ಮುಂಬಯಿ, ಡಿ. 10: ಮೀರಾರೋಡ್ ಭಾರತಿ ಪಾರ್ಕ್ ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಇದರ 24ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿಯ ಪಡಿಪೂಜೆಯು ಡಿ. 5ರಂದು ಸಂಜೆ ಮೀರಾರೋಡ್ ಪೂರ್ವದ ಭಾರತಿ ಪಾರ್ಕಿನ ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಇದೇ ಸಂದರ್ಭದಲ್ಲಿ ಗುರುಸ್ವಾಮಿ ಜಯಶೀಲ ತಿಂಗಳಾಯ ಅವರ ಪೌರೋಹಿತ್ಯದಲ್ಲಿ ಭಜನೆ, ಶ್ರೀ ಅಯ್ಯಪ್ಪ ಸ್ವಾಮಿಗೆ ಪಡಿಪೂಜೆ, ಕರ್ಪೂರಾರತಿ, ಶ್ರೀ ಲಕ್ಷ್ಮೀನಾರಾಯಣ ಹಾಗೂ ಮಂದಿರದ ಪರಿವಾರ ದೇವರಿಗೆ ಮಹಾಮಂಗಳಾರತಿ ನಡೆಯಿತು.
ಸೇವಾರ್ಥಿಗಳನ್ನು ಗೌರವಿಸಿ ಭಕ್ತರಿಗೆ ಪ್ರಸಾದ ವಿತರಿಸಿ ಮಾತನಾಡಿದ ಗುರುಸ್ವಾಮಿ ಜಯಶೀಲ ತಿಂಗಳಾಯ ಅವರು, ಸರಕಾರದ ಷರತ್ತುಬದ್ಧ ಸೂಚನೆಯಿಂದ ಶಬರಿಮಲೆ ಶ್ರೀ ಸನ್ನಿಧಿಗೆ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ಅನಾನುಕೂಲವಾಗಿದ್ದಲ್ಲಿ ಅಂಥವರು ಮೀರಾರೋಡ್ ಪೂರ್ವದ, ಅಯ್ಯಪ್ಪ ಮಾರ್ಗ, ಶಾಂತಿ ನಗರ ಸೆಕ್ಟರ್- 2ರ ಎದುರುಗಡೆ ಇರುವ ಅಯ್ಯಪ್ಪ ಮಂದಿರದಲ್ಲಿ 18 ಮೆಟ್ಟಲುಗಳನ್ನು ಹತ್ತಿ ತುಪ್ಪದ ಅಭಿಷೇಕ, ಅರವಣ ಪಾಯಸ, ಅಪ್ಪ ಪ್ರಸಾದ ಮೊದಲಾದ ಹರಕೆ ಸಲ್ಲಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಬಹುದು. ಆಡಳಿತ ಮಂಡಳಿಯ ನಿರ್ದೇಶನದಂತೆ ಭಕ್ತರು ಮುಂಚಿತವಾಗಿ ಹೆಸರನ್ನು ನೊಂದಾಯಿಸಬೇಕು. ಬೆಳಗ್ಗೆ 7 ರಿಂದ 11ರ ತನಕ ಸಮಯ ನಿಗದಿಯಾಗಿದ್ದು, ಭಕ್ತರ ಸಂಖ್ಯೆ 50ಕ್ಕೆ ಮೀರಿರಬಾರದು. ಲಘು ಉಪಹಾರವನ್ನು ಮಂದಿರದ ವತಿಯಿಂದ ಕಲ್ಪಿಸಲಾಗಿದೆ ಎಂದು ಹೇಳಿದ ಅವರು ಪ್ರತಿ ಸಂದರ್ಭದಲ್ಲಿ ಸ್ವಚ್ಛತೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಇನ್ನಿತರ ಮಾರ್ಗಸೂಚಿಗಳನ್ನು ಅನುಸರಿಸಿಕೊಳ್ಳಬೇಕು ಎಂದು ತಿಳಿಸಿ ಶುಭ ಹಾರೈಸಿದರು.
ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಸ್ವಾಮಿಗಳಾದ ಶೈಲೇಶ್ ಪಾಟೀಲ್, ಅಖೀಲೇಶ್ ಉಪಾಧ್ಯಾಯ, ಮಾಧವ ಸಿ. ಕೋಟ್ಯಾನ್, ಪ್ರವೀಣ್ ಶೆಟ್ಟಿ, ಸುಧೀರ್ ಪುತ್ರನ್, ಲೀಲಾಧರ್ ಅಂಚನ್, ಸಿ. ಎನ್. ಪೂಜಾರಿ, ಸಂತೋಷ್ ಶೆಟ್ಟಿ, ಗಣೇಶ್ ದೇವಾಡಿಗ, ಸತೀಶ್ ಸೇರಿಗಾರ್, ಸ್ವಪ್ನಿಲ್ ಸಿ. ಪೂಜಾರಿ, ಸಂತೋಷ್ ಶೆಟ್ಟಿ ವಿರಾರ್, ನವೀನ್ ಸಾಧುಲ್, ರಾಜೇಶ್ ಪೂಜಾರಿ, ಜಯಂತ್ ಶೆಟ್ಟಿ ಸಹಕರಿಸಿದರು. ಭಕ್ತರು ಸರಕಾರದ ನಿಯಮದಂತೆ ಪ್ರಸಾದ ಸ್ವೀಕರಿಸಿದರು.
ಶಬರಿಮಲೆ ಮಂದಿರದ ತದ್ರೂಪ :
ಮೀರಾರೋಡ್ ಪೂರ್ವದ ಶ್ರೀ ಅಯ್ಯಪ್ಪ ಮಾರ್ಗ, ಶಾಂತಿ ನಗರ ಸೆಕ್ಟರ್ 2ರ ಎದುರುಗಡೆ ಇರುವ ಅಯ್ಯಪ್ಪ ಮಂದಿರವು ಶಬರಿಮಲೆಯಲ್ಲಿರುವ ಶ್ರೀ ಸನ್ನಿಧಿಯ ಅಯ್ಯಪ್ಪ ಮಂದಿರದ ತದ್ರೂಪವಾಗಿ ವಾಸ್ತುಶಾಸ್ತ್ರದಂತೆ ನಿರ್ಮಾಣಗೊಂಡಿದೆ. ಅಯ್ಯಪ್ಪ ಸ್ವಾಮಿಯ ಮೂರ್ತಿ, ಧ್ವಜಸ್ತಂಭ, ಹದಿನೆಂಟು ಮೆಟ್ಟಲುಗಳು ಶ್ರೀಕ್ಷೇತ್ರದ ಮಣ್ಣಿನೊಂದಿಗೆ ರಚಿತವಾಗಿದೆ. ಸನ್ನಿಧಿಯ ತಂತ್ರಿಯವರೇ ಮೀರಾರೋಡ್‌ಗೆ ಆಗಮಿಸಿ ಮಂದಿರವನ್ನು ಲೋಕಾರ್ಪಣೆ ಮಾಡಿದ್ದಾರೆ. ಕಳೆದ ವರ್ಷ ಸುಮಾರು 200 ಮಂದಿ ಭಕ್ತರು ತುಪ್ಪದ ಅಭಿಷೇಕ ಮಾಡಿಸಿ ವ್ರತವನ್ನು ಪೂರ್ಣಗೊಳಿಸಿದ್ದಾರೆ.
-ಚಿತ್ರ – ವರದಿ: ರಮೇಶ ಅಮೀನ್