ವಿಭಿನ್ನ, ವಿಶೇಷ ನೆಲೆಗಟ್ಟಿನಲ್ಲಿ ಹೊಸ ಸಿನೆಮಾಗಳು ಮೂಡುವ ಕೋಸ್ಟಲ್‌ವುಡ್ ನಲ್ಲಿ ಈಗ ಪೌರಾಣಿಕ ಲೋಕವೊಂದು ಸೃಷ್ಟಿಯಾಗಿದೆ. ಕಾಮಿಡಿ ಹಾಗೂ ಸಂದೇಶಭರಿತ ಸಿನೆಮಾಗಳೊಂದಿಗೆ ಸೆಂಚುರಿಯ ಗಡಿಯ ಅಂಚಿನಲ್ಲಿರುವ ಕೋಸ್ಟಲ್‌ವುಡ್ ಜನಪದೀಯ, ಐತಿಹಾಸಿಕ ಕಥೆಯಾಧಾರಿತ ಸಿನೆಮಾಗಳಿಗೆ ತೆರೆದುಕೊಳ್ಳುತ್ತಿದೆ. ಈಗಾಗಲೇ ಕೆಲವು ಸಿನೆಮಾಗಳು ರಿಲೀಸ್ ಆಗಿ ಹೊಸ ಸಾಹಸಗಾಥೆ ಬರೆದಿದ್ದರೆ, ಇನ್ನೂ ಕೆಲವು ಸಿನೆಮಾಗಳು ಹೊಸ ಮನ್ವಂತರ ಸೃಷ್ಟಿಸುವ ತವಕದಲ್ಲಿವೆ.
ಸೂರ್ಯೋದಯ ಪೆರಂಪಳ್ಳಿ ನಿರ್ದೇಶನದ ‘ದೇಯಿ ಬೈದ್ಯೆತಿ- ಗೆಜ್ಜೆಗಿರಿ ನಂದನೊಡು’ ಸಿನೆಮಾ ಇದೇ ಗೆಟಪ್‌ನಲ್ಲಿ ಸಿದ್ಧಗೊಂಡು ಸದ್ದು ಮಾಡುತ್ತಿದೆ. ಹೆಚ್ಚಾ ಕಡಿಮೆ 1 ಕೋಟಿ ರೂ. ಗಳಿಗೆ ಹೆಚ್ಚು ಬಜೆಟ್‌ನಲ್ಲಿ ರೆಡಿಯಾದ ಸಿನೆಮಾವಿದು. ಸುಮಾರು 500 ವರ್ಷಗಳ ಹಿಂದೆ ನಡೆದ ನೈಜ ಘಟನೆಯನ್ನು ಆಧರಿಸಿ ಚಿತ್ರವನ್ನು ತಯಾರಿಸಲಾಗಿದೆಯಂತೆ. ಚಿತ್ರದ ನಿರ್ಮಾಣ, ಸಾಹಿತ್ಯ, ಚಿತ್ರಕಥೆ, ನಿರ್ದೇಶನ, ಸಂಭಾಷಣೆ ಸೂರ್ಯೋದಯ ಅವರೇ ನಿರ್ವಹಿಸಿದ್ದಾರೆ. ಉಮೇಶ್ ಪೂಜಾರಿ ಬೆಳ್ತಂಗಡಿ ಕಾರ್ಯಕಾರಿ ನಿರ್ಮಾಪಕರು.
ಚಿತ್ರಕ್ಕೆ ಭಾಸ್ಕರ ರಾವ್ ಸಂಗೀತ ನೀಡಿದ್ದು, ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ರವಿ ಸುವರ್ಣ, ಹರೀಶ್ ಕಕ್ಕುಂಜೆ ಅವರು ಛಾಯಾಗ್ರಹಣ, ಮೋಹನ್ ಸಂಕಲನ ಮಾಡಿದ್ದಾರೆ. ದಿನೇಶ್ ಸುವರ್ಣ, ದಿವಿ ಪೂಜಾರಿ ಕಲಾ ನಿರ್ದೇಶಕರು.
ತಾರಾಗಣದಲ್ಲಿ ಸೀತಾ ಕೋಟೆ, ಅಮಿತ್ ರಾವ್, ಚೇತನ್ ರೈ ಮಾಣಿ, ಶಿವಧ್ವಜ್, ಸೂರ್ಯೋದಯ್, ರವಿ ಭಟ್, ಪೂರ್ಣಿಮಾ, ಪವಿತ್ರ ಕಟಪಾಡಿ ಮುಖ್ಯಭೂಮಿಕೆಯಲ್ಲಿದ್ದಾರೆ. ಹಿರಿಯರಾದ ಬನ್ನಂಜೆ ಬಾಬು ಅಮೀನ್, ದಾಮೋದರ ಕಲ್ಮಾಡಿ, ಚೆಲುವರಾಜ ಪೆರಂಪಳ್ಳಿ, ಗಣನಾಥ ಎಕ್ಕಾರು, ಬಾಬುಶಿವ ಪೂಜಾರಿ ಮುಂಬಯಿ ಸಹಿ ತ ಹಲವು ಶ್ರೇಷ್ಠ ಸಂಶೋಧಕರ ಬಳಿ ಚರ್ಚಿಸಿ ಚಿತ್ರಕಥೆ ರೂಪಿಸಲಾಗಿದೆ. ಪಾಡ್ದನದ ನುಡಿಯಲ್ಲಿರುವ ಒಳನಡೆಗಳನ್ನು ಚಿತ್ರದಲ್ಲಿ ಅನಾವರಣ ಮಾಡಲಾಗಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಇದರ ಜತೆಗೆ ಈಗ ತುಳುನಾಡಿನ ಕಾರಣಿಕ ದೈವ ‘ಸತ್ಯದಪ್ಪೆ ಕಲ್ಲುರ್ಟಿ’ ಕಥಾನಕವು ತುಳುವಿನಲ್ಲಿ ಸಿನೆಮಾ ರೂಪ ಪಡೆಯುತ್ತಿದೆ ಎಂಬುದು ಇನ್ನೊಂದು ವಿಶೇಷ. ಕಾಮಿಡಿ, ಸಸ್ಪೆನ್ಸ್ ಮೂಡ್‌ನಲ್ಲಿರುವ ಕೋಸ್ಟಲ್‌ವುಡ್ ಗೆ ಯು ಟರ್ನ್ ನೀಡುವ ದಿಸೆಯಲ್ಲಿ ಈ ಸಿನೆಮಾವೂ ಈಗಾಗಲೇ ಸೌಂಡ್ ಮಾಡುತ್ತಿದೆ.
ಭಕ್ತ ಜನರ ರಕ್ಷೆ ಮತ್ತು ದುಷ್ಟ ಜನರ ಶಿಕ್ಷೆಗಾಗಿ ಕಲ್ಲುರ್ಟಿ ತಾಯಿ ಧರೆಗಿಳಿದು ಬರಲು ಕಾರಣವಾಗಿದೆ. ಈ ಕುರಿತ ತಾಯಿಯ ಹುಟ್ಟು, ಬೆಳೆದು ಬಂದ ಬಗೆ, ತುಳುನಾಡಿನಲ್ಲಿ ನೆಲೆಯಾದ ಕಥೆಯನ್ನು ಒಳಗೊಂಡಂತೆ ‘ಸತ್ಯದಪ್ಪೆ ಕಲ್ಲುರ್ಟಿ’ ಮೂಡಿಬರುತ್ತಿದೆ. ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿದ ಚಿತ್ರ ತಂಡ ಕೊನೆಯ ಹಂತದ ಶೂಟಿಂಗ್‌ನಲ್ಲಿದೆ. ಕಾರ್ ಸ್ಟ್ರೀಟ್‌ನಲ್ಲಿ ಈ ಹಿಂದೆ ನಾಗಮಂಡಲ ಆಯೋಜಿಸಿದ್ದ ಮಹೇಂದ್ರ ಕುಮಾರ್ ಅವರು, ಕಲ್ಲುರ್ಟಿಯ ಆರಾಧಕರು. ತಮ್ಮ ಮನೆಯ ಆವರಣದಲ್ಲಿ ಕಲ್ಲುರ್ಟಿ ದೈವದ ಗುಡಿಯನ್ನೂ ಅವರು ಕಟ್ಟಿಸಿದ್ದಾರೆ.
ಅಂದಹಾಗೆ, 5ನೇ ಶತಮಾನದ ಅವಧಿಯಲ್ಲಿ ತುಳುನಾಡಿನಲ್ಲಿ ನಡೆದ ಐತಿಹಾಸಿಕ ಕಥೆಯಾದ, ಅವಳಿ ವೀರ ಪುರುಷರಾದ ಕೋಟಿ ಚೆನ್ನಯರ ಕಾರಣಿಕ ಕಥೆಯನ್ನು ವಿಶುಕುಮಾರರು ‘ಕೋಟಿ ಚೆನ್ನಯ’ ಎಂಬ ಹೆಸರಿನಲ್ಲಿ ತುಳು ನಾಟಕ ಬರೆದಿದ್ದರು.
ಇದನ್ನು 1973ರಲ್ಲಿ ಕೆ. ಮುದ್ದು ಸುವರ್ಣ ಅವರು ಚಿತ್ರ ನಿರ್ಮಿಸಿದರು. ವಿಶು ಕುಮಾರ್ ಅವರೇ ಇದರ ನಿರ್ದೇಶನ ಮಾಡಿದ್ದರು. ಆ ಬಳಿಕ 2006ರಲ್ಲಿ ಆರ್. ಧನ್‌ರಾಜ್ ನಿರ್ಮಾಣದಲ್ಲಿ ಆನಂದ್ ಪಿ. ರಾಜು ನಿರ್ದೇಶನದಲ್ಲಿ ‘ಕೋಟಿ ಚೆನ್ನಯ’ ಚಿತ್ರ ಮತ್ತೊಮ್ಮೆ ತೆರೆಮೇಲೆ ಮೂಡಿಬಂತು. ಜತೆಗೆ ತುಳುನಾಡ ಸಿರಿ, ಬ್ರಹ್ಮಶ್ರೀ ನಾರಾಯಣ ಗುರು, ನೇಮದ ಬೂಳ್ಯ ಸಹಿತ ಹಲವು ಸಿನೆಮಾಗಳು ಐತಿಹಾಸಿಕ, ಜನಪದೀಯ ಗೆಟಪ್‌ನಲ್ಲಿ ಮೂಡಿಬಂದು ಸೌಂಡ್ ಮಾಡಿದ್ದವು ಎಂಬುದು ಉಲ್ಲೇಖನೀಯ.