ವಿಜಯಪುರ: ಖ್ಯಾತ ಕಲಾವಿದೆ ಮಂಜಮ್ಮ ಜೋಗತಿ ಅಧ್ಯಕ್ಷರಾಗಿರುವ ಕರ್ನಾಟಕ ಜಾನಪದ ಅಕಾಡೆಮಿ 2021ನೇ ಸಾಲಿನ ಪ್ರಶಸ್ತಿಯನ್ನು ಪ್ರಕಟಿಸಿದ್ದು ವಿಜಯಪುರ ಜಿಲ್ಲೆಯ ಪೀರಾಪುರದ ಭಜನಾ ಕಲಾವಿದ ನಾಗಲಿಂಗಪ್ಪ ಸಿದ್ರಾಮಪ್ಪ ಕಂಬಾರ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ತಾಳಿಕೋಟೆ ತಾಲೂಕಿನ ಪೀರಾಪುರದ ನಾಗಲಿಂಗಪ್ಪ ಸಿದ್ರಾಮಪ್ಪ ಕಂಬಾರ ಅವರು ಕಳೆದ ಮೂರು ದಶಕಗಳಿಂದ ಭಜನಾ ಸಂಘದಲ್ಲಿ ಸಕ್ರೀಯವಾಗಿದ್ದಾರೆ. ಹುಟ್ಟೂರಲ್ಲಿ ಸಂಗಮೇಶ್ವರ ಭಜನಾ ಸಂಘ ಕಟ್ಟಿಕೊಂಡು ನಾಡಿನ ಹಲವೆಡೆ ಭಜನಾ ಕಾರ್ಯಕ್ರಮ ನೀಡಿ ತಮ್ಮಲ್ಲಿರುವ ಕಲಾಪ್ರತಿಭೆಗೆ ವಿವಿಧ ಸಂಘ-ಸಂಸ್ಥೆಗಳ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ಭಜನಾ ಸಂಘ ಕಟ್ಟಿಕೊಂಡು ನಾಡಿನ ಹಲವು ಜಿಲ್ಲೆಗಳಲ್ಲಿ ಭಜನಾ ಪ್ರದರ್ಶನ ಸೇವೆ ನೀಡಿದ್ದೇನೆ. ಇದೀಗ ಸರ್ಕಾರ ಜಾನಪದ ಅಕಾಡೆಮಿ ಮೂಲಕ ನನಗೆ ವಾರ್ಷಿಕ ಗೌರವ ಪ್ರಶಸ್ತಿ ನೀಡಿರುವುದು ನನ್ನ ಸೇವೆಗೆ ಸಾರ್ಥಕತೆ ತಂದಿದೆ ಎಂದು ನಾಗಲಿಂಗಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಎಲೆ ಮರೆಯ ಕಾಯಿಯಂತೆ ತಮ್ಮ ಪಾಡಿಗೆ ತಾವು ಭಜನಾ ಸಂಘಟನೆ ಮೂಲಕ ಕಲಾ ಪ್ರದರ್ಶನ ಮಾಡುತ್ತಿರುವ ಕಂಬಾರ ಅವರ ಪ್ರತಿಭೆಗೆ ತಕ್ಕಂತೆ ಅಕಾಡೆಮಿ ಪ್ರಶಸ್ತಿ ನೀಡಿದೆ. ಅವರಲ್ಲಿರುವ ಪ್ರತಿಭೆಗೆ ರಾಜ್ಯದ ಹಲವು ಸಂಘಟನೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿದ್ದರೂ ಎಂದೂ ಅವರು ಬೀಗಿದವರಲ್ಲ. ಇದೀಗ ಅಕಾಡೆಮಿ ಅವರಿಗೆ ನೀಡಿರುವ ಪ್ರಶಸ್ತಿ ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ತಿಳಿಸಿದ್ದಾರೆ.
ಕಳೆದ 30 ವರ್ಷಗಳಿಂದ ಭಜನಾ ಸಂಘ ಕಟ್ಟಿಕೊಂಡು ನಾಡಿನ ಹಲವು ಜಿಲ್ಲೆಗಳಲ್ಲಿ ಭಜನಾ ಪ್ರದರ್ಶನ ಸೇವೆ ನೀಡಿದ್ದೇನೆ. ಇದೀಗ ಸರ್ಕಾರ ಜಾನಪದ ಅಕಾಡೆಮಿ ಮೂಲಕ ನನಗೆ ವಾರ್ಷಿಕ ಗೌರವ ಪ್ರಶಸ್ತಿ ನೀಡಿರುವುದು ನನ್ನ ಸೇವೆಗೆ ಸಾರ್ಥಕತೆ ತಂದಿದೆ. -ನಾಗಲಿಂಗಪ್ಪ ಕಂಬಾರ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ