Advertisement

ನ್ಯಾಯಸಮ್ಮತ ನಡವಳಿಕೆ ಅನುಸರಿಸಿ

11:47 AM Sep 09, 2018 | Team Udayavani |

ಕಲಬುರಗಿ: ಸಮಾಜದಲ್ಲಿ ಎಲ್ಲದಕ್ಕೂ ನ್ಯಾಯಾಲಯದಿಂದ ನ್ಯಾಯ ಬಯಸುವುದಕ್ಕಿಂತ ನ್ಯಾಯ ಸಮ್ಮತವಾಗಿ ನಡೆಯುವುದೇ ಬಹು ಮುಖ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ಹೇಳಿದರು.

Advertisement

ಶನಿವಾರ ಹೈಕೋರ್ಟ್‌ ಕಲಬುರಗಿ ಪೀಠದ ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಮ್ಮವರು ಬೇಸಗೊಂಡರೆ ಶುಭ ಲಗ್ನವೆನ್ನಿರಯ್ಯ.. ಎನ್ನುವಂತೆ ಕಲಬುರಗಿ ಹೈಕೋರ್ಟ್‌ ಪೀಠಕ್ಕೆ ಹಾಗೂ ಈ ಭಾಗಕ್ಕೆ ಒಳ್ಳೆಯ ಕಾಲ ಬಂದಿದೆ. ನ್ಯಾಯ ಸಮ್ಮತವಾಗಿ ನಡೆದಿದ್ದರೆ ಸಹೋದರಿಗೆ ಆಸ್ತಿಯಲ್ಲಿ ಪಾಲು ಕೊಡುವಂತಹ ಕಾಯ್ದೆ ಕಠಿಣವಾಗಿ ಜಾರಿ ತರುವುದು ಎದುರಾಗುತ್ತಿರಲಿಲ್ಲ. ಬಹು ಮುಖ್ಯವಾಗಿ ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ, ಅನ್ಯರಿಗೆ ಅಸಹ್ಯ ಪಡೆಬೇಡ.. ಎಂಬ ಬಸವಣ್ಣನವರ ನುಡಿಯಂತೆ ನಡೆದರೆ ಸಮಾಜದಲ್ಲಿ ಅನ್ಯಾಯದ ಘಟನೆಗಳಿಗೆ ಅವಕಾಶ ಇಲ್ಲದಂತಾಗುತ್ತದೆ ಎಂದರು.

ನಾವೆಲ್ಲರೂ ನ್ಯಾಯ ಬಲ್ಲವರು. ಎಲ್ಲರೂ ನ್ಯಾಯ ಸಮ್ಮತ ನಡವಳಿಕೆಯಿಂದ ನಡೆದರೆ ಯಾರೂ ನ್ಯಾಯಾಲಯಕ್ಕೆ ಹೋಗುವ ಅವಶ್ಯಕತೆ ಇರುವುದಿಲ್ಲ. ನ್ಯಾಯ ಕೇಳುವವರ ಮನೆ ಬಾಗಿಲಿಗೆ ನ್ಯಾಯ ಒಯ್ಯುವುದು ದೊಡ್ಡ ಸಾಧನೆಯಾಗಿದೆ.

ನ್ಯಾಯಾಲಯಗಳು ಇರುವುದು ಜನರಿಗಾಗಿ, ಕೋರ್ಟ್‌ಗಾಗಿ ಜನರು ಅಲ್ಲ. ಆದ್ದರಿಂದ ನ್ಯಾಯ ಕೇಳಿ ಬರುವ ಕಕ್ಷಿದಾರರಿಗೆ ಸೂಕ್ತ ನ್ಯಾಯದ ತಿಳಿವಳಿಕೆ ನೀಡಬೇಕು ಎಂದರು. ಕರ್ನಾಟಕ ಹೈಕೋರ್ಟ್‌ ಕಲಬುರಗಿ ಪೀಠದಲ್ಲಿ ಹೆಚ್ಚಿನ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿವೆ. ಮುಂದಿನ ಐದಾರು ತಿಂಗಳುಗಳಲ್ಲಿ ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳನ್ನು ನೇಮಿಸುವ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅನುಕೂಲ ಮಾಡಿಕೊಡಲಾಗುತ್ತಿದೆ. ಕಲಬುರಗಿ ಹೈಕೋರ್ಟ್‌ ಪೀಠವು ಹತ್ತು ವರ್ಷದ ಮಗುವಾಗಿದ್ದು, ಇದನ್ನು ಇನ್ನೂ ಬೆಳೆಸಬೇಕಾಗಿದೆ.

ನ್ಯಾಯಮೂರ್ತಿಗಳಾದ ಎನ್‌.ಕೆ. ಜೈನ್‌, ಸಿರಿಯಾಕ್‌ ಜೋಸೆಫ್‌ ಹಾಗೂ ಎನ್‌.ಕೆ. ಪಾಟೀಲ ಅವರು ಕಲಬುರಗಿ ಹೈಕೋರ್ಟ ಪೀಠ ಪ್ರಾರಂಭವಾಗಲು ಕಾರಣೀಕರ್ತರಾಗಿದ್ದರೆ, ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಅವರು ಈ ಪೀಠವನ್ನು ಗುರುತಿಸಿ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದರು.

Advertisement

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ದಶಮಾನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ದೂರ ಮಾಡಲು ನ್ಯಾಯಾಲಯಗಳು ಕೆಲಸ ನಿರ್ವಹಿಸುತ್ತವೆ. ವಕೀಲರು, ನ್ಯಾಯಾಧೀಶರು ತಮ್ಮ ಅತ್ಯುನ್ನತ ಸೇವೆ ಸಲ್ಲಿಸುವ ಮೂಲಕ ಸಾರ್ವಜನಿಕರಿಗೆ ಸಹಾಯ ಹಸ್ತ ನೀಡಬೇಕು. ನಮ್ಮ ಶ್ರಮದಲ್ಲಿ ಸಮರ್ಪಣಾ ಭಾವದ ಅವಶ್ಯಕತೆಯಿದೆ ಎಂದರು.

ಕಲಬುರಗಿ ಹೈಕೋರ್ಟ್‌ ಪೀಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ವಕೀಲರು ಹೆಚ್ಚಿನ ವಿಷಯಗಳನ್ನು ಕಲಿಯಲು ಇಲ್ಲಿ ಅವಕಾಶಗಳಿದ್ದು, ಸದ್ಯ ವಕೀಲಿ ವೃತ್ತಿಯ ಪರಿಪಕ್ವತೆಗಾಗಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರಾದರೂ ವಕೀಲಿ ವೃತ್ತಿ ಕಲೆಯಬೇಕಾದರೆ ಕಲಬುರಗಿಗೆ ಹೋಗಬೇಕು ಎಂಬ ಮನೋಭಾವ ಬೆಳೆಯುವಂತಾಗಬೇಕು. ಹೈಕೋರ್ಟ್‌ ನಲ್ಲಿರುವ ಎಲ್ಲ ನ್ಯಾಯಮೂರ್ತಿಗಳು, ವಕೀಲರು, ಸಿಬ್ಬಂದಿ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಬದ್ಧತೆ ತೋರಿಸಬೇಕು ಎಂದರು.

ರಾಜ್ಯ ಸರ್ಕಾರದ ಅಡ್ವೋಕೇಟ್‌ ಜನರಲ್‌ ಉದಯ ಹೊಳ್ಳಾ ಮಾತನಾಡಿ, ವಿದೇಶಗಳ ಸುಪ್ರೀಂಕೋರ್ಟ್‌ಗಳಲ್ಲಿ ಪ್ರತಿ ವರ್ಷ 100 ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿದ್ದರೆ, ನಮ್ಮ ರಾಜ್ಯದಲ್ಲಿ ಪ್ರತಿ ತಿಂಗಳು 100 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ.

ನ್ಯಾಯಾಧೀಶರು ಮತ್ತು ವಕೀಲರು ಹೈಕೋರ್ಟ್‌ ಪೀಠದ ಅವಕಾಶ ಉಪಯೋಗಿಸಿಕೊಂಡು ಸೇವೆ ನೀಡಬೇಕು ಎಂದು ಹೇಳಿದರು. ಕಲಬುರಗಿ ಹೈಕೋರ್ಟ್‌ ಪೀಠದ ಗ್ರಂಥಾಲಯಕ್ಕೆ ಕರ್ನಾಟಕ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಿರುವ 1915-2000ರವರೆಗಿನ ಎಲ್ಲ ಪ್ರಕರಣಗಳ ಸಂಪೂರ್ಣ ದಾಖಲೆಗಳನ್ನು ನೀಡಲಾಗುವುದು. ಇದು ಕಲಿಕಾ ವಕೀಲರಿಗೆ ಹಾಗೂ ನ್ಯಾಯಮೂರ್ತಿಗಳಿಗೆ ಹೆಚ್ಚಿನ ಅನುಕೂಲವಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next