ಕಲಬುರಗಿ: ಮನರಂಜನೆ ಕೊಡುವ ಚಲನಚಿತ್ರಗಳ ಹಾಡುಗಳಿಗಿಂತ ಬದುಕಿನ ಪಾಠಗಳಂತಿರುವ ಮನೋವಿಕಾಸ ಮಾಡುವ ಜನಪದರದ ಹಾಡುಗಳು ಸಾರ್ವಕಾಲಿಕ ಶ್ರೇಷ್ಠ ಎಂದು ಖ್ಯಾತ ಗಾಯಕ, ಚಿತ್ರನಟ ಗುರುರಾಜ ಹೊಸಕೋಟೆ ಪ್ರತಿಪಾದಿಸಿದರು.
ನಗರದ ಉದನೂರ ರಸ್ತೆಯ ಅಪ್ಪಾಜಿ ಗುರುಕುಲ ಆಂಗ್ಲಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನಪದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಲನಚಿತ್ರಗಳಿಂದ ದಿಢೀರನೆ ಖ್ಯಾತಿ ಗಳಿಸಬಹುದು ನಿಜ. ಆದರೆ, ನೆಮ್ಮದಿ ಇರುವುದಿಲ್ಲ.
ಜನಪದ ಹಾಡುಗಳಲ್ಲಿ ಜೀವನ ಇದೆ. ಜನಪದ ಹಾಡುಗಳೇ ನನಗಿಷ್ಟವಾದರೂ ಚಲನಚಿತ್ರಗಳನ್ನು ಹಾಡುವ ಅವಕಾಶ ಲಭಿಸಿದ್ದರಿಂದ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ. ಕನ್ನಡದ ಜನಪ್ರಿಯ ನಟರ ಸಿನಿಮಾಗಳಲ್ಲಿ ಹಾಡುವ, ಅಭಿನಯಿಸುವ ಅವಕಾಶ ಸಿಕ್ಕಿತು. ಹೀಗಾಗಿ ಜನರಿಗೆ ರಂಜನೆ ಕೊಡಲು ಮುಂದಾದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಂವಾದ ಸಮಾರಂಭದ ಮುಖ್ಯಅತಿಥಿಗಳಾಗಿ ಆದಿ ಬಣಜಿಗರ ಸಂಘದ ಜಿಲ್ಲಾಧ್ಯಕ್ಷ, ಉದ್ಯಮಿ ರಾಜು ನವದಿ, ಜಯಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಖ್ಯಾತ ಪ್ರವಚನಕಾರ ಶಿವಶಂಕರ ಬಿರಾದಾರ, ಸಮಾಜ ಸೇವಕರಾದ ಶಿವಾಜಿ, ಆನಂದ ಲೇಂಗಟಿ ಹಾಜರಿದ್ದರು.
ಅಪ್ಪಾಜಿ ಗುರು ಕುಲ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷೆ ಭಾಗಮ್ಮ ಉದನೂರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ರಾಜಕುಮಾರ ಉದನೂರ ಪ್ರಾಸ್ತಾವಿಕ ಮಾತನಾಡಿದರು. ಭಾರತಿ ನಿರೂಪಿಸಿದರು, ಮೇಘಾ ಪ್ರಾರ್ಥಿಸಿದರು, ರೇಣುಕಾ ವಂದಿಸಿದರು. ರೂಪಾ, ಶಿಲ್ಪಾ, ರಜಿತಾ, ವಾಣಿ, ನಿಷಾ, ಸೃಷ್ಟಿ ,ಅಭಿಷೇಕ, ಲಕ್ಷ್ಮೀ, ಕಾಳಿಕಾ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.