ಮಡಿಕೇರಿ :ಸ್ವಚ್ಛ ಭಾರತ್ ಮಿಷನ್ ವತಿಯಿಂದ ಸ್ವಚ್ಛ ಮೇವ ಜಯತೆ ಕಾರ್ಯಕ್ರಮವು ಜಿಲ್ಲೆಯಲ್ಲಿ ಜೂ.10 ರಂದು ಚಾಲನೆಗೊಂಡಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತ್ಯಾಜ್ಯ ವಿಂಗಡಣೆ, ಜಲಾಮೃತ-ಜಲ ಸಂರಕ್ಷಣೆ, ಸ್ವಚ್ಛತೆ, ಶ್ರಮದಾನ, ಗಿಡ ನೆಡುವ ಕಾರ್ಯಕ್ರಮ ಹಾಗೂ ಶೌಚಾಲಯ ನಿರ್ವಹಣೆ ಮತ್ತು ವಿದ್ಯಾರ್ಥಿಗಳಿಗೆ ತ್ಯಾಜ್ಯದಿಂದ ವಿವಿಧ ಮಾದರಿಗಳ ತಯಾರಿ ಸ್ಪರ್ಧೆ ನಡೆಸುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜು.10 ರಂದು ಅಭಿಯಾನ ಸಮಾರೋಪ ಗೊಳ್ಳುತ್ತಿದ್ದರೂ ಜಿಲ್ಲೆಯಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಲಕ್ಷ್ಮಿಪ್ರಿಯ ಅವರು ತಿಳಿಸಿದ್ದಾರೆ.
ಸ್ವಚ್ಛ ಮೇವ ಜಯತೆ ಕಾರ್ಯಕ್ರಮದಡಿ ಕೊಡಗು ಜಿಲ್ಲಾ ಪಂಚಾಯತ್ ರಾಜ್ಯದಲ್ಲಿಯೇ ಪ್ರಪ್ರಥ ಮವಾಗಿ ಬೃಹತ್ ”ಕೊಡಗು ಪರಿವರ್ತನ ಮೇಳ-2019”ಸ್ವಚ್ಛತೆಯ ಸಾಧನೆಗೆ ಪರ್ಯಾಯ ಮಾರ್ಗಗಳ ಅನ್ವೇಷಣೆ ಮತ್ತು ಮಾರಾಟ ಮೇಳವನ್ನು ಕ್ಲೀನ್ ಕೂರ್ಗ ಇನಿಸಿಯೆಟಿವ್ (ಸಿಸಿಐ) ಕೊಡಗು ಹಾಗೂ ಎಲ್ಲ ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಜೂನಿಯರ್ ಕಾಲೇಜುನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಸಂಘ ಸಂಸ್ಥೆಗಳಾದ ಚೆಶೈರ್ ಹೋಮ್, ಗೋಣಿಕೊಪ್ಪ, ಸ್ವಸ್ಥ ಸಂಸ್ಥೆ, ಸುಂಟಿಕೊಪ್ಪ, ರಿಬಿಲ್ಡ್ ಕೊಡಗು, ಡೆಟ್ಯಾಕ್ ಸಲ್ಯೂಷನ್, ಬ್ಯಾಂಬೊ ಇಂಡಿಯಾ, ಶಕ್ತಿ/ ಮಹಿಳಾ ಮತ್ತು ಮಕ್ಕಳ ಆರೋಗ್ಯ ಉತ್ಪನ್ನಗಳ ಜಾಗೃತಿ ಸಂಸ್ಥೆ, ಪರಿಸರ ಪ್ರಿಯ ಚೆನ್ನಪಟ್ಟಣ ಗೊಂಬೆಗಳ ಮಳಿಗೆ, ಇ ತ್ಯಾಜ್ಯ ಸಂಗ್ರಹಣೆ ಸಂಸ್ಥೆ, ಅಗ್ರೀ ಪ್ಲೆಕ್ಸ್ ಸ್ವಾಭಾವಿಕ ಗೊಬ್ಬರ ತಯಾರಿಕೆ, ಬಯೋ ಇಂಧನ ಶಕ್ತಿ ಸಂಸ್ಥೆಗಳು ಕೊಡಗು ಪರಿವರ್ತನ ಮೇಳ 2019ರಲ್ಲಿ ಭಾಗವಹಿಸಿ ಪ್ಲಾಸ್ಟಿಕ್ ಬದಲಿಗೆ ಬಳಕೆ ಮಾಡಬಹುದಾದ ವಿವಿಧ ವಿನ್ಯಾಸಗಳ ಬಟ್ಟೆ ಬ್ಯಾಗ್‌ಗಳು, ಕಾಂಪೋಸ್ಟ್ ತಯಾರಿಕೆಯ ವಿವಿಧ ವಿಧಾನಗಳು, ಮಹಿಳಾ ಮತ್ತು ಮಕ್ಕಳ ಆರೋಗ್ಯ ಉತ್ಪನ್ನಗಳ ಕುರಿತು ಜಾಗೃತಿ, ಪೇಪರ್ ಉತ್ಪನ್ನಗಳು ಹಾಗೂ ಎಲೆಯಿಂದ ತಯಾರಿಸಿದ ಉತ್ಪನ್ನಗಳು, ಪರಿಸರ ಪ್ರಿಯ ಉತ್ಪನ್ನಗಳು, ಕಡಿಮೆ ಇಂದನ ಶಕ್ತಿ ಹೆಚ್ಚು ಸಾಮರ್ಥ್ಯದ ಒಲೆಗಳು, ಬಯೋಗ್ಯಾಸ್, ಸೋಲಾರ್, ಉತ್ಪನ್ನಗಳ ಕುರಿತು ಜಾಗೃತಿ, ನೀರಿನ ಸಂರಕ್ಷಣೆ ಹಾಗೂ ಮಳೆ ನೀರಿನ ಕೊಯ್ಲು ಕುರಿತು ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಕೊಡಗು ಪರಿವರ್ತನ ಮೇಳದಲ್ಲಿ ಇ-ತ್ಯಾಜ್ಯವನ್ನು ಸಂಗ್ರಹಿಸಲಾಗುವುದು. ಸಾರ್ವಜನಿಕರು ಇ ತ್ಯಾಜ್ಯವನ್ನು ತಂದು ಕೊಡಲು ಸಿಇಒ ವಿನಂತಿ ಮಾಡಿದ್ದಾರೆ. ಇ-ತ್ಯಾಜ್ಯ (ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳು) ವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ, ಮೇಳ ನಡೆಯುವ ಸ್ಥಳದಲ್ಲಿ ಇ-ತ್ಯಾಜ್ಯ ಹಾಕಲು ಇ-ಕೇರ್ ಬುಟ್ಟಿಗಳನ್ನು ಅಳವಡಿಸಲಾಗಿದೆ.
ಸಾರ್ವಜನಿಕರು ಬೇಡವಾದ ಇ-ತ್ಯಾಜ್ಯ ವನ್ನು ಇಲ್ಲಿ ನೀಡಬಹುದು. ನೀಡಿದ ಇ-ತ್ಯಾಜ್ಯದಿಂದ ಅರಣ್ಯ ಬೆಳೆಸಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬದಲಿ ವ್ಯವಸ್ಥೆ
ಈ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಪ್ರತಿನಿಧಿಗಳು, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಸಾರ್ವಜನಿಕರು, ವರ್ತಕರು, ಹೋಟೆಲ್, ಹೊಂಸ್ಟೇ, ರೆಸಾರ್ಟ್, ಅಂಗಡಿ ಹಾಗೂ ಸಂಕೀರ್ಣಗಳ ಮಾಲಕರು, ಕಲ್ಯಾಣ ಮಂಟಪಗಳು, ದೇವಸ್ಥಾನ ಸಮಿತಿಗಳು, ಶಾಲಾ, ಕಾಲೇಜು, ಅಧ್ಯಾಪಕರು/ ವಿದ್ಯಾರ್ಥಿಗಳು, ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಿಬಂದಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸರ್ವರೂ ಭಾಗವಹಿಸಿ ಪ್ಲಾಸ್ಟಿಕ್ ಅನಾಹುತದ ಹಾಗೂ ಬದಲಿ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯುವಂತೆ ಜಿಲ್ಲಾ ಪಂಚಾಯತ್ ಸಿಇಒ ಕೆ.ಲಕ್ಷ್ಮಿಪ್ರಿಯ ಅವರು ಕೋರಿದ್ದಾರೆ.