Advertisement

ಬಸವಣ್ಣನ ತತ್ವಾದರ್ಶ ಪಾಲಿಸಿ

04:47 PM May 13, 2019 | Suhan S |

ತಿಪಟೂರು: ಬಸವಣ್ಣನವರನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೇ, ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸುವ ಮೂಲಕ ಬಸವ ಜಯಂತಿಯನ್ನು ಅರ್ಥಪೂರ್ಣವಾಸಬೇಕು ಎಂದು ಸಾಹಿತಿ ಪ್ರೊ.ಟಿ.ಎಸ್‌.ನಾಗರಾಗಶೆಟ್ಟಿ ತಿಳಿಸಿದರು.

Advertisement

ನಗರದ ನಡೆ ನುಡಿ ಸಂಘಟನೆಯಿಂದ ನಡೆದ ‘ನಮ್ಮ ನಡೆ ನುಡಿಯಲ್ಲಿ ಬಸವಣ್ಣ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಚನಗಳು ಮನಸ್ಸನ್ನು ತಟ್ಟಬೇಕು: ಬಸವಣ್ಣನವರ ಜಯಂತಿಯಂದು ಮಾತ್ರ ಅವರನ್ನು ನೆನಪಿಸಿಕೊಳ್ಳದೇ, ತಮ್ಮ ನಿತ್ಯ ಬದುಕಿನಲ್ಲಿ ಬಸವಣ್ಣನವರ ತತ್ವಗಳನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಿವಶರಣರ ಸಾಮಾಜಿಕ ಚಿಂತನೆಗಳು ಅವರ ಸರಳ ವಚನಗಳ ಮೂಲಕ ಮನೆ ಮನಗಳನ್ನು ಮುಟ್ಟಿವೆ. ಆದರೆ, ಅವು ಮನಸ್ಸನ್ನು ತಟ್ಟಬೇಕು. ಆತ್ಮಸಾಕ್ಷಿಯನ್ನು ಜಾಗೃತಗೊಳಿಸಬೇಕು ಎಂದು ತಿಳಿಸಿದರು.

ಬಸವಣ್ಣ ಭಾಷಣಕ್ಕೆ ಸೀಮಿತ ಬೇಡ: ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಬಾಲಕೃಷ್ಣ ಮಾತನಾಡಿ, ಬಸವಣ್ಣ ಕೇವಲ ಭಾಷಣದ ವಸ್ತುವಾಗಿ ಸೀಮಿತವಾಗುತ್ತಿದ್ದಾರೆ. ಆಚರಣೆಯಲ್ಲಿ ಮಾತ್ರ ಇಂದಿಗೂ ಬಹಳಷ್ಟು ತಪ್ಪುಗಳು ನಿತ್ಯ ಗೋಚರಿಸುತ್ತವೆ. ಸಮಾಜದಲ್ಲಿ ಅಸಮಾನತೆ, ತಾರತಮ್ಯ ಎಲ್ಲೆಡೆ ಉಳಿದಿದೆ. ಅಂತಃಶುದ್ಧಿಯಿಂದ ಶರಣರ ವಿಚಾರಗಳನ್ನು ಸಾಕ್ಷೀಕರಿಸಿಕೊಂಡರೆ ಮಾತ್ರ ಸಮೃದ್ಧತೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ತಳ ಸಮುದಾಯಗಳ ಕೊಡುಗೆ ಅಪಾರ: ತಾಲೂಕು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ.ಪರಮೇಶ್ವರಯ್ಯ ಮಾತನಾಡಿ, ದಲಿತರನ್ನು ಕುಡಿಯುವ ನೀರಿನ ಬಾವಿ ಮುಟ್ಟಿಸದಿದ್ದ ದಿನಗಳನ್ನು ಕಂಡಿದ್ದೇವೆ. ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಅಪಾರ ಕೊಡುಗೆ ನೀಡುತ್ತಿರುವ ತಳ ಸಮುದಾಯಗಳು ಸಮಾಜದ ಸ್ವಾಸ್ಥ ್ಯಕ್ಕೆ ಅಪಾರ ಕೊಡುಗೆ ನೀಡಿವೆ. ಆದರೆ, ಆ ಸಮುದಾಯಗಳನ್ನು ಕೇವಲ ದುಡಿಸಿಕೊಳ್ಳಲು ಬಳಸಿಕೊಂಡು ತಾರತಮ್ಯ ಎಸಗುವ ಮನಸ್ಥಿತಿ ದೂರವಾಗಬೇಕು ಎಂದು ತಿಳಿಸಿದರು.

Advertisement

ಅಸಮಾನತೆ ನೀಗಲಿ: ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿ, ಹನ್ನೆರಡನೆ ಶತಮಾನದ ಮಹಾಮನೆ ಪರಿಕಲ್ಪನೆ ಇಂದಿಗೂ ಅಗತ್ಯವಿದೆ. ಎಲ್ಲಾ ಜಾತಿ, ಜನಾಂಗಗಳನ್ನು ಒಟ್ಟಿಗೆ ಕರೆದೊಯ್ಯುವ ಶಕ್ತಿ ಶರಣರ ವಿಚಾರಗಳಲ್ಲಿವೆ. ಪ್ರತಿ ಊರಿನಲ್ಲೂ ಮಹಾಮನೆ ಪ್ರತಿರೂಪಗಳು ಸೃಷ್ಟಿಯಾದರೆ ಅಸಮಾನತೆಗೆ ಆಸ್ಪದ ಇರುವುದಿಲ್ಲ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ: ಕತೆಗಾರ ಎಸ್‌. ಗಂಗಾಧರಯ್ಯ ಮಾತನಾಡಿ, ನಾವು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಶಿಕ್ಷಕರು ಕೂಡ ಮಕ್ಕಳ ಬಗ್ಗೆ ತಾರತಮ್ಯ ಮಾಡುತ್ತಿದ್ದರು. ಈಗ ಕಾಲ ಬದಲಾದರೂ ಸಮಾಜದ ಮನಸ್ಥಿತಿ ಬದಲಾಗಿಲ್ಲ. ಶಿಕ್ಷಕರಾದರೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಾ ಬಂದರೆ ಮಾತ್ರ ಮುಂದಾದರೂ ಪರಿವರ್ತನೆ ಸಾಧ್ಯ ಎಂದರು.

ಸಂವಾದದಲ್ಲಿ ಪ್ರಾಂಶುಪಾಲ ಎಂ.ಡಿ.ಶಿವಕುಮಾರ್‌, ದಲಿತ ಮುಖಂಡರಾದ ರಂಗಸ್ವಾಮಿ, ಬಜಗೂರು ಮಂಜುನಾಥ್‌, ಎಸ್‌.ಎ.ಶ್ರೀನಿವಾಸ್‌, ರಂಗಕರ್ಮಿ ಸತೀಶ್‌, ತಿಪಟೂರು ಕೃಷ್ಣ, ಉಜ್ಜಜ್ಜಿ ರಾಜಣ್ಣ, ಅಲ್ಲಾಬಕಾಶ್‌, ಚೆನ್ನೇಗೌಡ, ಗೋವಿಂದರಾಜು, ಸಂತೋಷ್‌, ಆನಂದ್‌, ಸಾ.ಚ.ಜಗದೀಶ್‌, ಡಾ.ರಘುಪತಿ, ಶ್ರೀಕಾಂತ್‌ ಕೆಳಹಟ್ಟಿ, ದೇವರಾಜ್‌, ಶೈಲಜಾ, ಸಂಘಮಿತ್ರೆ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next