Advertisement

ಹೆಸರು ಕೈಬಿಡುವಾಗ ಸೂಕ್ತ ಕ್ರಮ ಅನುಸರಿಸಿ

06:52 PM Dec 09, 2022 | Team Udayavani |

ಚಿಕ್ಕಬಳ್ಳಾಪುರ: ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವಾಗ ಸೂಕ್ತ ದಾಖಲೆಗಳನ್ನು ಪಡೆದು ಕ್ರಮ ವಹಿಸಬೇಕು ಎಂದು ಮತದಾರರ ಪಟ್ಟಿ ವೀಕ್ಷಕರಾದ ಡಾ. ಏಕ್‌ ರೂಪ್‌ ಕೌರ್‌ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಚುನಾವಣಾ ಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

Advertisement

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲನಾ ಸಭೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಂವಾದ ಸಭೆಯಲ್ಲಿ ಮಾತನಾಡಿದರು.

ಮತದಾರರ ಪಟ್ಟಿಯಿಂದ ಹೆಸರು ತೆಗೆಯುವಾಗ ನಿಯಮಾನುಸಾರ ಎಲ್ಲಾ ಕ್ರಮಗಳನ್ನು ಅನುಸರಿಸಲಾಗಿದೆಯೇ? ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಆ ನಂತರವೇ ಹೆಸರು ಕೈಬಿಡುವ ಪ್ರಕ್ರಿಯೆಯನ್ನು ಅನುಸರಿಸಬೇಕು. ಹೆಸರನ್ನು ಕೈಬಿಡುವ ಕಾರ್ಯದ ಜತೆ-ಜತೆಗೆ ನವ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡುವ ಕಾರ್ಯವನ್ನು ಲೋಪದೋಷವಿಲ್ಲದೆ ನಿರ್ವಹಿಸಬೇಕು. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿದು ಚುನಾವಣಾ ಪ್ರಕ್ರಿಯೆಯಿಂದ, ಮತದಾನದಿಂದ ವಂಚಿತರಾಗಬಾರದು. ಆ ನಿಟ್ಟಿನಲ್ಲಿ ಹೆಚ್ಚು ಜಾಗೃತಿ ವಹಿಸಿ ಪರಿಷ್ಕರಣೆ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಡಿ. 26 ರೊಳಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ 2023ರ ಜ. 5ಕ್ಕೆ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲು ಮುಂದಾಗಿ ಎಂದು ಸೂಚನೆಗಳನ್ನು ನೀಡಿದರು.

ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಜಿಲ್ಲೆಯಲ್ಲಿ ನ. 9 ರಿಂದ ಡಿ. 7ವರೆಗೆ ಜಿಲ್ಲೆಯಲ್ಲಿ ಕೈಗೊಂಡಿರುವ ಮನೆ ಮನೆ ಸಮೀಕ್ಷೆ, ನವ ಮತದಾರರ ನೋಂದಣಿ, ಹೆಸರು ಅಳಿಸುವಿಕೆ, ಸ್ವೀಪ್‌ ಚಟುವಟಿಕೆಗಳು, ಜಾಗೃತಿ ಜಾಥಾಗಳು, ಅಭಿಯಾನಗಳು ಹಾಗೂ ಮತದಾರರ ವಿವರವನ್ನು ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆ ಮಾಡಿರುವ ಸಂಪೂರ್ಣವಾದ ವಿವರವನ್ನು ವೀಕ್ಷಕರಿಗೆ ನೀಡಿದರು.

ಜೆಡಿಎಸ್‌ ಪಕ್ಷದ ಪ್ರತಿನಿಧಿ ಮುನೇಗೌಡ, ಸಿಪಿಎಂ ಪಕ್ಷದ ಪ್ರತಿನಿಧಿ ಮುನಿಕೃಷ್ಣಪ್ಪ, ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌, ಅಪರ ಜಿಲ್ಲಾಧಿಕಾರಿ ಡಾ. ಎನ್‌.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಾ. ಜಿ.ಸಂತೋಷ್‌ ಕುಮಾರ್‌, ಚುನಾವಣಾ ಶಾಖೆಯ ತಹಶೀಲ್ದಾರ್‌ ಮೈಕಲ್‌, ತಹಶೀಲ್ದಾರ್‌ ಶ್ರೀನಿವಾಸ್‌, ಗಣಪತಿಶಾಸ್ತ್ರಿ, ವೈ.ವಿ.ರವಿ ಇತರರಿದ್ದರು.

Advertisement

ಆಕ್ಷೇಪಣೆಗಳಿಗೆ ಮುಕ್ತ ಅವಕಾಶ
ಪರಿಶೀಲನೆಯ ಸಭೆಯ ನಂತರ ಅಧಿಕಾರಿಗಳ ಸಮ್ಮುಖದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ತಮ್ಮ ಆಕ್ಷೇಪಣೆಗಳು, ಅಹವಾಲುಗಳು ಹಾಗೂ ಸಮಸ್ಯೆಗಳು ಏನಾದರೂ ಇದ್ದಲ್ಲಿ ಮುಕ್ತವಾಗಿ ಸಭೆ ಗಮನಕ್ಕೆ ತರಲು ಅವಕಾಶ ನೀಡಿದರು. ಜತೆಗೆ ಮುಂದಿನ ದಿನಗಳಲ್ಲೂ ಆಕ್ಷೇಪಣೆಗಳನ್ನು ನಮ್ಮ ಗಮನಕ್ಕೆ ನೇರವಾಗಿ ಸಲ್ಲಿಸಬಹುದು ಎಂದರು. ಪ್ರತಿಕ್ರಿಯಿಸಿದ ಪ್ರತಿನಿಧಿಗಳು ಮತ
ದಾರರ ಪಟ್ಟಿ ಪರಿಷ್ಕರಣೆ ತಿದ್ದುಪಡಿ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ. ಕೆಲವೇ ಕೆಲವು ಪ್ರಕರಣಗಳಲ್ಲಿ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು ಬೆರಳೆಣಿಕೆಯ ಅಧಿಕಾರಿಗಳು ಮರಣ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡುತ್ತಿದ್ದಾರೆ. ಅಂತಹವರಿಗೆ ಪತ್ರ ಲಭ್ಯವಿಲ್ಲದಿದ್ದಲ್ಲಿ ಮಹಜರ್‌ ಮಾಡಿ ಹೆಸರು ಕೈಬಿಡಲು ಸೂಚಿಸಬೇಕು ಎಂದು ಮನವಿ ಮಾಡಿದರು.

ಶೇ.82.32 ಆಧಾರ್‌ ಜತೆಗೆ ಜೋಡಣೆ
ಕರಡು ಮತದಾರರ ಪಟ್ಟಿ ಅನ್ವಯ ಡಿ. 7ವರೆಗೆ ಜಿಲ್ಲೆಯಲ್ಲಿ ಸುಮಾರು 14,01,492 ಜನಸಂಖ್ಯೆಯಿದ್ದು, 10,13,760 ಮತದಾರರಿದ್ದಾರೆ. ಈ ಪೈಕಿ 6 ಪುರುಷರು, 5,10,437 ಮಹಿಳಾ ಮತದಾರರಿದ್ದಾರೆ. ಡಿ. 7ರವರೆಗೆ ನಮೂನೆ- 6ರಡಿ 18903 ಅರ್ಜಿಗಳು, ನಮೂನೆ- 7ರಡಿ 8614 ಅರ್ಜಿಗಳು, ನಮೂನೆ- 8ರಡಿ 17462, ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ವಿಲೇವಾರಿ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆ ಶೇ.82.32 ಮತದಾರರ ವಿವರವನ್ನು ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆ ಮಾಡಲಾಗಿದ್ದು, ಬಾಕಿ ಮತದಾರರ ವಿವರವನ್ನು ಆಧಾರ್‌ ಸಂಖ್ಯೆಯೊಂದಿಗೆ ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next