ ಸಂಘಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸ್ವಯಂಸೇವೆಯಿಂದ ಮೋಕ್ಷದೆಡೆಗೆ ಸಾಗಬಹುದು ಎಂದು ತ್ಯಾಗಸಹಿಷ್ಣು ದಿಗಂಬರ ಮುನಿಗಳು ತೋರಿಸಿಕೊಟ್ಟಿದ್ದಾರೆ. ಯಾವುದೇ ವ್ಯವಹಾರ ಮಾಡಿ ದರೂ ಧರ್ಮದ ಹಾದಿ ಬಿಡಬೇಡಿ. ಧರ್ಮಕ್ಕೆ ಅನುಗುಣವಾಗಿ ವ್ಯವಹಾರ ಮಾಡುವ ಕಾರಣ ದೇಶದಲ್ಲಿ ಜೈನರು ಅತಿಹೆಚ್ಚು ತೆರಿಗೆ ಪಾವತಿಸುವ ವರ್ಗದವರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಸರಕಾರಿ ಸೌಲಭ್ಯ ಪಡೆಯಲು ಮೇಲುಕೀಳೆಂಬ ಮನಸ್ಥಿತಿ ಬೇಡ. ಅಲ್ಪಸಂಖ್ಯಾಕರೆಂಬ ಹಿಂಜರಿಕೆ, ಕೀಳರಿಮೆ, ಸಂಕುಚಿತ ಭಾವ ಬೇಡ. ಯಾರಾದರೂ ಐಎಎಸ್, ಐಪಿಎಸ್ ಮಾಡುವುದಿದ್ದರೆ ಸಹಾಯ ಮಾಡುತ್ತೇನೆ ಎಂದರು.
ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ದ.ಕ. ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ, ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ಉಡುಪಿಯ ಅಜೇಯ್ ಡಿ’ಸೋಜಾ, ಅಬ್ದುಲ್ ಖಾದರ್, ಜೈನ ಸ್ವಯಂ ಸೇವಾ ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಎ.ವಿ. ಶೆಟ್ಟಿ ಧರ್ಮಸ್ಥಳ, ಶಮಂತ್ ಕುಮಾರ್ ಜೈನ್, ಸ್ವಸಹಾಯ ಸಂಘಗಳ ಮೇಲ್ವಿಚಾರಕ ಶಿವರಾಜ್ ಜೈನ್, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಲಹಾ ಸಮಿತಿ ಅಧ್ಯಕ್ಷೆ ಆಶಾಲತಾ, ಮೂಡಬಿದಿರೆಯ ಸುಧೀರ್ ಜೈನ್, ಮೈಸೂರಿನ ಸುಮಾ ದಯಾಕರ್, ಧಾರವಾಡದ ಕಲಘಟಗಿಯ ಸುರೇಶ್, ಮೂಡಿಗೆರೆಯ ಪ್ರಸಿದ್ಧ ಜೈನ್, ಗದಗ ಜಿಲ್ಲಾ ಸಂಚಾಲಕ ಪ್ರಕಾಶ್ ಮುತ್ತಿನ, ಬಾಗಲಕೋಟೆ ಜಿಲ್ಲಾ ಸಂಚಾಲಕ ಪ್ರಕಾಶ್ ಉಪಸ್ಥಿತರಿದ್ದರು.
ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ. ವಸಂತ ಬಂಗೇರ, ಡಾ| ಹೆಗ್ಗಡೆ, ಡಾ| ಎಂ.ಎನ್. ಅವರನ್ನು ಸಮ್ಮಾನಿಸಲಾಯಿತು.
ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ನೇಮಿರಾಜ ಆರಿಗ ಪ್ರಸ್ತಾವಿಸಿದರು. ಶಶಿಕಿರಣ್ ಜೈನ್ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕೊಕ್ರಾಡಿ ನಿರ್ವಹಿಸಿದರು. ವೃಷಭ ಆರಿಗ ವಂದಿಸಿದರು.
2019ರಲ್ಲಿ ಧರ್ಮಸ್ಥಳ ಮಸ್ತಕಾಭಿಷೇಕ 2018 ಫೆಬ್ರವರಿಯಲ್ಲಿ ಶ್ರವಣಬೆಳಗೊಳ ದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯಲಿದ್ದು 2019 ಫೆಬ್ರವರಿಯಲ್ಲಿ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ. ಜುಲೈಯಿಂದ ಸಿದ್ಧತೆಗಳು ನಡೆಯಲಿವೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ