ಹಾನಗಲ್ಲ: ಜೀವನದ ಪ್ರತಿಯೊಂದು ಕ್ಷಣವೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿಯೇ ಶ್ರಮಿಸಿದ ಡಾ| ಎಸ್.ರಾಧಾಕೃಷ್ಣನ್, ಒಬ್ಬ ಆದರ್ಶ ಶಿಕ್ಷಕನಲ್ಲಿರಬೇಕಾದ ಶಾಶ್ವತ ತತ್ವ, ಮೌಲ್ಯಗಳಿಗೆ ಚಿರಂತನ ಸಾಕ್ಷಿಯಾಗಿದ್ದಾರೆ. ಅವರ ತತ್ವದ ಅನುಷ್ಠಾನವೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗುರು ನಮನ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದ್ದಾರೆ.
ಶನಿವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಪತ್ರಿಕಾ ಹೇಳಿಕೆ ಮೂಲಕ ಶುಭಾಶಯ ಕೋರಿರುವ ಅವರು, ಸೆ.5 ನಮ್ಮ ದೇಶದ ಸರ್ವಶ್ರೇಷ್ಠ ವ್ಯಕ್ತಿ, ಶಕ್ತಿ, ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಗೌರವಾನ್ವಿತ ಶಿಕ್ಷಕರಿಗೆ ನಮನ ಸಲ್ಲಿಸುವ ಹಾಗೂ ಶಿಕ್ಷಕರನ್ನು ಸ್ಮರಿಸುವ ಸಂತಸದ ದಿನ. ನಮ್ಮ ಬಾಲ್ಯದಿಂದಲೂ ಪ್ರಭಾವ ಬೀರಿದ ವ್ಯಕ್ತಿ ಎಂದರೆ ಶಿಕ್ಷಕ ಎಂದು ಹೇಳುತ್ತೇವೆ. ಕಾರಣ ಅಂತಹ ಮಾಂತ್ರಿಕ ಶಕ್ತಿ ಶಿಕ್ಷಕರಲ್ಲಿದೆ. ಆ ಶಿಕ್ಷಕರ ನಡೆ-ನುಡಿ, ಶಿಸ್ತು, ವರ್ತನೆ, ಸಮಯ ಪ್ರಜ್ಞೆ, ಬೋಧನಾ ಕೌಶಲ್ಯ, ಹಾವ-ಭಾವ, ತಾಳ್ಮೆ, ಚಿಂತನೆ, ಪ್ರಾಮಾಣಿಕತೆ, ತತ್ವಜ್ಞಾನ ಇವುಗಳು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದವು. ಡಾ| ಎಸ್.ರಾಧಾಕೃಷ್ಣನ್ ಅವರು ಶಿಕ್ಷಕ ವರ್ಗಕ್ಕೆ ಸಮಾಜದಲ್ಲಿ ಗೌರವದ ಸ್ಥಾನಮಾನ ತಂದಿತ್ತ ಮಹಾನ್ ಶಿಕ್ಷಕರಾಗಿದ್ದರು ಎಂದು ತಿಳಿಸಿದ್ದಾರೆ.
ಶಿಕ್ಷಕರು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅವರ ಕೃತಿಗಳನ್ನು ಓದಿ ಅವರ ತತ್ವಗಳನ್ನು ಪಾಲಿಸುವ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಶ್ರದ್ಧೆ ಉಳ್ಳವನಿಗೆ ಜ್ಞಾನ ಲಭಿಸುತ್ತದೆ. ಮುಂದೆ ಗುರಿ ಇರಬೇಕು, ಹಿಂದೆ ಒಬ್ಬ ಗುರು ಇರಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಶಿಕ್ಷಕ ಜಾಗೃತನಾಗಿ ಶಿಕ್ಷಣ ವ್ಯವಸ್ಥೆಯನ್ನೇ ಅರ್ಥಪೂರ್ಣ ಮಾಡಬೇಕಾಗಿದೆ. ಶಿಕ್ಷಕನಾದವನಿಗೆ ಮಗು, ಶಾಲೆ, ಸಮಾಜ, ಪರಿಸರಗಳ ಬಗ್ಗೆ ಸರಿಯಾದ ಅರಿವು ಇರಬೇಕು. ಬದುಕಿನಲ್ಲಿ ಬದುಕುವ ದಾರಿಯ ಮಾರ್ಗದರ್ಶನ ನೀಡುವುದೇ ಶಿಕ್ಷಣ ಎಂದು ಶಾಸಕರು ತಿಳಿಸಿದ್ದಾರೆ.
ಗುರು ವ್ಯಕ್ತಿಯಲ್ಲ-ಶಕ್ತಿ: ಸಂಸದ ಉದಾಸಿ : ಹಾನಗಲ್ಲ: ಯಾವುದೇ ಒಂದು ದೇಶದ ಪ್ರಗತಿ ಮತ್ತು ವಿಕಾಸ ಆ ದೇಶದ ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ತರಗತಿಯಲ್ಲಿ ಪಾಠದ ವಿಷಯವನ್ನು ಒಪ್ಪಿಸಿದವರು ಮಾತ್ರ ಶಿಕ್ಷಕರಲ್ಲ. ವ್ಯಕ್ತಿಗಳ ಅಪೇಕ್ಷಿತ ವರ್ತನೆಗಳಲ್ಲಿ ಬದಲಾವಣೆ ತಂದವರನ್ನೂ ನಾವು ಗುರುಗಳ ಸ್ಥಾನದಲ್ಲಿ ಕಾಣುತ್ತೇವೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ಮೂಲಕ ಶಿಕ್ಷಕರ ದಿನಾಚರಣೆಯ ಶುಭಾಶಯ ತಿಳಿಸಿರುವ ಅವರು, ಗುರು ಎಂದರೆ ವ್ಯಕ್ತಿಯಲ್ಲ. ಅದೊಂದು ಶಕ್ತಿ. ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೇ ಗುರು. ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸುವಂತೆ ತಿಳಿಸಿದ್ದರು. ಮನಸ್ಸು ಮತ್ತು ಆತ್ಮಗಳತರಬೇತಿಯೇ ಶಿಕ್ಷಣ. ವೈಜ್ಞಾನಿಕ ಪ್ರವೃತ್ತಿಯ ವಿಕಾಸವೇ ಶಿಕ್ಷಣ. ಪ್ರಜಾಪ್ರಭುತ್ವಕ್ಕಾಗಿ ಶಿಕ್ಷಣ ಮತ್ತು ಸ್ವಯಂ ಶಿಸ್ತು, ಸ್ತ್ರೀ-ಪುರುಷರಿಗೆ ಸಮಾನ ಶಿಕ್ಷಣ ರಾಧಾಕೃಷ್ಣನ್ ಅವರ ಶೈಕ್ಷಣಿಕ ವಿಚಾರವಾಗಿದ್ದವು ಎಂದು ತಿಳಿಸಿದ್ದಾರೆ.
ಮಕ್ಕಳಿಗೆ ಮೊದಲ ಗುರು ತಾಯಿಯಾದರೆ, ಶಿಕ್ಷಕ ಎರಡನೇ ಗುರುವಾಗಿದ್ದಾನೆ. ದೇಶದ ಪ್ರತಿ ವಿದ್ಯಾವಂತ ಸಾಧಕರ ಹಿಂದೆ ಶಿಕ್ಷಕರ ಶ್ರಮ ಅಡಗಿದೆ. ಶಿಕ್ಷಕರು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಬೋಧನೆ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳು ವಿಷಯಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಗೈಡುಗಳ ಸಹಾಯವಿಲ್ಲದೆ ಉತ್ತರಿಸಲು ಸಾಧ್ಯವಾಗುತ್ತದೆ. ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ಶಿಕ್ಷಕರು ವೃತ್ತಿಯ ಘನತೆ ಅರಿತುಕೊಂಡು ಕೆಲಸ ಮಾಡಬೇಕು. ಐಸೆನ್ ಹೋವರ್ ಹೇಳಿದಂತೆ, ಅಂಜಿಕೆ-ಅಪನಂಬಿಕೆಗಳು ತುಂಬಿರುವ ಈ ಜಗತ್ತಿನಲ್ಲಿ ಪರಸ್ಪರ ಗೌರವ ಹಾಗೂ ವಿಶ್ವಾಸಾರ್ಹ ಸ್ನೇಹಗಳನ್ನು ಬೆಳೆಸುವುದೇ ಶಿಕ್ಷಣದ ಗುರಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.