ಸಿದ್ದಾಪುರ: ಜಾನಪದ ಕಲಾವಿದರು ಅನಕ್ಷರಸ್ಥರಿರಬಹುದು. ಆದರೆ ಅವರು ಅವಿದ್ಯಾವಂತರಲ್ಲ. ನಮ್ಮ ಪರಂಪರೆಯ
ಭಾಗವಾಗಿ ಬಂದ ಹಸೆ ಚಿತ್ತಾರವನ್ನು ಬಿಡಿಸಿದ ಪ್ರತಿಯೊಬ್ಬ ಕಲಾವಿದ ಕೂಡ ಅದರಲ್ಲಿ ತಮ್ಮ ಬದುಕಿನ ವಾಸ್ತವಗಳನ್ನು,
ಕನಸುಗಳನ್ನು ಸೆರೆ ಹಿಡಿದಿಟ್ಟಿದ್ದಾರೆ ಎಂದು ಹಸೆ ಚಿತ್ತಾರದ ಕಲಾವಿದ ಚಂದ್ರಶೇಖರ ಶಿರವಂತೆ ಹೇಳಿದರು.
ಅವರು ಎಂಜಿಸಿ ಮತ್ತು ಜಿಎಚ್‌ಡಿ ಮಹಾವಿದ್ಯಾಲಯದ ಎನ್‌ಎಸ್ ಎಸ್ ಘಟಕದ ವಾರ್ಷಿಕ ಸಮಾರೋಪ ಸಮಾರಂಭದ ಅತಿಥಿಯಾಗಿ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಾರ್ಷಿಕ ಸಂಚಿಕೆ ಹೊಂಗನಸು ಬಿಡುಗಡೆ ಮಾಡಿ ಮಾತನಾಡಿದರು.
ಜೀವನದಲ್ಲಿ ಎದುರಾಗುವ ಸಂಘರ್ಷ ಮತ್ತು ಸೌಹಾರ್ದತೆಯನ್ನು ಪ್ರತಿ ಎಳೆಯಲ್ಲಿ, ತನ್ನ ನಿಲುವನ್ನು ಹೇಳುವ, ಇನ್ನೊಬ್ಬರಿಗೆ ಅದನ್ನು ದಾಟಿಸುವ ಕ್ರಿಯೆಯಾ ಗಿ ನಿಲಿ ಕೊಚ್ಚುವುದು ಇಲ್ಲಿ ಗಮನಿಸಬೇಕು. ಚಿತ್ರ ಒಳಗೊಳ್ಳುವ ಪ್ರತಿ ಸಂಗತಿಗೂ ನಿರ್ದಿಷ್ಟವಾದ ಅರ್ಥವಿದೆ. ಪ್ರತಿ ಹಸೆ ಚಿತ್ತಾರ ಕೇವಲ ಒಂದು ಚಿತ್ರ ಮಾತ್ರವಲ್ಲ ಅದೊಂದು ಜಾನಪದ ಕಾವ್ಯ. ಆದರೆ ಇದನ್ನು ಗುರುತಿಸಿ ಮುನ್ನಲೆಗೆ ತರುವ ಕೆಲಸ ಇನ್ನೂ ಸರಿಯಾಗಿ ಆಗಿಲ್ಲ ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ವಿಠ್ಠಲ ಭಂಡಾರಿ, ಪ್ರೊ| ಎಂ.ಎಸ್. ವಿನಾಯಕ ಮಾತನಾಡಿದರು. ಪ್ರಾಚಾರ್ಯರಾದ ಜಯಂತಿ ಶಾನಭಾಗ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳಾದ ಪೂರ್ಣಿಮಾ ಭಟ್, ಗಣೇಶ ಶೇಟ್, ಪ್ರೀತಿ ನಾಯ್ಕ, ಸುಬ್ರಹ್ಮಣ್ಯ ತಮ್ಮ ಅನುಭವ ಹಂಚಿಕೊಂಡರು. ಪವಿತ್ರಾ ಹೆಗಡೆ ವರದಿವಾಚಿಸಿದರು. ಶೀನಿಧಿ ಸಂಗಡಿಗರು ಎನ್.ಎಸ್.ಎಸ್ ಗೀತೆ ಹಾಡಿದರು. ಪೃಥ್ವಿರಾಜ್ ವಂದಿಸಿದರು.
ಭವ್ಯಾ ಹೆಗಡೆ ನಿರೂಪಿಸಿದರು. ನಂತರ ಬಾಲ್ಯ ವಿವಾಹದ ಅಪಾಯವನ್ನು ಹೇಳುವ ಬೀದಿ ನಾಟಕವನ್ನು ವಿದ್ಯಾರ್ಥಿ ಸ್ವಯಂ ಸೇವಕರು ಪ್ರದರ್ಶಿಸಿದರು.